Advertisement

BSNL 5G@ 2020

05:45 AM Jun 20, 2018 | Karthik A |

ಹೊಸದಿಲ್ಲಿ: ಎಲ್ಲವೂ ಅಂದುಕೊಂಡಂತಾದರೆ ಇನ್ನೆರಡು ವರ್ಷಗಳಲ್ಲಿ ಭಾರತಕ್ಕೂ 5ಜಿ ಸೇವೆ ಕಾಲಿಡಲಿದೆ. ಈ ಬಗ್ಗೆ BSNLನ ಮುಖ್ಯ ಪ್ರಧಾನ ನಿರ್ವಾಹಕ ಅನಿಲ್‌ ಜೈನ್‌ ಅವರೇ ಭರವಸೆ ನೀಡಿದ್ದು, ಉಳಿದ ದೇಶಗಳು ಆರಂಭಿಸುವ ದಿನದಂದೇ ಭಾರತದಲ್ಲೂ 5ಜಿ ಸೇವೆ ಆರಂಭಿಸುತ್ತೇವೆ ಎಂದಿದ್ದಾರೆ. ಸದ್ಯ ಭಾರತದ ಬಹಳಷ್ಟು ಪ್ರದೇಶಗಳಲ್ಲಿ BSNL 4ಜಿ ಸೇವೆಯನ್ನೇ ಆರಂಭಿಸಿಲ್ಲ. ಆದರೆ ಈಗಾಗಲೇ 5ಜಿ ಸೇವೆ ಆರಂಭಿಸಲು ಅವಶ್ಯವಾಗಿರುವ ಸಿದ್ಧತೆ ನಡೆಸುತ್ತಿದ್ದು, 2020ಕ್ಕೆ ಲಭ್ಯವಾಗಲಿದೆ ಎಂದು ಅಧಿಕಾರಿ ಹೇಳಿದ್ದಾರೆ.

Advertisement

ನೋಕಿಯಾ, ಕೋರಿಯಂಟ್‌ ಮತ್ತು ಝಡ್‌.ಟಿ.ಇ. ಕಂಪೆನಿಗಳು 5ಜಿ ಸೇವೆ ಆರಂಭಿಸಲು ಸಿದ್ಧತೆ ನಡೆಸಿವೆ. ಈ ಕಂಪೆನಿಗಳ ಜತೆ BSNL ಕೂಡ ಕೈಜೋಡಿಸಿದ್ದು ತ್ವರಿತಗತಿಯಲ್ಲಿ ಕೆಲಸಗಳಾಗುತ್ತಿವೆ ಎಂದು ಜೈನ್‌ ತಿಳಿಸಿದ್ದಾರೆ. ಅಲ್ಲದೆ 3ಜಿ ಮತ್ತು 4ಜಿ ಸೇವೆಯನ್ನು ಸಕಾಲದಲ್ಲಿ ಅಳವಡಿಸಿಕೊಳ್ಳುವಲ್ಲಿ ನಾವು ವಿಫ‌ಲವಾಗಿದ್ದೇವೆ. ಆದರೆ ಸುಧಾರಿತ 5ಜಿ ಸೇವೆ ವಿಚಾರದಲ್ಲಿ ನಾವು ಯಾವುದೇ ಕಾರಣಕ್ಕೂ ಹೆಜ್ಜೆ ಹಿಂದಿಡುವುದಿಲ್ಲ ಎಂದೂ ಭರವಸೆ ನೀಡಿದ್ದಾರೆ.

ಕಳೆದ ಫೆಬ್ರವರಿಯಲ್ಲಿ BSNL ಮತ್ತು ಜಪಾನ್‌ ನ ಎನ್‌ಟಿಟಿ ಅಡ್ವಾನ್ಸ್‌ ಟೆಕ್ನಾಲಜಿ ಕಾರ್ಪೋರೇಶನ್‌ ನ ಭಾರತದಲ್ಲಿರುವ ಸಂಸ್ಥೆ ವಿರ್ಗೋ ಕಾರ್ಪೋ ರೇಶನ್‌ ನಡುವೆ 5ಜಿ ಸೇವೆ ಅನ್ವಯ ಒಪ್ಪಂದವೇರ್ಪಟ್ಟಿದೆ. ಅಲ್ಲದೆ 2017ರ ಮಾರ್ಚ್‌ನಲ್ಲಿಯೇ BSNL ನೋಕಿಯಾ ಜತೆ 5ಜಿ ಸೇವೆ ಆರಂಭಿಸುವ ಸಂಬಂಧ ಒಪ್ಪಂದ ಮಾಡಿಕೊಂಡಿದೆ. ಈ ಎಲ್ಲ ತಯಾರಿಗಳು ನಡೆದಿದ್ದರೂ ಮೊಬೈಲ್‌ ಕಂಪೆನಿಗಳು 5ಜಿ ತಂತ್ರಜ್ಞಾನಕ್ಕೆ ಅನ್ವಯವಾಗುವ ರೀತಿಯಲ್ಲಿ ಸ್ಮಾರ್ಟ್‌ಫೋನ್‌ ಗಳನ್ನು ತಯಾರಿ ಮಾಡಬೇಕಿದೆ ಎಂದೂ BSNLನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next