ಕಂಪ್ಲಿ: ಬಸ್ ಸಮಸ್ಯೆ ಹಿನ್ನೆಲೆ ಡಿಪ್ಲೋಮಾ ಕಾಲೇಜು ವಿದ್ಯಾರ್ಥಿಗಳು ಗೂಡ್ಸ್ ವಾಹನಗಳಿಗೆ ಜೋತು ಬಿದ್ದು ಹೋಗುತ್ತಿರುವ ಘಟನೆ ಕಂಪ್ಲಿ ಪಟ್ಟಣದ ಹೊಸಪೇಟೆ ಬೈಪಾಸ್ ರಸ್ತೆಯಲ್ಲಿ ಗುರುವಾರ ಕಂಡು ಬಂತು.
ಹೌದು..! ಇಲ್ಲಿನ ಡಿಪ್ಲೋಮಾ ಕಾಲೇಜು ವಿದ್ಯಾರ್ಥಿಗಳು ದಿನನಿತ್ಯದ ಬಸ್ ಗಳ ಸಮಸ್ಯೆ ಮಧ್ಯ ವಿದ್ಯಾಭ್ಯಾಸ ಮಾಡುತ್ತಿರುವುದು ವಿಪರ್ಯಾಸವಾಗಿದೆ.
ಕಂಪ್ಲಿ ನಗರದ ಹೊರವಲಯದಲ್ಲಿರುವ ಡಿಪ್ಲೋಮಾಗೆ ಕಂಪ್ಲಿ ನಗರ ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ತೆರಳುತ್ತಾರೆ. ಆದರೆ, ಇಲ್ಲಿನ ಬೈಪಾಸ್ ಮೂಲಕ ಸಾಕಷ್ಟು ಸಾರಿಗೆ ಬಸ್ ಗಳು ಸಂಚರಿಸುತ್ತಿದ್ದರೂ, ನಿಲ್ಲುಸದೇ ಇರುವ ಪರಿಣಾಮ ವಿದ್ಯಾರ್ಥಿಗಳು ಕಾಲೇಜಿಗೆ ಹೋಗಿ ಬರಲು ಹರಸಾಹಸಪಡುವಂತಾಗಿದೆ.
ಕಾಲೇಜು ಬಳಿಯಲ್ಲಿ ಯಾವುದೇ ಸಾರಿಗೆ ಬಸ್ ಗಳು ನಿಲುಗಡೆಗೆ ಅವಕಾಶ ಮಾಡಿಕೊಡದ ಹಿನ್ನೆಲೆ ಸಮಸ್ಯೆ ತಂದೊಡ್ಡಿದೆ. ಕೆಲ ವಿದ್ಯಾರ್ಥಿಗಳು ಕಾಲೇಜಿಗೆ ಹೋಗಬೇಕಾದರೆ ವಾಲ್ಮೀಕಿ ವೃತ್ತದಲ್ಲಿರುವ ಬರುವ ದ್ವಿಚಕ್ರ ವಾಹನಗಳಿಗೆ ಕೈಮಾಡಿ, ನಿಲ್ಲಿಸುವ ವಾಹನದ ಮೂಲಕ ಕಾಲೇಜಿಗೆ ತೆರಳಬೇಕಾದ ದುಸ್ಥಿತಿ ನಿರ್ಮಾಣವಾಗಿದೆ. ಇನ್ನು ಕೆಲ ವಿದ್ಯಾರ್ಥಿನಿಯರು ಕಾಲ್ನಡಿಗೆ ಮೂಲಕದ ದೂರದ ಕಾಲೇಜಿಗೆ ಹೋಗಬೇಕಾದ ಪರಿಸ್ಥಿತಿ ತಂದೊಡ್ಡಿದೆ. ಕಾಲೇಜು ಬಿಟ್ಟ ನಂತರ ವಿದ್ಯಾರ್ಥಿಗಳು ಮನೆಗಳಿಗೆ ಸೇರಬೇಕಾದರೆ ಅವರಿವರಿಂದ ಡ್ರಾಪ್ ಕೇಳಿ ಹೋಗುತ್ತಿರುವುದು ಸಾಮಾನ್ಯವಾಗಿದೆ. ಸಿಟಿ ಬಸ್ ಗಳ ವ್ಯವಸ್ಥೆ ಹಾಗೂ ಸಾರಿಗೆ ನಿಲುಗಡೆಗೆ ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರೂ, ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಕಣ್ಣಿಗೆ ತಾಗದಂತಾಗಿದೆ. ಮಕ್ಕಳಿಗೆ ಆಶ್ವಾಸನೆ ನೀಡುವ ಪ್ರವೃತ್ತಿಯಾಗಿದೆ ಹೊರತು ಸಮಸ್ಯೆಗೆ ಮುಕ್ತಿ ಇಲ್ಲದಂತಾಗಿದೆ. ಇಲ್ಲಿನ ವಿದ್ಯಾರ್ಥಿಗಳು ಪಾಠ, ಪ್ರವಚನದಿಂದ ವಂಚಿತರಾಗಬೇಕಾದ ಅನಿವಾರ್ಯತೆ ಉಂಟಾಗಿದೆ.
ಗುರುವಾರದಂದು ಕಾಲೇಜು ಮುಗಿಸಿಕೊಂಡು ಕಂಪ್ಲಿ ನಗರಕ್ಕೆ ಬರಬೇಕಾದರೆ, ಬಸ್ ಗಳಿಲ್ಲದೇ ಗೂಡ್ಸ್ ವಾಹನದ ಹಿಂಬದಿಯಲ್ಲಿ ಐದು ವಿದ್ಯಾರ್ಥಿಗಳು ಜೋತು ಬಿದ್ದು ತೆರಳುತ್ತಿರುವುದು ಕಂಡು ಬಂತು. ಮಕ್ಕಳು ಶಿಕ್ಷಣದ ಮೂಲಕ ಮನೆಗೆ ಬರಲೆಂದು ಪೋಷಕರ ಆಸೆ. ಆದರೆ, ಇಲ್ಲಿನ ಮಕ್ಕಳ ಪರಿಸ್ಥಿತಿಯನ್ನು ಪೋಷಕರು ನೋಡಿದರೆ ಕಾಲೇಜಿಗೆ ಕಳುಹಿಸುವುದು ಬೇಡ ಅನ್ನಿಸುತ್ತದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಗಮನ ಹರಿಸಿ, ಸಿಟಿ ಬಸ್ ವ್ಯವಸ್ಥೆ ಅಥವಾ ಕಡ್ಡಾಯವಾಗಿ ಸಾರಿಗೆ ಬಸ್ ಗಳ ನಿಲುಗಡೆಗೆ ಸೂಕ್ತಕ್ರಮ ಕೈಗೊಳ್ಳುವ ಮೂಲಕ ಅನುಕೂಲ ಮಾಡಿಕೊಡಬೇಕೆಂಬುದಾಗಿದೆ.