ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ ಎರಡು ವರ್ಷ ಪೂರೈಸಿದ್ದಾರೆ. ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಪ್ರವಾಹ ಅದರ ಬೆನ್ನಲ್ಲೇ ಕೊರೊನಾ ಎದುರಾಗಿ ಸವಾಲು ತಂದೊಡ್ಡಿತಾದರೂ ಪರಿಸ್ಥಿತಿ ನಿಭಾಯಿಸುವಲ್ಲಿ ಯಶಸ್ವಿಯಾದರು. ಎರಡನೇ ವರ್ಷದಲ್ಲೂ ಕೊರೊನಾ ಹಾಗೂ ಪ್ರವಾಹ ಬೆನ್ನು ಬಿಡಲಿಲ್ಲ. ಸತತ ಎರಡನೇ ವರ್ಷದ ಸವಾಲು ಸಾಕಷ್ಟು ಸಮಸ್ಯೆಗಳನ್ನೂ ತಂದೊಡ್ಡಿತು. ಇದರ ನಡುವೆಯೂ ಕೃಷಿ, ಕೈಗಾರಿಕೆ, ನೀರಾವರಿ, ಶಿಕ್ಷಣ, ಆರೋಗ್ಯ ನಮ್ಮ ಸರಕಾರದ ಆದ್ಯತೆ ಎಂದು ಘೋಷಿಸಿದ್ದ ಅವರು ಸಾಧ್ಯವಾದಷ್ಟೂ ಆ ಕ್ಷೇತ್ರಗಳಿಗೆ ಹೆಚ್ಚು ಒತ್ತು ನೀಡಿದ್ದಾರೆ. ಸಂಪನ್ಮೂಲ ಕ್ರೋಢೀಕರಣದಲ್ಲೂ ರಾಜ್ಯ ಸರಕಾರಕ್ಕೆ ಅಂತಹ ಹಿನ್ನಡೆಯೇನೂ ಆಗಲಿಲ್ಲ ಎನ್ನಬಹುದು.
ಯಡಿಯೂರಪ್ಪ ಅವರ ವಿಶೇಷತೆ ಎಂದರೆ ಜನರ ಜತೆ ಹಾಗೂ ನಿರಂತರವಾಗಿ ಚಟುವಟಿಕೆಯಿಂದ ಇರುವುದು. ಇಲಾಖೆಗಳ ಸಭೆ, ಪಕ್ಷದ ಕಾರ್ಯಕ್ರಮಗಳಿಗೆ ಸರಿಯಾದ ಸಮಯಕ್ಕೆ ಹಾಜರಾಗಿ ಅಧಿಕಾರಿಗಳು ಹೇಳುವುದನ್ನೂ ಸಂಪೂರ್ಣವಾಗಿ ಕೇಳಿಸಿಕೊಂಡು ಅನಂತರ ತಮ್ಮ ಅಭಿಪ್ರಾಯ ತಿಳಿಸುವುದು. ಅನಂತರ ಅನುಷ್ಠಾನಕ್ಕೆ ತರುವುದು. ಅಭಿವೃದ್ಧಿ ವಿಚಾರಕ್ಕೆ ಬಂದರೆ ಕೊರೊನಾ ಆರ್ಥಿಕ ಸಂಕಷ್ಟದಿಂದ ಬಜೆಟ್‌ನಲ್ಲಿ ಘೋಷಿಸಿದ ಕಾರ್ಯಕ್ರಮಗಳ ಅನುಷ್ಠಾನ ಹಾಗೂ ಇಲಾಖಾವಾರು ನಿಗದಿಗೊಳಿಸಿದ ಅನುದಾನ ಬಿಡುಗಡೆ ಮಾಡಲು ಸಾಧ್ಯವಾಗಿಲ್ಲ. ಆದರೆ ಸಾಧ್ಯವಾದಷ್ಟೂ ತುರ್ತು ಕಾಮಗಾರಿ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡುವ ಕೆಲಸ ಮಾಡಲಾಗಿದೆ.
