Advertisement

Congress ಮನೆ ಖಾಲಿಯಾಗಿದೆ: ಜೆಡಿಎಸ್‌ ರಾಜ್ಯಾಧ್ಯಕ್ಷ C. M. Ibrahim

09:49 PM Apr 18, 2023 | Team Udayavani |

ಬೆಂಗಳೂರು: “ಈ ಸಲದ ವಿಧಾನಸಭೆ ಚುನಾವಣೆಯಲ್ಲಿ 1994ರ ಫ‌ಲಿತಾಂಶ ಮರುಕಳಿಸಲಿದ್ದು, ಜೆಡಿಎಸ್‌ಗೆ ಮರು ಜನ್ಮ ಸಿಗಲಿದೆ. ಕಾಂಗ್ರೆಸ್‌ ಮನೆ ಖಾಲಿಯಾಗಿದ್ದು, ಬಿಜೆಪಿ ರಾಜ್ಯದಲ್ಲಿ ಯಾವತ್ತೂ ಪೂರ್ಣ ಬಹುಮತ ಪಡೆದಿಲ್ಲ, ಈ ಬಾರಿಯೂ ಪಡೆಯುವುದಿಲ್ಲ.’

Advertisement

ಇದು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಅವರ ಮಾತುಗಳು. ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ “ಉದಯವಾಣಿ’ಗೆ ಸಂದರ್ಶನ ನೀಡಿದ ಅವರು, ಜೆಡಿಎಸ್‌ ಕಥೆ ಮುಗಿದೇ ಹೋಯಿತು ಎಂಬುವವರಿಗೆ ಈಗ ಶಕ್ತಿ ಏನು ಎಂಬುದು ಅರ್ಥವಾಗುತ್ತಿದೆ. ಫ‌ಲಿತಾಂಶದ ನಂತರ ಎರಡೂ ಪಕ್ಷಗಳ ಭ್ರಮೆ ಕಳಚಲಿದೆ ನೋಡ್ತಾ ಇರಿ ಎಂದು ಹೇಳಿದರು.

ಜೆಡಿಎಸ್‌ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲಿದೆಯಾ?
ಖಂಡಿತವಾಗಿಯೂ ಬರಲಿದೆ. ರಾಜ್ಯದಲ್ಲಿ ನಾನು ಅನೇಕ ಕ್ಷೇತ್ರಗಳಲ್ಲಿ ಪ್ರವಾಸ ಮಾಡಿದ್ದೇನೆ. ಮತದಾರರ ಮನದಾಳ ಅರಿತಿದ್ದೇನೆ. 1994ರಲ್ಲಿ ಯಾವ ಫ‌ಲಿತಾಂಶ ಬಂದಿತ್ತೋ ಅದು ಮರುಕಳಿಸಲಿದೆ ಬರೆದಿಟ್ಟುಕೊಳ್ಳಿ. ಆಗಲೂ ನಾನೇ ರಾಜ್ಯಾಧ್ಯಕ್ಷ ಆಗಿದ್ದೆ, ಈಗಲೂ ನಾನೇ ರಾಜ್ಯಾಧ್ಯಕ್ಷ ಆಗಿದ್ದೇನೆ.

ಕಾಂಗ್ರೆಸ್‌ ಮತ್ತು ಬಿಜೆಪಿ ಈಗಾಗಲೇ 130, 150 ಸ್ಥಾನ ನಮ್ಮದೇ ಎಂದು ಹೇಳುತ್ತಿವೆಯಲ್ಲಾ?
ಕಾಂಗ್ರೆಸ್‌ ಮನೆ ಖಾಲಿಯಾಗಿದೆ, ಬೇರೆ ಪಕ್ಷದವರಿಗಾಗಿ ಕಾಯುತ್ತಾ ಕುಳಿತಿದ್ದಾರೆ. ಬಿಜೆಪಿಯವರು ರಾಜ್ಯದಲ್ಲಿ ಎಂದೂ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬಂದಿಲ್ಲ. ಮೇಲ್ನೋಟಕ್ಕೆ ಏನೇ ಹೇಳಿಕೊಂಡರೂ ವಾಸ್ತವ ಅವರಿಗೂ ಗೊತ್ತಿದೆ.

