ಮುಂಬಯಿ : 2017ರ ಅಂತಿಮ ವಹಿವಾಟಿನ ದಿನವಾಗಿರುವ ಇಂದು ಶುಕ್ರವಾರ ಮುಂಬಯಿ ಶೇರು ಪೇಟೆ 110 ಅಂಕಗಳ ಏರಿಕೆಯನ್ನು ಸಾಧಿಸಿದೆಯಾದರೆ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 10,500 ಅಂಕಗಳ ಗಡಿಯನ್ನು ಮತ್ತೆ ದಾಟುವ ಸಾಧನೆ ಮಾಡಿತು.
ಇಂದಿನಿಂದ ಆರಂಭಗೊಂಡಿರುವ ಜನವರಿ ತಿಂಗಳ ವಾಯಿದೆ ವಹಿವಾಟಿಗೆ ಮೊದಲ ದಿನವೇ ಭರ್ಜರಿ ಖರೀದಿಯ ಬಲ ಸಿಕ್ಕಿತು. ಕಳೆದ ಎರಡು ದಿನಗಳ ವಹಿವಾಟಿನಲ್ಲಿ ಸೆನ್ಸೆಕ್ಸ್ 162.58 ಅಂಕಗಳ ನಷ್ಟವನ್ನು ಭರಿಸಿತ್ತು.
ಇಂದು ಬೆಳಗ್ಗೆ 10.30ರ ಹೊತ್ತಿಗೆ ಸೆನ್ಸೆಕ್ಸ್ 150.65 ಅಂಕಗಳ ಏರಿಕೆಯೊಂದಿಗೆ 33,998.68 ಅಂಕಗಳ ಮಟ್ಟದಲ್ಲೂ, ನಿಫ್ಟಿ ಸೂಚ್ಯಂಕ 37.30 ಅಂಕಗಳ ಏರಿಕೆಯೊಂದಿಗೆ 10,515.20 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ರಿಲಯನ್ಸ್, ಲೂಪಿನ್, ಎಚ್ ಡಿ ಎಫ್ ಸಿ, ಮಾರುತಿ ಸುಜುಕಿ ಮತ್ತು ಸನ್ ಫಾರ್ಮಾ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು.
ಬೆಳಗ್ಗಿನ ಆರಂಭಿಕ ವಹಿವಾಟಿನಲ್ಲಿ ಒಟ್ಟು 2,379 ಶೇರುಗಳು ವಹಿವಾಟಿಗೆ ಒಳಪಟ್ಟಿದ್ದವು; ಆ ಪೈಕಿ 1,547 ಶೇರುಗಳು ಮುನ್ನಡೆ ಸಾಧಿಸಿದರೆ 675 ಶೇರುಗಳು ಹಿನ್ನಡೆಗೆ ಗುರಿಯಾದವು; 157 ಶೇರುಗಳು ಯಾವುದೇ ಬದಲಾವಣೆಯನ್ನು ಕಾಣಲಿಲ್ಲ.
ಪವರ್ ಗ್ರಿಡ್, ಟಾಟಾ ಸ್ಟೀಲ್, ಎಲ್ ಆ್ಯಂಡ್ ಟಿ, ಅದಾನಿ ಪೋರ್ಟ್, ಎಕ್ಸಿಸ್ ಬ್ಯಾಂಕ್, ಎಸ್‌ಬಿಐ, ಎನ್‌ಟಿಪಿಸಿ, ಏಶ್ಯನ್ ಪೇಂಟ್, ಎಚ್ ಡಿ ಎಫ್ ಸಿ, ಹೀರೋ ಮೋಟೋ ಕಾರ್ಪ್, ಐಟಿಸಿ, ಸನ್ ಫಾರ್ಮಾ, ಮಾರುತಿ ಸುಜುಕಿ, ಟಿಸಿಎಸ್, ರಿಲಯನ್ಸ್ ಶೇರುಗಳು ಉತ್ತಮ ಖರೀದಿ ಬೆಂಬಲವನ್ನು ಪಡೆದುಕೊಂಡವು.