ಹಳೇ ಮೈಸೂರು, ಉತ್ತರ ಕರ್ನಾಟಕ, ಮುಂಬಯಿ ಕರ್ನಾಟಕ, ಕಲ್ಯಾಣ ಕರ್ನಾಟಕ ಹೀಗೆ ಎಲ್ಲ ಭಾಗಗಳಿಂದಲೂ ಯಡಿಯೂರಪ್ಪ ಮುಖ್ಯಮಂತ್ರಿಯಾಗುತ್ತಿದ್ದಂತೆ ಅತಿಯಾದ ನಿರೀಕ್ಷೆಗಳೇ ಇದ್ದವು. ಆದರೆ ಕೊರೊನಾ ಹಿನ್ನೆಲೆಯಲ್ಲಿ ಸರಕಾರದಿಂದ ಜನತೆಯೂ ಹೆಚ್ಚಿನದನ್ನು ನಿರೀಕ್ಷೆ ಮಾಡಲು ಆಗಲಿಲ್ಲ. ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಹಣ ವೆಚ್ಚವಾಗುವಂತಾಯಿತು.
ರಾಜಕೀಯವಾಗಿಯೂ ಯಡಿಯೂರಪ್ಪ ಎರಡು ವರ್ಷಗಳಲ್ಲಿ ಸಾಕಷ್ಟು ಸವಾಲು ಎದುರಿಸಿದರು. ವರ್ಷ ಮುಗಿಯುತ್ತಿದ್ದಂತೆ ನಾಯಕತ್ವ ಬದಲಾವಣೆ ವಿಚಾರದ ಮಾತುಗಳು ಪ್ರಾರಂಭವಾಗಿ ಎರಡು ವರ್ಷ ಪೂರೈಸುತ್ತಿರುವ ಈ ಹಂತದವರೆಗೂ ಮುಂದುವರಿದಿದೆ. ಇದರ ನಡುವೆಯೂ ಯಡಿಯೂರಪ್ಪ ಅಂದುಕೊಂಡಷ್ಟು ತೃಪ್ತಿಯಾಗಿ ಕೆಲಸ ಮಾಡಲು ಸಾಧ್ಯವಾಗದಿದ್ದರೂ ಇದ್ದಂತಹ ಪರಿಸ್ಥಿತಿಯಲ್ಲಿ ಆದಷ್ಟೂ ಉತ್ತಮ ಆಡಳಿತ ನೀಡಲು ಪ್ರಾಮಾಣಿಕ ಪ್ರಯತ್ನ ಪಟ್ಟಿದ್ದಾರೆ.
ಇದರ ನಡುವೆ ಸದ್ದು ಮಾಡಿರುವುದು ರಾಜಕೀಯ ಅಸ್ಥಿರತೆ. ಈ ವಿಚಾರ ಒಮ್ಮೆ ಪ್ರಸ್ತಾವವಾದರೆ ಇಡೀ ಆಡಳಿತ ಯಂತ್ರ ಯಾವ ರೀತಿ ಸ್ಥಗಿತವಾಗುತ್ತದೆ ಎಂಬುದಕ್ಕೆ ಹಿಂದಿನ ಹಲವಾರು ಉದಾಹರಣೆಗಳೇ ಸಾಕ್ಷಿ ಹೀಗಾಗಿ ಬಿಜೆಪಿ ಹೈಕಮಾಂಡ್ ಸಹ ಇಂತಹ ಸಂದರ್ಭದಲ್ಲಿ ಮೌನ ವಹಿಸುವುದು ಸರಿಯಲ್ಲ. ಸೂಕ್ತ ಕ್ರಮ ಅಥವಾ ಸಂದೇಶ ರವಾನಿಸಿದರೆ ಯಾವುದೇ ಗೊಂದಲಕ್ಕೆ ಅವಕಾಶ ಇರುವುದಿಲ್ಲ. ಮುಂದಿನ ದಿನಗಳಲ್ಲಾದರೂ ಅಂತಹ ಸಂದೇಶ ಬಂದು ರಾಜ್ಯದ ಆಡಳಿತ ಸುಸೂತ್ರವಾಗಿ ನಡೆಯುವುದೇ ಎಂಬುದನ್ನು ಕಾದುನೋಡಬೇಕಾಗಿದೆ.