ಮುಂಬಯಿ : ಲೋಕಸಭೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ನಲ್ಲಿ ಪಬ್ಲಿಕ್ ಶೇರ್ ಹೋಲ್ಡಿಂಗ್ ಮಿತಿಯನ್ನು ಶೇ. 25ರಿಂದ ಶೇ.35ಕ್ಕೆ ಏರಿಸಲಾದ ಪರಿಣಾಮವಾಗಿ ನಗದು ಲಭ್ಯತೆ ಕುಂಠಿತವಾಗಬಹುದೆನ್ನುವ ಭೀತಿಯಲ್ಲಿ ಮುಂಬಯಿ ಶೇರು ಮಾರುಕಟ್ಟೆ ಇಂದು 395 ಅಂಕಗಳ ಭಾರೀ ಕುಸಿತವನ್ನು ಕಂಡು ದಿನದ ವಹಿವಾಟನ್ನು 39,513.39 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 135.60 ಅಂಕಗಳ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು 11,811.15 ಅಂಕಗಳ ಮಟ್ಟದಲ್ಲಿ ನಿರಾಶಾದಾಯಕವಾಗಿ ಕೊನೆಗೊಳಿಸಿತು.
ಇಂದಿನ ಟಾಪ್ ಲೂಸರ್‌ಗಳ ಪೈಕಿ ಎಸ್ ಬ್ಯಾಂಕ್ ಶೇರು ಶೇ.8.36ರ ನಷ್ಟಕ್ಕೆ ಗುರಿಯಾಗಿ ಅಗ್ರ ಸ್ಥಾನಿಯಾಯಿತು. ಉಳಿದಂತೆ ಎನ್‌ಟಿಪಿಸಿ, ಮಹೀಂದ್ರ, ವೇದಾಂತ, ಸನ್ ಫಾರ್ಮಾ, ಟಿಸಿಎಸ್ ಶೇರುಗಳು ಶೇ.4.81ರ ಕುಸಿತವನ್ನು ಅನುಭವಿಸಿದವು.
ಇಂಡಸ್ ಇಂಡ್ ಬ್ಯಾಂಕ್, ಕೋಟಕ್ ಬ್ಯಾಕ್, ಎಸ್‌ಬಿಐ, ಐಟಿಸಿ, ಭಾರ್ತಿ ಏರ್‌ಟೆಲ್ ಮತ್ತು ಐಸಿಐಸಿಐ ಬ್ಯಾಂಕ್ ಶೇ.2.16ರ ಏರಿಕೆಯನ್ನು ಕಂಡವು.
ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,608 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 770 ಶೇರುಗಳು ಮುನ್ನಡೆ ಸಾಧಿಸಿದವು; 1,711 ಶೇರುಗಳು ಹಿನ್ನಡೆಗೆ ಗುರಿಯಾದವು; 127 ಶೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ.