Advertisement
ಗೌರಿಬಿದನೂರು ನಗರ ಸಮೀಪದ ಕಲ್ಲೂಡಿ ಬಳಿಯ ಮೂಗನಹಳ್ಳದ ಬಳಿ ತೀಕ್ಷ್ಣವಾದ ರಸ್ತೆ ತಿರುವಿದ್ದು (ಶಾರ್ಪ್‌ಕರ್ವ್) ಈ ತಿರುವಿನಲ್ಲಿ ದೊಡ್ಡ ಲಾರಿ, ಕಾರು, ದ್ವಿಚಕ್ರ ವಾಹನುಗಳು ವೇಗವಾಗಿ ಬಂದು ತಿರುವು ಪೂರ್ಣಗೊಳಿಸಲಾಗದೇ ಮೇಲು ಸೇತುವೆಯಿಂದ ಪ್ರಪಾತಕ್ಕೆ ಬಿದ್ದು ಸಾಕಷ್ಟು ಜನ ಪ್ರಾಣ ಕಳೆದುಕೊಂಡಿದ್ದು, ಇತ್ತೀಚೆಗೆ ನಾಲ್ಕು ಚಕ್ರ ವಾಹನವು ಸೇತುವೆಯಿಂದ ಕೆಳಗೆ ಬಿದ್ದು 9 ಜನ ತೀವ್ರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದಾರೆ.
Related Articles
Advertisement
ರಸ್ತೆ ಕಾಮಗಾರಿ ಅಪೂರ್ಣ: ಇತ್ತೀಚಿಗೆ ಈ ರಸ್ತೆಯ ಕಾಮಗಾರಿ ಪೂರ್ಣಗೊಳ್ಳದಿದ್ದರೂ ಟೋಲ್ ವಸೂಲಿ ಮಾಡಲಾಗುತ್ತಿದೆ ಎಂದು ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದು ಸ್ಥಗಿತಗೊಳಿಸಲಾಗಿತ್ತು. ಆ ನಂತರ ಶೇ.75ರಷ್ಟು ಕಾಮಗಾರಿ ಪೂರ್ಣಗೊಂಡಿರುವುದಾಗಿ ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಿ ಮತ್ತೆ ಟೋಲ್ ವಸೂಲಿ ಪ್ರಾರಂಭಿಸಲಾಗಿದೆ. ಆದರೆ ರಸ್ತೆ ಕಾಮಗಾರಿ ಮಾತ್ರ ಪೂರ್ಣಗೊಳಿಸಲಾಗಿಲ್ಲ.
ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ವಿಳಂಬ: ಕಲ್ಲೂಡಿ ಬಳಿಯ ಸೇತುವೆ ಕಾಮಗಾರಿ ಪ್ರಾರಂಭ ಮಾಡಲು ಕಂದಾಯ ಇಲಾಖೆಯು ಭೂಸ್ವಾಧೀನ ನಡೆಸಿ ಜಮೀನು ಮಾಲೀಕರಿಗೆ ಸೂಕ್ತ ಪರಿಹಾರ ನೀಡಿ ಭೂಮಿಯನ್ನು ಬಿಡಿಸಿಕೊಡುವ ಪ್ರಕ್ರಿಯೆಯಲ್ಲಿ ವಿಳಂಬವಾಗಿದೆ ಎಂದು ಕಾಮಗಾರಿ ಉಸ್ತುವಾರಿ ಕೆಆರ್‌ಡಿಸಿಎಲ್ ಕಿರಿಯ ಅಭಿಯಂತರ ಸ್ವಾಮಿ ತಿಳಿಸಿದ್ದಾರೆ. ಕಡತವು ರಾಜ್ಯ ಸರ್ಕಾರದ ಆರ್ಥಿಕ ಇಲಾಖೆಯ ಅನುಮೋದನೆಗೆ ಹೋಗಿದ್ದು, ಮುಗಿದ ನಂತರ ಕಾಮಗಾರಿ ಪ್ರಾರಂಭಿಸಲಾಗುವುದು. ಅಪಘಾತಗಳು ಹೆಚ್ಚುತ್ತಿರುವುದರಿಂದ ಸೇತುವೆ ಬಳಿ ಸೂಕ್ತ ಹಂಪ್ ಹಾಗೂ ವೇಗಮಿತಿ ಕಡಿಮೆ ಮಾಡಲು ಬ್ಯಾರಿಕೇಡ್ ಅಳವಡಿಸುತ್ತೇವೆ. ಅದೇ ರೀತಿ ಗುಡಿಬಂಡೆ ರಸ್ತೆಯ ವೃತ್ತದಲ್ಲಿಯೂ ಸಹ ವೇಗಮಿತಿ ಅಳವಡಿಸುತ್ತೇವೆ ಎಂದು ತಿಳಿಸಿದ್ದಾರೆ.
ಆಂಧ್ರಪ್ರದೇಶದ ಗಡಿಯಿಂದ ಯಲಹಂಕ ವರೆಗೆ ರಾಜ್ಯ ಹೆದ್ದಾರಿ ಕಾಮಗಾರಿ 2018ರಲ್ಲಿಯೇ ಪೂರ್ಣಗೊಳ್ಳಬೇಕಿದ್ದರೂ ಇಂದಿಗೂ ಪೂರ್ಣಗೊಂಡಿಲ್ಲ. ಆದರೆ ಟೋಲ್ ಸಂಗ್ರಹ ನಡೆಯುತ್ತಿದೆ. ಗೌರಿಬಿದನೂರು ನಗರ ವ್ಯಾಪ್ತಿಯ ಕಲ್ಲೂಡಿ ಬಳಿಯ ಸೇತುವೆ ಕಾಮಗಾರಿ ಪ್ರಾರಂಭಕ್ಕೆ ಭೂಸ್ವಾಧೀನ ಪ್ರಕ್ರಿಯೆ ವಿಳಂಬವಾಗಿದೆ ಎಂದು ಕಾರಣ ಹೇಳುತ್ತಿರುವುದು ಸರಿಯಲ್ಲ. ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು -ಜಿ.ಆರ್.ಮೋಹನ ಕುಮಾರ್ ಕಾದಲವೇಣಿ, ಸಮಾಜ ಸೇವಕ * ವಿ.ಡಿ.ಗಣೇಶ್, ಗೌರಿಬಿದನೂರು