ಬೆಂಗಳೂರು: ಪರ್ಸಂಟೇಜ್ ಸಿಸ್ಟಂನ ಜನಕ ಎಂದು ಆರೋಪಿಸಿ ಎಚ್ಚರಿಕೆ ನೀಡಿದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಗುರುವಾರ ತಿರುಗೇಟು ನೀಡಿದ್ದು, ನಾನು ಧಮ್ಕಿಗೆ ಬಗ್ಗುವವನಲ್ಲಾ, ಕೇಂದ್ರದಲ್ಲಿ ಇರುವ ನರೇಂದ್ರ ಮೋದಿ ಸರ್ಕಾರ ನಮ್ಮದು..ನೀವು ಮಾಡಿದಕ್ಕೆ ಪ್ರತಿಯಾಗಿ ಮಾಡಲು ನಮಗೂ ಗೊತ್ತಿದೆ ಎಂದಿದ್ದು, ಸಂಜೆ ನಾಲ್ಕು ಗಂಟೆಗೆ ತುರ್ತು ಪತ್ರಿಕಾ ಗೋಷ್ಠಿ ನಡೆಸಿ ಭ್ರಷ್ಟಾಚಾರದ ಕುರಿತಾಗಿನ ಅನೇಕ ಪ್ರಮುಖ ದಾಖಲೆಗಳನ್ನು ಬಿಡುಗಡೆ ಮಾಡುವುದಾಗಿ ಕುತೂಹಲ ಮೂಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ ‘ಕುಮಾರಸ್ವಾಮಿ ಮತ್ತು ಕುಟುಂಬದವರೂ ಅನೇಕ ಭೂ ಹಗರಣ ಮಾಡಿದ್ದರು. ಪುಸ್ತರ ಮುದ್ರಿಸಿ ಹಂಚಿದ್ದೇವೆ.ಇದರಲ್ಲಿ ಗುಟ್ಟೇನಿಲ್ಲ. ರಾಜ್ಯದ ಇತಿಹಾಸದಲ್ಲಿ ಅವರ ಕುಟುಂಬ ಮಾಡಿದಷ್ಟು ಭೂ ಹಗರಣಗಳನ್ನು ಬೇರೆ ಯಾರೂ ಮಾಡಿಲ್ಲ ಎಂದರು.
ಸಿಎಂ ಸ್ಥಾನ ಶಾಶ್ವತ ಅಲ್ಲ. ಸೇಡು ತೀರಿಸಿಕೊಳ್ಳುವ ರಾಜಕಾರಣ ಮಾಡುತ್ತಿದ್ದಾರೆ.ನಾವು ಅಧಿಕಾರದಲ್ಲಿದ್ದಾಗ ಸೇಡು ತೀರಿಸಿಕೊಳ್ಳುವ ರಾಜಕಾರಣ ಮಾಡಿರಲಿಲ್ಲ ಎಂದರು.
ಕಾಂಗ್ರೆಸ್‌ನ ಮಾಜಿ ಸಚಿವ ಎ ಮಂಜು ಅವರು ಯಾರ ಬಗ್ಗೆ ಆರೋಪ ಮಾಡಿದ್ದು? ನಿಮ್ಮ ಕುಟುಂಬದ ವಿರುದ್ಧ ತಾನೇ ಅದಕ್ಕೆ ಉತ್ತರ ಕೊಡಿ ಎಂದು ಕಿಡಿ ಕಾರಿದರು.
ಕುಮಾರಸ್ವಾಮಿ ಅವರೇ ನಿಮಗೆ ನನ್ನ ವಿರುದ್ಧ ಆರೋಪಿಸುವ ನೈತಿಕ ಹಕ್ಕು ಇಲ್ಲ. ನೀವೂ ಎಚ್ಚರಿಕೆ ವಹಿಸಿ ಮಾತನಾಡಿ. ನಿಮ್ಮ ವಿರುದ್ಧ ಡಿನೋಟಿಫಿಕೇಷನ್ ಮತ್ತೊಂದು ಮಗದೊಂದು ಹಗರಣಗಳಿವೆ. ಸುಪ್ರೀಂ ಕೋರ್ಟ್‌ನಲ್ಲಿ ನಿಮ್ಮ ಮೇಲೆ ಕೇಸ್ ಇಲ್ಲವೇನೊ ಎಂದು ಪ್ರಶ್ನಿಸಿದರು.
ಶಿವರಾಮ ಕಾರಂತ ಬಡಾವಣೆ ಡಿ ನೋಟಿಫಿಕೇಷನ್‌ಗೆ ಸಂಬಂಧಿಸಿ ಅಧಿಕಾರ ನಿಮ್ಮ ಬಳಿ ಇದೆ ಅಲ್ಲವೇ ತನಿಖೆ ಮಾಡಿಸಿ ಎಂದರು.
ನನ್ನ ಇತಿಮಿತಿ ಗೊತ್ತಿದೆ. ಎಲ್ಲಾ ಬಣ್ಣ ಬಯಲಾಗುತ್ತದೆ ಎಂದರು.