ಹಾಗಾದರೆ ಜೆಡಿಎಸ್‌ ಎಷ್ಟು ಸ್ಥಾನ ಗಳಿಸಲಿದೆ?
ನಾವು ಅಧಿಕಾರಕ್ಕೆ ಬರಲಿದ್ದೇವೆ. ಜಲಧಾರೆ ಹಾಗೂ ಪಂಚರತ್ನ ಯಾತ್ರೆಗೆ ಉತ್ತಮ ಸ್ಪಂದನೆ ದೊರೆತಿದೆ. ವರ್ಷಕ್ಕೆ ಐದು ಸಿಲಿಂಡರ್‌, ಗರ್ಭಿಣಿ ತಾಯಂದಿರಿಗೆ ಪ್ರತಿ ತಿಂಗಳು ಆರು ಸಾವಿರ ರೂ. ನಂತೆ ಆರು ತಿಂಗಳು ಭತ್ಯೆ, ಸ್ತ್ರೀ ಶಕ್ತಿ ಸಂಘಗಳ ಸಾಲ ಮನ್ನಾ ಭರವಸೆ ನಮ್ಮ ಕೈ ಹಿಡಿಯಲಿವೆ.

Advertisement

ಜೆಡಿಎಸ್‌ಗೂ ಅಭ್ಯರ್ಥಿಗಳ ಕೊರತೆ ಇದೆಯಲ್ಲಾ?
ಹಾಗೇನಿಲ್ಲ. ಜನತಾ ಪರಿವಾರದಿಂದ ಹೋಗಿದ್ದವರು ವಾಪಸ್‌ ಆಗುತ್ತಿದ್ದಾರೆ. ಜೆಡಿಎಸ್‌ ಕಥೆ ಮುಗಿದೇ ಹೋಯಿತು ಎಂಬವರಿಗೆ ಇದೀಗ ಶಕ್ತಿ ಅರ್ಥವಾಗುತ್ತಿದೆ.

ರಾಜ್ಯದಲ್ಲಿ ಮತ್ತೆ ಅತಂತ್ರ ಪರಿಸ್ಥಿತಿ ನಿರ್ಮಾಣವಾದರೆ, ನಿಮ್ಮ ಪಕ್ಷದ ನಿಲುವು ಏನು?
ಆ ಪರಿಸ್ಥಿತಿ ಖಂಡಿತ ಬರುವುದಿಲ್ಲ ಎಂಬ ನಂಬಿಕೆ ಇದೆ. ರಾಜ್ಯದ ಜನತೆ ಜೆಡಿಎಸ್‌ಗೆ ಆಶೀರ್ವಾದ ಮಾಡಲಿದ್ದು ಎಚ್‌.ಡಿ.ಕುಮಾರಸ್ವಾಮಿಯವರು ಮತ್ತೆ ಮುಖ್ಯಮಂತ್ರಿಯಾಗುವುದು ಖಚಿತ. ನಾವು ಎರಡೂ ರಾಷ್ಟ್ರೀಯ ಪಕ್ಷಗಳಿಂದ ಅಂತರ ಕಾಯ್ದುಕೊಂಡು ಪ್ರಾದೇಶಿಕ ಪಕ್ಷವಾಗಿ ನಾಡಿನ ಜನತೆಯ ಅಸ್ಮಿತೆಯಾಗಿ ಚುನಾವಣಾ ಹೋರಾಟ ನಡೆಸುತ್ತಿದ್ದೇವೆ.

