ಎಚ್.ಡಿ.ಕೋಟೆ: ಇದು ಯಾವುದೋ ಕೊಳಗೇರಿ ಪ್ರದೇಶವಲ್ಲ. ತ್ಯಾಜ್ಯ ವಿಲೇವಾರಿ ಮಾಡುವ ಘಟಕವಂತೂ ಅಲ್ಲವೇ ಅಲ್ಲ. ಆದರೆ, ಪ್ರಯಾಣಿಕರು ಮಾತ್ರ ನಿತ್ಯ ತ್ಯಾಜ್ಯದ ದುರ್ವಾಸನೆ ಸಹಿಸಿಕೊಳ್ಳಬೇಕಾಗಿದೆ. ಹೌದು, ತಾಲೂಕು ಕೇಂದ್ರ ಸ್ಥಾನ ಎನಿಸಿಕೊಂಡಿರುವ ಸರಗೂರು ಪಟ್ಟಣದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ದುಸ್ತಿತಿ ಇದು.
ತಾಲೂಕು ಕೇಂದ್ರ ಸ್ಥಾನದ ಸರಗೂರು ಬಸ್‌ನಿಲ್ದಾಣಕ್ಕೆ ಪ್ರತಿದಿನ ಸಾವಿರಾರು ಮಂದಿ ಪ್ರಯಾಣಿಕರು ಆಗಮಿಸಿ ಹಲವು ಕಡೆಗಳಿಗೆ ಸರ್ಕಾರಿ ಬಸ್‌ಗಳಲ್ಲಿ ತೆರಳುವುದು ಸರ್ವೆ ಸಾಮಾನ್ಯ. ಈ ಬಸ್ ನಿಲ್ದಾಣಕ್ಕೆ ಆಗಮಿಸು ತ್ತಿದ್ದಂತೆಯೇ ದುರ್ವಾಸನೆ ಬೀರುತ್ತದೆ.
ದುರ್ವಾಸನೆ: ಬಸ್ ನಿಲ್ದಾಣದ ಸುತ್ತಲೂ ಗಿಡಗಂಟಿ, ಆಳೆತ್ತರ ಬೆಳೆದು ನಿಂತಿದ್ದರೂ ಶುಚಿತ್ವಕ್ಕೆ ಆದ್ಯತೆ ನೀಡಿಲ್ಲ. ಇನ್ನು ಅಲ್ಲಲ್ಲಿ ಜನ ಮಲಮೂತ್ರ ವಿಸರ್ಜನೆ ಮಾಡಿರುವುದರಿಂದ ಇಡೀ ನಿಲ್ದಾಣ ಕಲುಷಿತಗೊಂಡು ಕೊಳೆತು ನಾರುತ್ತಿದೆ. ಪ್ರಯಾಣಿಕರ ಆಶ್ರಯ ತಾಣದಲ್ಲಿ ಜನ ಬಸ್‌ಗಾಗಿ ಕಾಯುವುದಿರಲಿ ಎಷ್ಟು ಬೇಗ ನಿಲ್ದಾಣದಿಂದ ಹೊರ ಹೋಗುತ್ತೇವೋ ಎನ್ನುವ ಭಾವ ಮೂಡುವಂತಿದೆ.
