Advertisement

ಬಿಡಬ್ಲ್ಯುಎಫ್ ವಿಶ್ವ ಬ್ಯಾಡ್ಮಿಂಟನ್‌: ಸಾತ್ವಿಕ್‌-ಚಿರಾಗ್‌ ಶೆಟ್ಟಿ; ಪದಕ ಗಟ್ಟಿ

12:16 AM Aug 27, 2022 | Team Udayavani |

ಟೋಕಿಯೊ: ಬಿಡಬ್ಲ್ಯುಎಫ್ ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ನ ಪುರುಷರ ಡಬಲ್ಸ್‌ನಲ್ಲಿ ಭಾರತಕ್ಕೆ ಇದೇ ಮೊದಲ ಬಾರಿಗೆ ಪದಕವೊಂದು ಒಲಿದು ಬರಲಿದೆ. ಇದನ್ನು ಖಾತ್ರಿಗೊಳಿಸಿದವರು ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ-ಚಿರಾಗ್‌ ಶೆಟ್ಟಿ ಜೋಡಿ. ಇವರಿಬ್ಬರೂ ಸೆಮಿಫೈನಲ್‌ ಪ್ರವೇಶಿಸುವ ಮೂಲಕ ಐತಿಹಾಸಿಕ ಸಾಧನೆಗೈದರು. ಆದರೆ ಪುರುಷರ ಸಿಂಗಲ್ಸ್‌ನಲ್ಲಿ ಎಡವಿದ ಎಚ್‌.ಎಸ್‌. ಪ್ರಣಯ್‌ ಪದಕದಿಂದ ವಂಚಿತರಾಗಬೇಕಾಯಿತು.

Advertisement

ಶುಕ್ರವಾರ ನಡೆದ ಜಿದ್ದಾಜಿದ್ದಿ ಕ್ವಾರ್ಟರ್‌ ಫೈನಲ್‌ನಲ್ಲಿ ವಿಶ್ವದ 7ನೇ ನಂಬರ್‌ ಜೋಡಿಯಾದ ಸಾತ್ವಿಕ್‌-ಚಿರಾಗ್‌ ಸೇರಿಕೊಂಡು ಜಪಾನ್‌ನ ಟಕುರೊ ಹೊಕಿ-ಯುಗೊ ಕೊಬಯಾಶಿ ಅವರನ್ನು 24-22, 15-21, 21-14 ಅಂತರದಿಂದ ಮಣಿಸಿದರು. ಒಂದು ಗಂಟೆ, 15 ನಿಮಿಷಗಳ ಕಾಲ ಇವರ ಹೋರಾಟ ಸಾಗಿತು.

ಸಾತ್ವಿಕ್‌-ಚಿರಾಗ್‌ ಕಳೆದ ಬರ್ಮಿಂಗ್‌ಹ್ಯಾಮ್‌ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದರು. ಇಲ್ಲಿಯೂ ದೊಡ್ಡ ಪದಕವೊಂದರ ನಿರೀಕ್ಷೆ ಇರಿಸಲಾಗಿದೆ. ಸೆಮಿಫೈನಲ್‌ನಲ್ಲಿ ಇವರ ಎದುರಾಳಿ ಮಲೇಷ್ಯಾದ ಆರನ್‌ ಚಿಯ-ಸೋಹ್‌ ವೂಯಿ ಯಿಕ್‌.

ಪ್ರಣಯ್‌ಗೆ ಸೋಲು
ಭಾರತದವರೇ ಆದ ಲಕ್ಷ್ಯ ಸೇನ್‌ ಅವರನ್ನು ಮಣಿಸಿ ಮುನ್ನಡೆದಿದ್ದ ಎಚ್‌.ಎಸ್‌. ಪ್ರಣಯ್‌ ಅವರ ಆಟ ಚೀನದ ಜಾವೊ ಜುನ್‌ ಪೆಂಗ್‌ ಮುಂದೆ ಸಾಗ ಲಿಲ್ಲ. ಪೆಂಗ್‌ 19-21, 21-6, 21-18 ರಿಂದ ಪ್ರಣಯ್‌ ಅವರನ್ನು ಪರಾಭವ ಗೊಳಿಸಿ ಸೆಮಿಫೈನಲ್‌ ತಲುಪಿದರು.

ಪುರುಷರ ಡಬಲ್ಸ್‌ನಲ್ಲಿ ಕಣದಲ್ಲಿದ್ದ ಭಾರತದ ಮತ್ತೊಂದು ಜೋಡಿ ಎಂ.ಆರ್‌. ಅರ್ಜುನ್‌-ಧ್ರುವ ಕಪಿಲ 3 ಬಾರಿಯ ಚಾಂಪಿಯನ್‌ ಮೊಹಮ್ಮದ್‌ ಅಹಸಾನ್‌-ಹೆಂಡ್ರಾ ಸೆತಿಯವಾನ್‌ ಕೈಯಲ್ಲಿ 8-21, 14-21 ಅಂತರದಿಂದ ಸೋತಿತು.

Advertisement

ಭಾರತ ಗೆದ್ದ
13ನೇ ಪದಕ
ಇದು ವಿಶ್ವ ಚಾಂಪಿಯನ್‌ಶಿಪ್‌ ಡಬಲ್ಸ್‌ ವಿಭಾಗದಲ್ಲಿ ಭಾರತಕ್ಕೆ ಒಲಿಯಲಿರುವ ದ್ವಿತೀಯ ಪದಕ. ಇದಕ್ಕೂ ಮುನ್ನ 2011ರ ವನಿತಾ ಡಬಲ್ಸ್‌ನಲ್ಲಿ ಜ್ವಾಲಾ ಗುಟ್ಟಾ-ಅಶ್ವಿ‌ನಿ ಪೊನ್ನಪ್ಪ ಕಂಚಿನ ಪದಕ ತಂದಿತ್ತಿದ್ದರು.

ಒಟ್ಟಾರೆಯಾಗಿ ಈ ಕೂಟದಲ್ಲಿ ಭಾರತದ 13ನೇ ಪದಕ ಇದಾಗಲಿದೆ. ಇದರಲ್ಲಿ ಗರಿಷ್ಠ 5 ಪದಕಗಳನ್ನು ಗೆದ್ದ ಹಿರಿಮೆ ಪಿ.ವಿ. ಸಿಂಧು ಅವರದು. 2019ರಲ್ಲಿ ಅವರು ಬಂಗಾರದಿಂದ ಸಿಂಗಾರಗೊಂಡಿದ್ದರು. ಸೈನಾ ನೆಹ್ವಾಲ್‌ 2 ಪದಕ ಜಯಿಸಿದ್ದಾರೆ (ಬೆಳ್ಳಿ, ಕಂಚು). ಕೆ. ಶ್ರೀಕಾಂತ್‌ (ಬೆಳ್ಳಿ), ಪ್ರಕಾಶ್‌ ಪಡುಕೋಣೆ (ಕಂಚು), ಲಕ್ಷ್ಯ ಸೇನ್‌ (ಕಂಚು) ಮತ್ತು ಬಿ. ಸಾಯಿ ಪ್ರಣೀತ್‌ (ಕಂಚು) ಇತರ ಪದಕವೀರರು.

Advertisement

Udayavani is now on Telegram. Click here to join our channel and stay updated with the latest news.

Next