ಜೆಡಿಎಸ್‌ ಶಕ್ತಿ ಹಳೇ ಮೈಸೂರು ಭಾಗದಲ್ಲಿ ಮಾತ್ರ ಅಂತಾರಲ್ಲಾ?
ಹಾಗಿದ್ದರೆ ಗುರು ಪಾಟೀಲ್‌ ಶಿರವಾಳ, ದೊಡ್ಡಪ್ಪಗೌಡ ಪಾಟೀಲ್‌ ನರಿಬೋಳ್‌, ಎ.ಬಿ.ಮಾಲಕರೆಡ್ಡಿ ಅವರೆಲ್ಲಾ ಜೆಡಿಎಸ್‌ ಸೇರುತ್ತಿದ್ದರಾ?

ಮುಸ್ಲಿಂ ಸಮುದಾಯ ಜೆಡಿಎಸ್‌ ಜತೆಗಿದೆಯಾ?
ಖಂಡಿತ. ಎಚ್‌.ಡಿ.ದೇವೇಗೌಡರು ಮುಖ್ಯಮಂತ್ರಿಯಾಗಿ, ಪ್ರಧಾನಮಂತ್ರಿಯಾಗಿ ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ಸಹಿತ ಅನೇಕ ಸೌಲಭ್ಯ ನೀಡಿದ್ದಾರೆ. ಎಚ್‌.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿ ಒಳ್ಳೆಯ ಕಾರ್ಯಕ್ರಮ ನೀಡಿದ್ದಾರೆ. ಮುಸ್ಲಿಂ ಸಮುದಾಯ ಸೇರಿ ಅಲ್ಪಸಂಖ್ಯಾತರು ಜೆಡಿಎಸ್‌ ಜತೆ ನಿಲ್ಲಲಿದ್ದಾರೆ.

ಮುಸ್ಲಿಂ ಸಮುದಾಯ ಯಾವತ್ತೂ ನಮ್ಮ ಜತೆಗೇ ಎಂದು ಕಾಂಗ್ರೆಸ್‌ ನಾಯಕರು ಹೇಳುತ್ತಾರಲ್ಲಾ?
ಅದು ಅವರ ಭ್ರಮೆ. ಇವರಿಗೆ ಮುಸ್ಲಿಂ ಸಮುದಾಯದ ಮತ ಬರೆದುಕೊಟ್ಟಿಲ್ಲ. ಇವರು ಗೆಲ್ಲುವ ಅವಕಾಶ ಇರುವ ಎಷ್ಟು ಕಡೆ ಮುಸ್ಲಿಂ ಸಮುದಾಯಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಕಾಂಗ್ರೆಸ್‌ನಲ್ಲಿ ಪ್ರತಿಪಕ್ಷ ನಾಯಕ, ರಾಜ್ಯಾಧ್ಯಕ್ಷ ಹುದ್ದೆ ಮುಸ್ಲಿಮರಿಗೆ ಕೊಟ್ಟಿದ್ದಾರಾ?

ನಾನು ಐದೂವರೆ ತಿಂಗಳ ಹಿಂದೆಯೇ ಜೆಡಿಎಸ್‌ ಕಚೇರಿ ತುಂಬಾ ಚಿಕ್ಕದಾಗುತ್ತದೆ. ಮುಂದಿನ ದಿನಗಳಲ್ಲಿ ನಾಯಕರಿಂದ ತುಂಬಿ ತುಳುಕಲಿದೆ ಎಂದು ಹೇಳಿದ್ದೆ. ಆ ಮಾತು ನಿಜವಾಗಿದೆ. ಅದೇ ರೀತಿ ಜೆಡಿಎಸ್‌ ಅಧಿಕಾರಕ್ಕೆ ಬರಲಿದೆ ಎಂಬ ಮಾತೂ ನಿಜವಾಗಲಿದೆ.
– ಸಿ.ಎಂ.ಇಬ್ರಾಹಿಂ, ಜೆಡಿಎಸ್‌ ರಾಜ್ಯಾಧ್ಯಕ್ಷ

-ಎಸ್‌.ಲಕ್ಷ್ಮೀನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next