ಲಕ್ನೋ : ಗೋವುಗಳ ಹತ್ಯೆ ನಡೆಯುತ್ತಿದೆ ಎಂದು ಆರೋಪಿಸಿ ಬುಲಂದ್‌ಶಹರ್ ನಲ್ಲಿ ಭುಗಿಲೆದ್ದ ಹಿಂಸೆಗೆ ಓರ್ವ ಪೊಲೀಸ್ ಅಧಿಕಾರಿ ಮತ್ತು ಓರ್ವ ತರುಣ ಬಲಿಯಾದುದನ್ನು ಅನುಸರಿಸಿ ಸತ್ಯಾನ್ವೇಷಣೆ ನಡೆಸಿರುವ ಯುಪಿ ಪೊಲೀಸ್ ಮಹಾ ನಿರ್ದೇಶಕ ಒ ಪಿ ಸಿಂಗ್ ಅವರು ‘ಈ ಇಡಿಯ ಪ್ರಕರಣ ಒಂದು ಬಲು ದೊಡ್ಡ ಸಂಚು’ ಎಂದು ಹೇಳಿದ್ದಾರೆ.
‘ಬುಲಂದ್‌ಶಹರ್ ಪ್ರಕರಣ ಒಂದು ಬಹು ದೊಡ್ಡ ಸಂಚು. ಇದು ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ ವಿಷಯವಲ್ಲ. ಗೋವಿನ ಶವ ಪ್ರತಿಭಟನೆಯ ಸ್ಥಳದಲ್ಲಿ ಪ್ರತ್ಯಕ್ಷವಾದದ್ದು ಹೇಗೆ ? ಅದನ್ನು ಅಲ್ಲಿಗೆ ತಂದವರು ಯಾರು ?ಯಾಕಾಗಿ ತಂದರು ? ಯಾವ ಸನ್ನಿವೇಶದಲ್ಲಿ ತಂದರು ?’ ಎಂದು ಸಿಂಗ್ ಅವರು ಪ್ರಶ್ನಿಸಿರುವುದಾಗಿ ಎಎನ್‌ಐ ವರದಿ ಮಾಡಿದೆ.
ಶಿವ ಸೇನೆ ತನ್ನ ಮುಖವಾಣಿ ಸಾಮ್ನಾ ದಲ್ಲಿ ಬುಲಂದ್‌ಶಹರ್ ಘಟನೆ ಸೃಷ್ಟಿಸಲ್ಪಟ್ಟದ್ದು ಎಂದು ಕರೆದಿದೆಯಲ್ಲದೆ ಅಲ್ಲಿ ನಡೆದಿರುವ ಹಿಂಸೆಗೆ ತನ್ನ ಮಿತ್ರ ಪಕ್ಷವಾಗಿರುವ ಬಿಜೆಪಿಯ ವಿರುದ್ಧ ತೀವ್ರ ಟೀಕೆ ಮಾಡಿದೆ.
2014ರ ಲೋಕಸಭಾ ಚುನಾವಣೆಗೆ ಮುನ್ನ ಮುಜಫರನಗರ ದೊಂಬಿಯನ್ನು ನಡೆಸಲಾದಂತೆ ಬುಲಂದ್‌ಶಹರ್ ಘಟನೆಯನ್ನು ಕೂಡ ಸೃಷ್ಟಿಸಲಾಗಿದೆಯೇ ? 2019ರ ಲೋಕಸಭಾ ಚುನಾವಣೆಯನ್ನುಗೆಲ್ಲುವುದು ಸುಲಭವಿಲ್ಲ ಎಂಬುದು ಬಿಜೆಪಿಗೆ ಗೊತ್ತಿದೆ. ಆದುದರಿಂದಲೇ ಅದು ಬುಲಂದ್‌ಶಹರ್‌ನಲ್ಲಿ ಧಾರ್ಮಿಕ ಧ್ರುವೀಕರಣದ ಅಸ್ತ್ರವನ್ನು ಅದು ಬಳಸಿದೆ ಎಂದು ಶಿವ ಸೇನೆ ತನ್ನ ಸಂಪಾದಕೀಯದಲ್ಲಿ ಬರೆದಿದೆ.
ದನದ ಶವಗಳನ್ನು ಸಮೀಪದ ಅರಣ್ಯದಲ್ಲಿ ಚೆಲ್ಲಾಡಿರುವುದು ಪತ್ತೆಯಾದುದನ್ನು ಅನುಸರಿಸಿ ಬುಲಂದ್‌ಶಹರ್ ಜಿಲ್ಲೆಯ ಸಿಯಾನಾ ಪ್ರದೇಶದಲ್ಲಿ ಕಳೆದ ಸೋಮವಾರ ಸುಮಾರು 400 ಮಂದಿಯನ್ನು ಒಳಗೊಂಡ ಉದ್ರಿಕ್ತ ಗುಂಪೊಂದು ಪೊಲೀಸರ ವಿರುದ್ಧ ಕಾದಾಟ ನಡೆಸಿತ್ತು. ಈ ಹಿಂಸೆಗೆ ಇನ್ಸ್‌ಪೆಕ್ಟರ್ ಸುಬೋಧ್ ಕುಮಾರ್ ಸಿಂಗ್ ಮತ್ತು 20ರ ಹರೆಯದ ಸುಮಿತ್ ಕುಮಾರ್ ಬಲಿಯಾಗಿದ್ದರು. ಡಜನ್ ಗಟ್ಟಲೆ ವಾಹನಗಳನ್ನು ಉದ್ರಿಕ್ತರು ಬೆಂಕಿ ಹಚ್ಚಿ ಸುಟ್ಟಿದ್ದರು. ಉದ್ರಿಕ್ತರನ್ನು ನಿಯಂತ್ರಿಸಲು ಪೊಲೀಸರು ಗುಂಡು ಹಾರಿಸಿದ್ದರು.