ತುಮಕೂರು: ಕಳೆದ 2012ರಲ್ಲಿ ನಡೆಸಿದ ಬೇಸ್‌ಲೈನ್ ಸರ್ವೆ ಸಮೀಕ್ಷೆಯಲ್ಲಿ ಹೊರಗುಳಿದ ಎಲ್ಲಾ ಶೌಚಾಲಯ ರಹಿತ ಕುಟುಂಬಗಳಿಗೆ ಮುಂದಿನ 6 ವಾರದೊಳಗಾಗಿ ತಪ್ಪದೇ ಶೌಚಾಲಯ ನಿರ್ಮಿಸಿಕೊಡಬೇಕು ಎಂದು ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯದರ್ಶಿ ಪರಮೇಶ್ವರನ್ ಅಯ್ಯರ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು. ನಗರದ ಜಿಪಂ ಸಭಾಂಗಣದಲ್ಲಿ ಮಂಗಳವಾರ 10 ಜಿಲ್ಲೆಗಳ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ಸ್ವಚ್ಛ ಭಾರತ್ ಮಿಷನ್(ಗ್ರಾ)ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು.
ಬಯಲು ಬಹಿರ್ದೆಸೆ ಮುಕ್ತ ರಾಷ್ಟ್ರವನ್ನಾಗಿ ನಿರ್ಮಿಸಲು ಕೇಂದ್ರ ಮಹತ್ವಾಕಾಂಕ್ಷಿ ಸ್ವಚ್ಛಭಾರತ್ ಮಿಷನ್(ಗ್ರಾ) ಯೋಜನೆ ಜಾರಿಗೆ ತಂದಿದೆ. ಯೋಜನೆ ಜಾರಿಗೆ ಬಂದು 5 ವರ್ಷ ಕಳೆದಿದ್ದು, ಮುಂದಿನ 5 ವರ್ಷಗಳಿಗಾಗಿ 2ನೇ ಹಂತದಲ್ಲಿ ಸ್ವಚ್ಛಭಾರತ್(ಮಿಷನ್) ಯೋಜನೆ ಅನುಷ್ಠಾನಗೊಳಿಸಲು ಯೋಜಿಸಲಾಗಿದೆ. ಇದಕ್ಕಾಗಿ 1.4ಲಕ್ಷಕೋಟಿ ರೂ. ಅಂದಾಜು ವೆಚ್ಚದ ಅನುದಾನ ಬಿಡುಗಡೆ ಮಾಡಲಾಗುವುದೆಂದರು.
ನೀರಿನ ಜಲ ಪೂರಣ: ಗ್ರಾಮೀಣ ನೀರು ಸರಬರಾಜಿಗೆ ಸಂಬಂಧಿಸಿದಂತೆ ಸಭೆ ನಡೆಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶಗಳಲ್ಲಿ ಶೇ.40 ಮಾತ್ರ ಕುಡಿವ ನೀರು ಸರಬರಾಜು ಆಗುತ್ತಿದ್ದು, ಇದನ್ನು ಮುಂದಿನ 5 ವರ್ಷಗಳೊಳಗೆ ಶೇ.100 ಪ್ರಮಾಣಕ್ಕೆ ತರುವ ಉದ್ದೇಶವಿದೆ. ಇದಕ್ಕಾಗಿ ಪ್ರಧಾನಮಂತ್ರಿ ಮೋದಿ ಕಳೆದ 2019ರಲ್ಲಿ ಜಲ್-ಜೀವನ್ ಮಿಷನ್ ಎಂಬ ಹೊಸ ಯೋಜನೆ ಜಾರಿಗೆ ತಂದಿದ್ದಾರೆ. ಈ ಯೋಜನೆಯಡಿ ನೀರಿನ ಮೂಲಗಳ ಮರುಪೂರಣ, ಮಳೆ ನೀರು ಮರುಬಳಕೆಗೆ ಆದ್ಯತೆ ನೀಡಲಾಗುವುದೆಂದರು.
ಪ್ರಗತಿ ಸಾಧಿಸಿ: ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆ ರಾಜ್ಯ ಆಯುಕ್ತ ಡಾ.ಆರ್.ವಿಶಾಲ್, ಪ್ರಸಕ್ತ ವರ್ಷ ಜನಗಣತಿ ನಡೆಯಲಿದ್ದು, ಗಣತಿದಾರರು ಗಣತಿ ಕಾರ್ಯಕ್ಕೆ ಮನೆಗಳಿಗೆ ಭೇಟಿ ನೀಡಿದ ವೇಳೆ ಶೌಚಾಲಯದ ಸೌಲಭ್ಯವಿರುವ, ಅದನ್ನು ಬಳಕೆ ಮಾಡುತ್ತಿರುವ ಬಗ್ಗೆ ನಿಖರ ಮಾಹಿತಿ ಸಂಗ್ರಹಿಸಬೇಕು. ಈ ಮಾಹಿತಿ ಕಡ್ಡಾಯವಾಗಿ ಸಂಗ್ರಹಿಸಿದಾಗ ಮಾತ್ರ ಶೇ.100 ಶೌಚಾಲಯ ನಿರ್ಮಾಣ ಮಾಡಲು ಸಾಧ್ಯವೆಂದರು.
