Advertisement

ಜಾಗತಿಕ ಬಂಟ ಪ್ರತಿಷ್ಠಾನ ಪ್ರಶಸ್ತಿಗೆ ವಂಡ್ಸೆ ನಾಗಯ್ಯ ಶೆಟ್ಟಿ

05:36 PM Aug 24, 2018 | Team Udayavani |

ಜೀವನದ ಒಂಭತ್ತು ದಶಕಗಳನ್ನು ಕಂಡ ಹಾಸ್ಯಗಾರ ನಾಗಯ್ಯ ಶೆಟ್ಟರು ಇನ್ನೇನು ಮರೆತೇ ಹೋದರು ಎಂಬಾಗ ಜಾಗತಿಕ ಬಂಟ ಪ್ರತಿಷ್ಠಾನದ ಪ್ರಶಸ್ತಿ ಅವರನ್ನು ಅರಸಿ ಬಂದಿದೆ. 

Advertisement

ದರ್ಲಿಯಣಿ ನಾಗಯ್ಯ ಶೆಟ್ಟರು ಜನಿಸಿದ್ದು ಸಪ್ಟೆಂಬರ್‌ 15,1930ರಂದು ಕುಂದಾಪುರ ತಾಲ್ಲೂಕಿನ ವಂಡ್ಸೆಯಲ್ಲಿ; ವಂಡ್ಸೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎರಡನೇ ತರಗತಿಗೆ ಓದು ನಿಲ್ಲಿಸಿ ಯಕ್ಷಗಾನದತ್ತ ಆಕರ್ಷಿತರಾಗಿ ಪ್ರಥಮವಾಗಿ ಸೇರಿದ್ದು ಮಾರಣಕಟ್ಟೆ ಮೇಳವನ್ನು. ಯಕ್ಷಗಾನದ ಹೆಜ್ಜೆಗಾರಿಕೆೆ ಮತ್ತು ತಾಳಗಳನ್ನು ಸ್ವಂತ ಪರಿಶ್ರಮದಿಂದ ಕಲಿತ ಅವರು ವೀರಭದ್ರ ನಾಯಕರನ್ನು ಗುರು ಎಂದು ಸ್ವೀಕರಿಸಿ ನೃತ್ಯ ಹಾಗೂ ಮಾತುಗಾರಿಕೆಯಲ್ಲಿ ಪರಿಣತಿ ಸಾಧಿಸಿದರು. ಕಟ್ಟುವೇಷಗಳನ್ನು ಹಾಸ್ಯ ಪಾತ್ರಗಳಂತೆ ಶ್ರದ್ಧೆಯಿಂದ ಮಾಡಿ ಯಕ್ಷಗಾನದ ವಿವಿಧ ಭೂಮಿಕೆಗಳನ್ನು ನಿರ್ವಹಿಸಿ ಪ್ರಸಿದ್ಧರಾಗಿ ಬಡಗು ತಿಟ್ಟಿನ ಪ್ರಾತಿನಿಧಿಕ ಹಾಸ್ಯಗಾರರೆನಿಸಿದರು.

