ಬೆಂಗಳೂರು: ಇತ್ತೀಚೆಗೆ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿನ ಬಸ್ ನಿಲ್ದಾಣದಲ್ಲಿ ಕಬ್ಬಿಣ ರಾಡ್ ಗಳಿಂದ ನಿರ್ಮಿಸಿದ್ದ ಶೆಲ್ಟರ್ ಕಳವು ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ತನಿಖೆ ನಡೆಸಿದ ಪೊಲೀಸರು ಅಸಲಿ ರಹಸ್ಯ ಬಯಲಿಗೆಳೆದಿದ್ದಾರೆ. ಅಸಲಿಗೆ ಬಸ್ ನಿಲ್ದಾಣವನ್ನು ಯಾರು ಕಳವು ಮಾಡಿಲ್ಲ. ಕಳಪೆ ಕಾಮಗಾರಿ ಆರೋಪದ ಮೇಲೆ ಬಿಬಿಎಂಪಿ ಅಧಿಕಾರಿಗಳೇ ಬಸ್ ನಿಲ್ದಾಣವನ್ನು ತೆರವುಗೊಳಿಸಿದ್ದಾರೆ ಎಂಬುದು ಹೈಗ್ರೌಂಡ್ಸ್ ಠಾಣೆ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಸೈನ್‌ಪೋಸ್ಟ್ ಎಂಬ ಖಾಸಗಿ ಸಂಸ್ಥೆ ಬಿಬಿಎಂಪಿ ಅನುಮತಿ ಪಡೆದು ಕನ್ನಿಂಗ್‌ಹ್ಯಾಮ್ ರಸ್ತೆಯಲ್ಲಿರುವ ಕಾಫಿ ಡೇ ಮುಂಭಾಗ ಹತ್ತು ಲಕ್ಷ ರೂ. ವೆಚ್ಚದಲ್ಲಿ ಆ.21ರಂದು ಸ್ಟೇನ್ ಲೇಸ್ ಸ್ಟೀಲ್ ಬಳಸಿ ಬಸ್ ತಂಗುದಾಣ ನಿರ್ಮಾಣ ಮಾಡಿತ್ತು. ಆ.28ರಂದು ಪರೀಕ್ಷೆಗೆ ಬಂದಾಗ ಬಸ್ ನಿಲ್ದಾಣವೇ ನಾಪತ್ತೆಯಾಗಿತ್ತು. ಕೂಡಲೇ ಬಿಬಿಎಂಪಿ ಅಧಿಕಾರಿಗಳಿಗೆ ಕರೆ ಮಾಡಿ ವಿಚಾರಿಸಿದಾಗ, ತಾವು ಬಸ್ ನಿಲ್ದಾಣ ತೆರವುಗೊಳಿಸಿಲ್ಲ ಎಂದು ಮಾಹಿತಿ ನೀಡಿದ್ದಾರೆ.
ಹೀಗಾಗಿ ಕಂಪನಿಯ ಉಪಾಧ್ಯಕ್ಷ ರವಿ ರೆಡ್ಡಿ ಸೆ.30ರಂದು ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಕುರಿತು ಘಟನಾ ಸ್ಥಳದ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಸಂಗ್ರಹಿಸಿ ತನಿಖೆ ನಡೆಸಿದಾಗ ಕೆಲ ವ್ಯಕ್ತಿಗಳು ಬಸ್ ನಿಲ್ದಾಣ ತೆರವುಗೊಳಿಸುತ್ತಿರುವ ವಿಚಾರ ಬೆಳಕಿಗೆ ಬಂದಿತ್ತು.
ಕಳಪೆ ಕಾಮಗಾರಿ: ಈ ಹಿನ್ನೆಲೆಯಲ್ಲಿ ಶಿವಾಜಿನಗರ ವಲಯದ ಬಿಬಿಎಂಪಿ ಅಧಿಕಾರಿಗಳನ್ನು ವಿಚಾರಿಸಿ ದಾಗ, ಆ.22ರಂದು ವಾರ್ಡ್ ಪರಿವೀಕ್ಷಣೆಗೆ ಬಂದಾಗ ಬಸ್ ಶೆಲ್ಟರ್ ಕಾಮಗಾರಿ ಕಳಪೆಯಾಗಿರು ವುದು ಬೆಳಕಿಗೆ ಬಂದಿತ್ತು. ಶೆಲ್ಟರ್ ಕುಸಿದು ಬಿದ್ದರೆ ತೊಂದರೆ ಆಗುತ್ತದೆ ಎಂಬುದನ್ನು ಗಮನಿಸಿ, ನಿಲ್ದಾಣ ನಿರ್ಮಿಸಿದ್ದ ಖಾಸಗಿ ಸಂಸ್ಥೆಯ ರವಿರೆಡ್ಡಿಗೆ ಈ ಬಗ್ಗೆ ಮಾಹಿತಿ ನೀಡಲಾಗಿತ್ತು. ಆದರೆ, ಖಾಸಗಿ ಕಂಪನಿ ಯಾವುದೇ ಕ್ರಮಕೈಗೊಂಡಿರಲಿಲ್ಲ. ಕಾರ್ಯಾದೇಶ ಪತ್ರವನ್ನು ಕಚೇರಿಗೆ ಸಲ್ಲಿಸಿರಲಿಲ್ಲ. ಹೀಗಾಗಿ ಆ.25ರಂದು ಬಸ್ ಶೆಲ್ಟರ್ ತೆರವುಗೊಳಿ ಸಲಾಗಿತ್ತು ಎಂದು ಹೈಗ್ರೌಂಡ್ಸ್ ಠಾಣೆ ಪೊಲೀಸರಿಗೆ ಲಿಖಿತ ರೂಪದಲ್ಲಿ ಉತ್ತರ ನೀಡಿದ್ದಾರೆ.
ದೂರುದಾರ ರವಿರೆಡ್ಡಿ ಬಸ್ ನಿಲ್ದಾಣ ಪರಿವೀಕ್ಷಣೆಗೆ ಬಂದಾಗ ನಿಲ್ದಾಣ ನಾಪತ್ತೆಯಾಗಿರುವ ಬಗ್ಗೆ ಬಿಬಿಎಂಪಿ ಕೇಂದ್ರ ವಲಯದ ಅಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ಕೇಳಿದ್ದರು. ಹೀಗಾಗಿ ಆ ಅಧಿಕಾರಿಗಳು ನಿಲ್ದಾಣ ತೆರವುಗೊಳಿಸಿಲ್ಲ ಎಂದಿದ್ದರು. ಆದರೆ, ಶಿವಾಜಿನಗರ ವಲಯ ಅಧಿಕಾರಿಗಳು ತೆರವುಗೊಳಿಸಿದ್ದರು ಎಂಬುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದರು.
ಪೊಲೀಸರ ತನಿಖೆಯಲ್ಲಿ ಬಸ್ ನಿಲ್ದಾಣ ಕಳವಾಗಿಲ್ಲ. ಶಿವಾಜಿನಗರ ವಲಯದ ಬಿಬಿಎಂಪಿ ಅಧಿಕಾರಿಗಳು ಕಳಪೆ ಕಾಮಗಾರಿ ಆರೋಪದ ಮೇಲೆ ಸಾರ್ವಜನಿಕರ ಹಿತದೃಷ್ಟಿಯಿಂದ ತೆರವು ಗೊಳಿಸಿದ್ದಾರೆ. ಈ ಕುರಿತು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
– ಬಿ.ದಯಾನಂದ, ನಗರ ಪೊಲೀಸ್ ಆಯುಕ್ತ