ಬೆಂಗಳೂರು: ಸಂಪುಟ ವಿಸ್ತರಣೆಯಾಗಲಿದೆಯೇ ಹೊರತು ಸಂಪುಟ ಪುನಾರಚನೆ ಅಲ್ಲ. ಹಾಲಿ ಇರುವ ಸಚಿವರ ಖಾತೆಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು. ಸಿಎಂ ಯಡಿಯೂರಪ್ಪ ಅವರನ್ನು ಬುಧವಾರ ಭೇಟಿಯಾದ ನೂತನ ಶಾಸಕ ರಾದ ರಮೇಶ್ ಜಾರಕಿಹೊಳಿ, ಎಸ್.ಟಿ. ಸೋಮಶೇಖರ್, ಕೆ.ಗೋಪಾಲಯ್ಯ, ಡಾ.ಕೆ.ಸುಧಾಕರ್, ಬೈರತಿ ಬಸವರಾಜು, ಅನರ್ಹ ಶಾಸಕ ಪ್ರತಾಪಗೌಡ ಪಾಟೀಲ್ ಇತರರು ಬಳಿಕ ಅಶೋಕ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ನಂತರ ಪ್ರತಿಕ್ರಿಯಿಸಿದ ಆರ್.ಅಶೋಕ್, ಹಾಲಿ ಸಚಿವರಿಗೆ ಹೆಚ್ಚುವರಿಯಾಗಿ ನೀಡಿದ್ದ ಖಾತೆಗಳನ್ನಷ್ಟೇ ಹೊಸ ಸಚಿವರಿಗೆ ನೀಡಲಾಗುತ್ತದೆ. ಮುಖ್ಯಮಂತ್ರಿಗಳು ಯಾವೆಲ್ಲಾ ಕ್ಷೇತ್ರಗಳಿಗೆ ಪ್ರಚಾರಕ್ಕೆ ಹೋಗಿ ಭರವಸೆ ನೀಡಿದ್ದಾರೋ, ಆ ಭರವಸೆಗಳನ್ನು ಈಡೇರಿಸಲಿದ್ದಾರೆ ಎಂದರು. ಆದರೆ, ಉಪಮುಖ್ಯಮಂತ್ರಿ ಸ್ಥಾನ ರದ್ದುಪಡಿಸುವ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದರು.
ಬಳಿಕ ಮಾತನಾಡಿದ ಡಾ.ಕೆ.ಸುಧಾಕರ್, ಮೊದಲ ಹಂತದಲ್ಲಿ ಉಪಚುನಾವಣೆಯಲ್ಲಿ ಜಯಗಳಿಸಿರುವ 11 ಮಂದಿಗೆ ಮಾತ್ರ ಸಚಿವ ಸ್ಥಾನ ನೀಡುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ. ಉಳಿದವರ ಬಗ್ಗೆ ಪಕ್ಷದ ವರಿಷ್ಠರ ಜತೆ ಚರ್ಚಿಸಿದ ಬಳಿಕ ತೀರ್ಮಾನ ಕೈಗೊಳ್ಳಲಿದ್ದಾರೆ. ಉಪಮುಖ್ಯಮಂತ್ರಿ ಹುದ್ದೆ ಬಗ್ಗೆ ಮಾತನಾಡುವಷ್ಟು ನಾನು ದೊಡ್ಡವನಲ್ಲ ಎಂದು ತಿಳಿಸಿದರು.
ನಮಗೆ ಬಿಎಸ್‌ವೈ ಹೈಕಮಾಂಡ್: “ನಾನು ಚುನಾವಣೆಯಲ್ಲಿ ಸೋತಿರಬಹುದು. ಆದರೆ, ನಮ್ಮ ಉದ್ದೇಶ ಗೆದ್ದಿದೆ. ನಾವು ಯಾವುದೇ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿಲ್ಲ. ನಮಗೆ ಬಿಎಸ್‌ವೈ ಅವರೇ ಹೈಕಮಾಂಡ್ ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರು ಬಾರಿ ಪಕ್ಷಾಂತರ ಮಾಡಿದ್ದಾರೆ.
ಮಾಜಿ ಸ್ಪೀಕರ್ ರಮೇಶ್ ಕುಮಾರ್ 9 ಬಾರಿ ಪಕ್ಷ ಬದಲಿಸಿದ್ದಾರೆ. ಅವರದು ಪಕ್ಷಾಂತರವಲ್ಲದೇ ಮತ್ತೇನು ಎಂದು ಪ್ರಶ್ನಿಸಿದರು. “ಕಾಂಗ್ರೆಸ್ ಪಕ್ಷವನ್ನು ಮುಳುಗಿಸುವವರು ಮುಳುಗುವ ಮುನ್ನ ನಾಯಕತ್ವದಿಂದ ಹೊರ ಹೋಗಿದ್ದು ಕಾಂಗ್ರೆಸ್ ಭಾಗ್ಯ. ನನಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಬಗ್ಗೆ ಗೌರವವಿದೆ. ಆದರೆ, ಆ ಪಕ್ಷದ ನಾಯಕತ್ವದ ಬಗ್ಗೆ ಬೇಸರವಿದೆ’ ಎಂದು ಹೇಳಿದರು.
ಸಿದ್ದರಾಮಯ್ಯ ಮತ್ತು ನಾನು ಅಣ್ಣ- ತಮ್ಮ ಇದ್ದಂತೆ. ನಾವಿಬ್ಬರೂ ಕುರುಬ ಸಮುದಾಯದವರು. ಯಾವತ್ತೂ ತಮ್ಮ, ಅಣ್ಣನನ್ನು ಬೆಳೆಯೋಕೆ ಬಿಡುವುದಿಲ್ಲ. ಸಿದ್ದರಾಮಯ್ಯ ಜತೆಗೆ ದಾಯಾದಿ ಕಲಹವಿದ್ದಿದ್ದರೆ ತೊಂದರೆಯಾಗು ತ್ತಿರಲಿಲ್ಲ. ಆದರೆ, ಇದು ಅಣ್ಣ- ತಮ್ಮನ ಕಿತ್ತಾಟ.
-ಎಚ್.ವಿಶ್ವನಾಥ್, ಮಾಜಿ ಸಚಿವ