ಮಾರಣಕಟ್ಟೆ ಮೇಳವೊಂದರಲ್ಲೇ 35 ವರ್ಷಗಳ ಸುದೀರ್ಘ‌ ಸೇವೆ ಸಲ್ಲಿಸಿರುವ ನಾಗಯ್ಯ ಶೆಟ್ಟರು ವಿಶಿಷ್ಟ ಶೈಲಿಯ ಹಾಸ್ಯದಿಂದ ಜನಪ್ರಿಯರಾದರು. ಕಮಲಶಿಲೆ, ಸೌಕೂರು, ಅಮೃತೇಶ್ವರಿ, ಮಂದರ್ತಿ, ಪೆರ್ಡೂರು, ಕೊಡವೂರು ಹಾಗೂ ಹೆಗ್ಗೊàಡು ಮೇಳಗಳಲ್ಲೂ ಸೇವೆ ಸಲ್ಲಿಸಿರುವ ಶೆಟ್ಟರಿಗೆ 41 ವರ್ಷಗಳ ತಿರುಗಾಟದ ಅನುಭವವಿದೆ. ಕುಶಲವದ “ವಾಲ್ಮೀಕಿ’ ನಳ ದಮಯಂತಿಯ “ಬಾಹುಕ’ ಶೂರ್ಪನಖಾ ವಿವಾಹದ “ವಿದ್ಯುಜ್ಜಿಹ್ವ’, ವಿರಾಟಪರ್ವದ “ಚಿಕ್ಕ’, ಶ್ರೀಕೃಷ್ಣ ಗಾರುಡಿಯ “ಗಾರುಡಿ’ ಇತ್ಯಾದಿ ಪಾತ್ರಗಳಲ್ಲಿ ಅಪಾರ ಜನಮನ್ನಣೆ ಗಳಿಸಿದ ಅವರಿಗೆ “ಹಾಸ್ಯಗಾರ ನಾಗಯ್ಯ ಶೆಟ್ಟಿ’ ಎಂದೇ ಹೆಸರಾಯಿತು. 

ಕೊಕ್ಕ‌ರ್ಣೆ ನರಸಿಂಹ ನಾಯ್ಕ, ಹಾರಾಡಿ ರಾಮ ಗಾಣಿಗ, ಕುಷ್ಟ ಗಾಣಿಗ, ನಾರಾಯಣ ಗಾಣಿಗ, ಮಜ್ಜಿಗೆಬೈಲು ಚಂದಯ್ಯ ಶೆಟ್ಟಿ, ಬಣ್ಣದ ಸಂಜೀವ ನಾಯ್ಕ, ಹಾಸ್ಯಗಾರ ಮಂಜುನಾಥ ಪರಾಡಿ ಮೊದಲಾದ ಬಡಗುತಿಟ್ಟಿನ ಪ್ರಸಿದ್ಧ ಕಲಾವಿದರೊಂದಿಗೆ ರಂಗಸ್ಥಳ ಹಂಚಿಕೊಂಡಿರುವುದು ಅವರ ಹಿರಿಮೆ. ಗುರು ವೀರಭದ್ರ ನಾಯಕರೊಂದಿಗೆ “ಚಿತ್ರಗುಪ್ತ’, ಶಿರಿಯಾರ ಮಂಜುನಾಥ ನಾಯ್ಕ ಮತ್ತು ವಂಡಾರು ಬಸವ ನಾಯರಿ ಜೊತೆ ಅವರು ಮಾಡುತ್ತಿದ್ದ “ಬಾಹುಕ’ಪಾತ್ರ  ಜನಪ್ರಿಯ. 

ಇದೀಗ ಜಾಗತಿಕ ಬಂಟ ಪ್ರತಿಷ್ಠಾನ ಟ್ರಸ್ಟ್‌ ಡಾ. ಡಿ.ಕೆ ಚೌಟ ದತ್ತಿನಿಧಿಯಿಂದ ಹಿರಿಯ ಯಕ್ಷಗಾನ ಕಲಾವಿದರಿಗೆನೀಡುವ ಪ್ರಶಸ್ತಿಗೆ 2018-19ರ ಸಾಲಿನಲ್ಲಿ ವಂಡ್ಸೆ ನಾಗಯ್ಯ ಶೆಟ್ಟಿಯವರು ಆಯ್ಕೆಯಾಗಿದ್ದಾರೆ. ಆಗಸ್ಟ್‌ 26ರಂದುಮಂಗಳೂರಿನಲ್ಲಿ ಜರಗುವ ಪ್ರತಿಷ್ಠಾನದ ಮಹಾಸಭೆಯಲ್ಲಿ ಅವರು ಈ ಪ್ರಶಸ್ತಿಯನ್ನು ಸ್ವೀಕರಿಸುವರು.

Advertisement

ಭಾಸ್ಕರ ರೈ ಕುಕ್ಕವಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next