Advertisement

ಅರಣ್ಯ ರೋದನವಾದ ಕಾಡುಪಂಜ ಸೇತುವೆ ಬೇಡಿಕೆ

12:50 PM Jul 24, 2018 | Team Udayavani |

ಅರಂತೋಡು: ತೊಡಿಕಾನ ಗ್ರಾಮದ ಕಾಡುಪಂಜ (ಎರುಕಡುಪು) ಎಂಬಲ್ಲಿ ಹೊಳೆಗೆ ಸೇತುವೆ ನಿರ್ಮಾಣವಾಗಬೇಕೆಂಬ ಬೇಡಿಕೆ ಹಲವು ವರ್ಷಗಳಿಂದ ಆ ಭಾಗದ ಜನರು ಜನಪ್ರತಿನಿಧಿಗಳ ಮುಂದಿಟ್ಟರೂ ಇನ್ನೂ ಅವರ ಬೇಡಿಕೆ ಕನಸಾಗಿಯೇ ಉಳಿದಿದೆ.

Advertisement

ಕಾಡುಪಂಜ ಊರುಪಂಜ ಭಾಗದಲ್ಲಿ 40ಕ್ಕೂ ಅಧಿಕ ಮನೆಗಳಿವೆ. ಅವರು ಬೇಸಿಗೆಯಲ್ಲಿ ಹೊಳೆ ದಾಟಿ ಹೋಗಬಹುದು. ಮಳೆಗಾಲದಲ್ಲಾದರೆ 7ರಿಂದ 8 ಕಿ.ಮೀ. ಸುತ್ತು ಬಳಸಿ ನಿತ್ಯದ ಕೆಲಸಗಳಿಗೆ, ಶಾಲಾ ಮಕ್ಕಳು ಕಲ್ಲುಗುಂಡಿ, ಅರಂತೋಡು ಮಾರ್ಗವನ್ನು ಸುತ್ತುಬಳಿಸಿ ತೊಡಿಕಾನಕ್ಕೆ ಹಾಗೂ ಸುಳ್ಯಕ್ಕೆ ಬರಬೇಕಾಗುತ್ತದೆ. ಕೆಲವು ವರ್ಷಗಳ ಹಿಂದೆ ಈ ಭಾಗದ ಜನರು ಸೇರಿಕೊಂಡು ಬಿದಿರು, ಅಡಿಕೆ ಮರ ಹಾಗೂ ಅದಕ್ಕೆ ಕಬ್ಬಿಣದ ಸಲಾಕೆಗಳನ್ನು ಬಳಸಿಕೊಂಡು ತಾತ್ಕಾಲಿಕ ಸೇತುವೆ ಮಾಡಿದ್ದರು. ಆದರೆ ಅದು ಕಾಲ ಕಳೆದಂತೆ ಶಿಥಿಲಗೊಂಡು ನೀರಿನಲ್ಲಿ ಕೊಚ್ಚಿ ಹೋಯಿತು.

ಭರವಸೆ ಮಾತ್ರ
ಲೋಕಸಭೆ, ವಿಧಾನಸಭೆ, ಜಿ.ಪಂ., ತಾ.ಪಂ. – ಹೀಗೆ ಎಲ್ಲ ಚುನಾವಣೆಗಳು ಬಂದಾಗ ಈ ಭಾಗದ ಜನರು ತಮ್ಮಲ್ಲಿಗೆ ಮತ ಕೇಳಲು ಬರುವ ನಾಯಕರಲ್ಲಿ ಸೇತುವೆಯ ಬೇಡಿಕೆ ಇಡುತ್ತಾರೆ. ಆಗ ನಾಯಕರು ಗೆದ್ದು ಬಂದರೆ ಪ್ರಥಮ ಆದ್ಯತೆಯಾಗಿ ಈ ಕೆಲಸ ಮಾಡಿಕೊಡುತ್ತೇವೆ ಎನ್ನುವ ಭರವಸೆ ನೀಡುತ್ತಾರೆ ಹೊರತು ಇದುವರೆಗೂ ಈ ಬಗ್ಗೆ ಯಾವುದೇ ಜನಪ್ರತಿನಿಧಿ ಚಿಂತನೆ ನಡೆಸಿಲ್ಲ ಎನ್ನುತ್ತಾರೆ ಈ ಭಾಗದ ಜನರು. ಇನ್ನಾದರೂ ಜನಪ್ರತಿನಿಧಿಗಳು ಹಾಗೂ ಇಲಾಖಾಧಿಕಾರಿಗಳು ಸೇತುವೆ ಮಾಡುವುದರ ಮೂಲಕ ಈ ಭಾಗದವರ ಸಮಸ್ಯೆಗೆ ಸ್ಪಂದಿಸಬೇಕಾಗಿದೆ.