ಇಷ್ಟೆಲ್ಲಾ ಅವ್ಯವಸ್ಥೆಗಳ ಅಗರವಾಗಿರುವ ಸರಗೂರು ಸರ್ಕಾರಿ ಬಸ್‌ನಿಲ್ದಾಣದ ಶುಚಿತ್ವದ ಮತ್ತು ಅಭಿವೃದ್ಧಿಗೆ ಕೆಎಸ್ಸಾರ್ಟಿಸಿ ಕ್ರಮವಹಿಸದೇ ಕಂಡೂ ಕಾಣದಂತೆ ಮೌನಕ್ಕೆ ಶರಣಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಅಧಿಕಾರಿಗಳು ಮೌನ: ಈಗಾಗಲೇ ಅಶುಚಿತ್ವದಿಂದ ಚಿಕೂನ್ ಗೂನ್ಯಾ, ಡೆಂಗ್ಯು ಸೇರಿದಂತೆ ಇನ್ನಿತರ ಮಾರಕ ರೋಗ ಹರಡುವ ಸಾಧ್ಯತೆಗಳಿದ್ದು, ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡುವಂತೆ ಸರ್ಕಾರ ಸಾರಿ ಸಾರಿ ಹೇಳಿದರೂ ಸರಗೂರು ನಿಲ್ದಾಣ ನಿಯಮ ಪಾಲಿಸುತ್ತಿಲ್ಲ. ಇದಕ್ಕೆ ಕಲುಷಿತ ವಾತಾವರಣದ ಬಸ್ ನಿಲ್ದಾಣದ ನೈಜತೆ ಪ್ರತ್ಯಕ್ಷ ಸಾಕ್ಷಿಯಾಗಿದೆ. ಇನ್ನಾದರೂ ಸಂಬಂಧ ಪಟ್ಟವರು ಗಮನ ಹರಿಸಿ ಬಸ್‌ನಿಲ್ದಾಣದ ಶುಚಿತ್ವಕ್ಕೆ ಆದ್ಯತೆ ನೀಡಬೇಕಿದೆ. ತಪ್ಪಿದರೆ ಕಲುಷಿತ ವಾತಾವರಣದಿಂದ ಸಾಂಕ್ರಾಮಿಕ ರೋಗ ಹರಡುವುದರಲ್ಲಿ ಸಂಶಯ ಇಲ್ಲ.
ಕಲುಷಿತ ನೀರು ಶೇಖರಣೆ
ಬಸ್‌ನಿಲ್ದಾಣ ಪ್ರವೇಶಿಸುತ್ತಿದಂತೆಯೇ ಎಲ್ಲೆಂದರಲ್ಲಿ ಕಸ, ಘನತ್ಯಾಜ್ಯ ವಸ್ತುಗಳ ರಾಶಿ ಕಾಣಲಿದ್ದು ಪ್ರಯಾಣಿಕರು ಮತ್ತು ಸಾರ್ವಜನಿಕರನ್ನು ಸ್ವಾಗತಿಸುತ್ತದೆ. ಅಷ್ಟೇ ಅಲ್ಲ ಮಳೆಗಾಲವಾಗಿರುವುದರಿಂದ ಕಸದ ರಾಶಿ ಕೊಳೆತು ಗಬ್ಬೆದ್ದು ನಾರುತ್ತಿದೆ. ಅಲ್ಲಲ್ಲಿ ಕಲುಷಿತ ನೀರು ಶೇಖರಣೆಯಾಗಿ ಸಾಂಕ್ರಾಮಿಕ ರೋಗ ಹರಡುವ, ಸೊಳ್ಳೆಗಳ ವಂಶಾಭಿವೃದ್ಧಿಯ ಕೇಂದ್ರ ಸ್ಥಾನವಾಗಿದೆ. ಪರಿಸ್ಥಿತಿ ಹೀಗಿದ್ದರೂ ಕೆಎಸ್ಸಾರ್ಟಿಸಿ ಶುಚಿತ್ವಕ್ಕೆ ಆದ್ಯತೆ ನೀಡುತ್ತಿಲ್ಲ ಎನ್ನುವುದು ಸಾಬೀತುಪಡಿಸುತ್ತಿವೆ.
“ಸರಗೂರು ಬಸ್ ನಿಲ್ದಾಣ ಅಶುಚಿತ್ವದಿಂದ ಕೂಡಿದೆ. ದುರಸ್ತಿಗೆ ಕೆಎಸ್ಸಾರ್ಟಿಸಿ ಅಧಿಕಾರಿ ಗಳಿಗೆ ಮನವಿ ಮಾಡಿದರೆ ಅನುದಾನ ಇಲ್ಲ ಎನ್ನುತ್ತಾರೆ. ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ.”
●ನಾಗೇಶ, ಸ್ಥಳೀಯರು