ಅಗತ್ಯ ಅನುದಾನ: ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್, ಜಿಲ್ಲೆಯಲ್ಲಿ ಪ್ರತಿ ತಾಲೂಕಿಗೆ ತಲಾ 10ರಂತೆ 100 ಸಮುದಾಯ ಶೌಚಾಲಯ ನಿರ್ಮಿಸಲಾಗಿದ್ದು, ಇದಕ್ಕಾಗಿ ಮೊದಲ ಹಂತದಲ್ಲಿ (ಪ್ರತಿ ಘಟಕಕ್ಕೆ 1.80ಲಕ್ಷ ರೂ.ಗಳಂತೆ ಅಂದಾಜು ವೆಚ್ಚದಂತೆ) 90ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ಉಳಿದಂತೆ ಅಗತ್ಯವಿರುವ 90 ಲಕ್ಷ ರೂ.ಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದೇ ರೀತಿ ಘನತ್ಯಾಜ್ಯ ಘಟಕ ನಿರ್ವಹಣೆಗಾಗಿ ಜಿಲ್ಲೆಗೆ 50 ಘಟಕ ನಿರ್ಮಿಸುವ ಗುರಿಯಿದ್ದು, 44 ಘಟಕಗಳ ನಿರ್ಮಾಣಕ್ಕೆ ಸರ್ಕಾರದಿಂದ ಅನುಮೋದನೆ ದೊರೆತಿದೆ.
ಘನತ್ಯಾಜ್ಯ ಘಟಕ ನಿರ್ಮಾಣಕ್ಕಾಗಿ ಸರ್ಕಾರದಿಂದ 4.35ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು. ಸದ್ಯಕ್ಕೆ 25 ಸ್ಥಳಗಳಲ್ಲಿ ತಾತ್ಕಾಲಿಕವಾಗಿ ಶೆಡ್ ನಿರ್ಮಿಸಿ ಕಸ ಸಂಗ್ರಹಣೆ ಮಾಡಲಾಗುತ್ತಿದೆ ಎಂದು ಶುಭಾ ಕಲ್ಯಾಣ್ ಸಭೆಗೆ ಮಾಹಿತಿ ನೀಡಿದರು. ಸಭೆಯಲ್ಲಿ ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ದಾವಣಗೆರೆ, ಹಾಸನ ಸೇರಿದಂತೆ 10 ಜಿಲ್ಲೆಗಳ ಜಿಪಂ ಸಿಇಒಗಳು, ವಿವಿಧ ಗ್ರಾಪಂಗಳ ಪಿಡಿಒ, ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ರಾಜ್ಯದಲ್ಲಿ ಬೇಸ್‌ಲೈನ್ ಸರ್ವೆ ಸಮೀಕ್ಷೆಯಿಂದ ಹೊರಗುಳಿದ ಕುಟುಂಬಗಳಿಗೆ 268341 ಹಾಗೂ ಬೇಸ್‌ಲೈನ್ ಸರ್ವೇಯಿಂದ ಯಾರೂ ತಪ್ಪಿಸಿಕೊಳ್ಳದಂತೆ ಉದ್ದೇಶಿತ ಕುಟುಂಬಗಳಿಗೆ 174990 ಸೇರಿದಂತೆ ಒಟ್ಟು 443331 ಶೌಚಾಲಯ ನಿರ್ಮಿಸುವ ಗುರಿ ಹೊಂದಲಾಗಿದೆ. ಈ ಪೈಕಿ ಈಗಾಗಲೇ 347670 ಶೌಚಾಲಯ ನಿರ್ಮಾಣಕ್ಕೆ ಕಾರ್ಯಾದೇಶ ನೀಡಲಾಗಿದೆ. ಜಿಲ್ಲೆಗೆ ಸಂಬಂಧಿಸಿದಂತೆ ಎಲ್‌ಒಬಿ ಅಡಿ ನಿಗದಿಪಡಿಸಲಾಗಿದ್ದ 10566 ಶೌಚಾಲಯ ನಿರ್ಮಿಸುವ ಗುರಿ ಪೈಕಿ ಶೇ. 98 ಪ್ರಗತಿ ಸಾಧಿಸಲಾಗಿದೆ. ಮುಂದಿನ 6 ವಾರಗಳೊಳಗೆ ಪೂರ್ಣ ಪ್ರಮಾಣದ ಪ್ರಗತಿ ಸಾಧಿಸಲು ಸೂಚಿಸಲಾಗಿದೆ.
-ಪರಮೇಶ್ವರನ್ ಅಯ್ಯರ್, ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯದರ್ಶಿ