ಮಕ್ಕಳಿಗೆ ಕಷ್ಟ
ಕಾಡುಪಂಜ ಸೇತುವೆ ನಮ್ಮ ಪ್ರಮುಖ ಬೇಡಿಕೆ. ಈ ಬಾರಿ ಶಾಸಕರು ಸೇತುವೆ ಮಾಡಿಕೊಡಬೇಕೆನ್ನುವುದು ನಮ್ಮ ಪ್ರಮುಖ ಬೇಡಿಕೆಯಲ್ಲೊಂದು. ಕಾಡುಪಂಜದ ಜನರು ನ್ಯಾಯಬೆಲೆ ಅಂಗಡಿಗೆ ತೊಡಿಕಾನಕ್ಕೆ ಬರಬೇಕು. ಆದರೆ ಸೇತುವೆ ಇಲ್ಲದೆ ಸುತ್ತು ಬಳಸಿ ಬರಬೇಕಾದ ಸ್ಥಿತಿ ಇದೆ. ಅನೇಕ ಶಾಲಾ ಮಕ್ಕಳು ಸುತ್ತುವರಿದು ಬರುವ ಸ್ಥಿತಿ ಇದೆ. 
– ಕೇಪಣ್ಣ, ಸ್ಥಳೀಯರು

ಬಹಳ ಅಗತ್ಯವಿದೆ
ಸೇತುವೆ ನಿರ್ಮಾಣಕ್ಕೆ ಕೋಟಿಗಟ್ಟಲೆ ರೂ. ಅನುದಾನ ಬೇಕಾಗಬಹುದು. ನಮ್ಮ ಗ್ರಾ.ಪಂ. ವತಿಯಿಂದ ಇದಕ್ಕೆ ಅನುದಾನ ಹೊಂದಿಸಿಕೊಡುವುದು ಕಷ್ಟ. ಸೇತುವೆ ನಿರ್ಮಾಣ ಮಾಡುವುದಕ್ಕೆ ಶಾಸಕರು ಪ್ರಸ್ತಾವನೆ ಸಲ್ಲಿಸಿದ್ದಾರೆ. ಇಲ್ಲಿಯ ಜನರ ಸಮಸ್ಯೆ ನಮಗೆ ತಿಳಿದಿದ್ದು, ಸೇತುವೆ ನಿರ್ಮಾಣ ಮಾಡುವ ಅಗತ್ಯ ಇದೆ. 
– ಶಿವಾನಂದ ಕುಕ್ಕುಂಬಳ, ಅರಂತೋಡು ಗ್ರಾ.ಪಂ. ಉಪಾಧ್ಯಕ್ಷರು

Advertisement

ಶಾಸಕರು ಪ್ರಯತ್ನಿಸಲಿ
ಸೇತುವೆ ನಿರ್ಮಾಣದ ಬೇಡಿಕೆ ಹಲವು ವರ್ಷಗಳ ಸ್ಥಳೀಯರ ಬೇಡಿಕೆಯಾಗಿದೆ. ಇಲ್ಲಿಯ ಜನರು ಮಳೆಗಾಲದಲ್ಲಿ ಸಂಚಾರಕ್ಕಾಗಿ ನರಕಯಾತನೆ ಅನುಭವಿಸುತ್ತಿದ್ದಾರೆ. ಇಲ್ಲಿ ಸೇತುವೆ ನಿರ್ಮಾಣಕ್ಕಾಗಿ ಶಾಸಕರು ಪ್ರಯತ್ನಪಡಬೇಕಾಗಿದೆ. 
– ನಾಗೇಶ್‌, ಗ್ರಾ.ಪಂ. ಸದಸ್ಯರು

— ತೇಜೇಶ್ವರ್‌ ಕುಂದಲ್ಪಾಡಿ

Advertisement

Udayavani is now on Telegram. Click here to join our channel and stay updated with the latest news.

Next