ಬೆಂಗಳೂರು: ಎರಡು ಸುತ್ತುಗಳ ಸೀಟು ಹಂಚಿಕೆಯ ನಂತರವೂ ಸರಕಾರಿ ನರ್ಸಿಂಗ್ ಕಾಲೇಜುಗಳಲ್ಲಿ ಖಾಲಿ ಉಳಿದಿರುವ ಬಿ.ಎಸ್ಸಿ (ನರ್ಸಿಂಗ್) ಕೋರ್ಸಿನ ಸೀಟುಗಳನ್ನು ಅ.20 ರಂದು ಆಯಾ ಕಾಲೇಜುಗಳಲ್ಲಿ ಇದಕ್ಕಾಗಿಯೇ ರಚಿಸಿರುವ ಸಮಿತಿಯ ಮೂಲಕ ಮೆರಿಟ್ ಆಧಾರದಲ್ಲಿ ಹಂಚಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ತಿಳಿಸಿದ್ದಾರೆ.
ಈ ಬಗ್ಗೆ ಅವರು ಮಂಗಳವಾರ ಪತ್ರಿಕಾ ಪ್ರಕಟಣೆ ನೀಡಿದ್ದು, ಈಗಾಗಲೇ ನಡೆಸಲಾಗಿರುವ ಸೀಟು ಹಂಚಿಕೆಯಲ್ಲಿ ಸೀಟು ಪಡೆಯದೆ ಇರುವ ಆಸಕ್ತ ಅಭ್ಯರ್ಥಿಗಳು ಮಾತ್ರ ಈ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದು ಎಂದಿದ್ದಾರೆ.
ಈಗಾಗಲೇ ಪ್ರಾಧಿಕಾರದಿಂದ ಮೂಲ ದಾಖಲಾತಿಗಳ ಪರಿಶೀಲನಾ ಸ್ಲಿಪ್ ಪಡೆದುಕೊಂಡಿರುವ ಅಭ್ಯರ್ಥಿಗಳು ಇದಕ್ಕಾಗಿ ಅ.18 ಮತ್ತು 19ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ ಎಂದು ಅವರು ಹೇಳಿದ್ದಾರೆ.
ಪಿಜಿ ವೈದ್ಯಕೀಯ/ಡೆಂಟಲ್ ಸೀಟು ಹಂಚಿಕೆ:
ಎನ್.ಆರ್.ಐ/ಮ್ಯಾನೇಜ್ಮೆಂಟ್ ಕೋಟಾಗಳಲ್ಲಿ ತಾವು ಪಡೆದುಕೊಂಡಿದ್ದ ಸೀಟನ್ನು ಹಿಂದಿರುಗಿಸಿದ್ದ ಸ್ನಾತಕೋತ್ತರ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಅಭ್ಯರ್ಥಿಗಳು ಆನ್ಲೈನ್ ಮೂಲಕ ನಡೆಯುವ `ಸ್ಟ್ರೇ ವೇಕೆನ್ಸಿ’ ಸುತ್ತಿನ ಪ್ರೀ/ಪ್ಯಾರಾ ಕ್ಲಿನಿಕಲ್ ಸೀಟು ಹಂಚಿಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಹೈಕೋರ್ಟ್ ಆದೇಶದಂತೆ ಅವಕಾಶ ಕೊಡಲಾಗಿದೆ ಎಂದು ಪ್ರಾಧಿಕಾರ ತಿಳಿಸಿದೆ.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಇದಕ್ಕಾಗಿ ಪ್ರಾಧಿಕಾರಕ್ಕೆ ಮೂಲ ದಾಖಲೆಗಳನ್ನು ಸಲ್ಲಿಸಲು ಮತ್ತು ಪರಿಶೀಲನೆಯಲ್ಲಿ ಪಾಲ್ಗೊಳ್ಳಲು, ಹೆಸರು ನೋಂದಾಯಿಸಿಕೊಳ್ಳಲು, ತಮ್ಮ `ಆಪ್ಶನ್ಸ್; ನಮೂದಿಸಲು, ಕಡ್ಡಾಯ ಮುಂಜಾಗ್ರತಾ ಶುಲ್ಕ ಪಾವತಿಸಲು ಮತ್ತು ಡಿಮ್ಯಾಂಡ್ ಡ್ರಾಫ್ಟ್ ಸಲ್ಲಿಸಲು ಕಾಲಾವಕಾಶ ಕೊಡಲಾಗಿದೆ. ಈ ಸಂಬಂಧದ ವಿವರಗಳನ್ನು ಪ್ರಾಧಿಕಾರದ ವೆಬ್ ಸೈಟ್ //kea.kar.nic.in ನೋಡಬಹುದು ಎಂದು ಅವರು ತಿಳಿಸಿದ್ದಾರೆ.