ಬೆಂಗಳೂರು : ಲೋಕೋಪಯೋಗಿ ಸಚಿವರಾದ ಸಿ.ಸಿ. ಪಾಟೀಲ್ ಅವರು ಇಂದು ವಿಡಿಯೋ ಕಾನ್ಫರೆನ್ಸ್ ನಡೆಸುವ ಮೂಲಕ ಗದಗ ಜಿಲ್ಲೆಯ 9.10, 11, 12 ತರಗತಿಗಳ ಪುನರಾರಂಭಕ್ಕೆ ಚಾಲನೆ ನೀಡಿದ್ದಲ್ಲದೆ, ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ಸರ್ವ ರೀತಿಯಲ್ಲೂ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕೆಂದು ಶಿಕ್ಷಕರಿಗೆ ಮತ್ತು ಶಿಕ್ಷಣ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೆಂಗಳೂರಿನಿಂದ ಖುದ್ದಾಗಿ ಗದಗ ಜಿಲ್ಲೆಯ ಕೆಲವು ಶಿಕ್ಷಕರೊಂದಿಗೆ ಮತ್ತು ಶಿಕ್ಷಣ ಅಧಿಕಾರಿಗಳೊಂದಿಗೆ, ಆರೋಗ್ಯ ಅಧಿಕಾರಿಗಳೊಂದಿಗೆ ಮಾತನಾಡಿದ ಸಚಿವರು, ವಿದ್ಯಾರ್ಥಿಗಳ ಉಜ್ವಲ ಭವಿಷ್ಯದ ದೃಷ್ಟಿಯಿಂದ ಈಗ ತರಗತಿಗಳನ್ನು ಪ್ರಾರಂಭಿಸಲಾಗುತ್ತಿದೆ, ಆದರೆ ಕೋವಿಡ್ ನಂತಹ ಸೋಂಕಿನ ಅಪಾಯದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಆರೋಗ್ಯದ ಹಿತ ರಕ್ಷಣೆಗೆ ಹೆಚ್ಚಿನ ಕಾಳಜಿ ವಹಿಸಬೇಕು, ವಿದ್ಯಾರ್ಥಿಗಳಲ್ಲಿ ಮತ್ತು ಪಾಲಕರಲ್ಲಿ ಧೈರ್ಯ ತುಂಬುವ ಕೆಲಸ ಮಾಡಬೇಕೆಂದು ಕಿವಿಮಾತು ಹೇಳಿದರು.
ಶಿಕ್ಷಣದೊಂದಿಗೆ ಮಕ್ಕಳ ಯೋಗಕ್ಷೇಮವೂ ಮುಖ್ಯ. ಆದ್ದರಿಂದ ಶಾಲೆಯ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಮತ್ತು ಕೋವಿಡ್ ಸೋಂಕು ತಪಾಸಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಅನಾರೋಗ್ಯದ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಆರೋಗ್ಯ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ಉಚಿತ ಚಿಕಿತ್ಸೆ ಮತ್ತು ತಪಾಸಣಾ ಸೌಲಭ್ಯವನ್ನು ಕಲ್ಪಿಸಬೇಕು ಎಂದು ಶಿಕ್ಷಕರಿಗೆ ಮತ್ತು ಶಿಕ್ಷಣಾಧಿಕಾರಿಗಳಿಗೆ ಶ್ರೀ ಸಿ.ಸಿ. ಪಾಟೀಲರು ತಾಕೀತು ಮಾಡಿದರು.
ಇದನ್ನೂ ಓದಿ :ತಾಲಿಬಾಬ್ V/S ಪಂಜ್ ಶೀರ್ ಕದನ: ಪಂಜ್ ಶೀರ್ ಪ್ರವೇಶಿಸಲು ತಾಲಿಬಾನ್ ಉಗ್ರರ ಹರಸಾಹಸ?
ವಿದ್ಯಾರ್ಥಿಗಳಿಗೆ ಮತ್ತು ಪಾಲಕರಿಗೆ ಧೈರ್ಯ ತುಂಬುವ ಕೆಲಸ ಮಾಡಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಹೆಚ್ಚಿಸುವಂತಹ ಕ್ರಮ ಕೈಗೊಳ್ಳಬೇಕು. ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಲಸಿಕೆ ಪಡೆದಂತಹ ಶಿಕ್ಷಕರೇ ಶಾಲೆಗಳಲ್ಲಿ ಪಾಠ-ಪ್ರವಚನ ನೀಡುವಂತಾಗಬೇಕು. ಶಿಕ್ಷಣಾಧಿಕಾರಿಗಳು ಜಿಲ್ಲೆಯ ವಿವಿಧ ಶಾಲಾ-ಕಾಲೇಜುಗಳಿಗೆ ತೆರಳಿ ವಿದ್ಯಾರ್ಥಿಗಳ ಆರೋಗ್ಯ ತಪಾಸಣಾ ವ್ಯವಸ್ಥೆಯ ಮೇಲುಸ್ತುವಾರಿ ವಹಿಸಬೇಕು ಎಂದು ಸಚಿವರು ಕರೆ ನೀಡಿದರು.
ಮಾನ್ಯ ಸಚಿವರ ಮಾರ್ಗದರ್ಶನದಂತೆ ಗದಗ ಜಿಲ್ಲೆಯಲ್ಲಿ ತರಗತಿಗಳ ಸೂಕ್ತ ನಿರ್ವಹಣೆಗೆ ಅನುಕೂಲವಾಗುವಂತೆ ಮೇಲ್ವಿಚಾರಣಾ ತಂಡವನ್ನು ರಚಿಸಲಾಗಿದೆ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಸೂಕ್ತ ಸ್ಯಾನಿಟೇಶನ್ ಕೈಗೊಳ್ಳಲಾಗಿದೆ ಎಂದು ಶಿಕ್ಷಣಾಧಿಕಾರಿಗಳು ಈ ಸಂದರ್ಭದಲ್ಲಿ ವಿವರಿಸಿದರು.
ಗದಗ ಜಿಲ್ಲೆಯ ವಿವಿಧ ಶಿಕ್ಷಣ ಸಂಸ್ಥೆಗಳಿಗೆ ಮಾನ್ಯ ಸಚಿವರೇ ಖುದ್ದಾಗಿ ದೂರವಾಣಿ ಕರೆ ಮಾಡಿ ಶಿಕ್ಷಕರೊಂದಿಗೆ ಮಾತನಾಡಿ ತರಗತಿಗಳ ಪ್ರಾರಂಭದ ವ್ಯವಸ್ಥೆಯನ್ನು ಅವಲೋಕಿಸಿ ಸೂಕ್ತ ಮಾರ್ಗದರ್ಶನ ನೀಡಿದರು.