ಶಿವಮೊಗ್ಗ: ನಗರದಲ್ಲಿ ಭಾನುವಾರ ಆಯೋಜಿಸಿದ್ದ ಬ್ರಾಹ್ಮಣ ಸಮುದಾಯದ ವಧು-ವರರ ಮುಖಾಮುಖೀ ಕಾರ್ಯಕ್ರಮಕ್ಕೆ ಯುವತಿಯರೇ ಬರಲಿಲ್ಲ. ಇದರಿಂದ ನಿರಾಶರಾದ ವಿವಾಹಾಕಾಂಕ್ಷಿ ಯುವಕರು ಮತ್ತು ಅವರ ಕುಟುಂಬಸ್ಥರು ಆಯೋಜಕರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ಗಲಾಟೆ ಹೆಚ್ಚಾದ ಹಿನ್ನೆಲೆಯಲ್ಲಿ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ನಗರದ ದೈವಜ್ಞ ಕಲ್ಯಾಣ ಮಂದಿರದಲ್ಲಿ ಭಾನುವಾರ ರಾಜ್ಯಮಟ್ಟದ ಬ್ರಾಹ್ಮಣ ಸಮುದಾಯದ ವಧು-ವರರ ಮುಖಾ ಮುಖೀ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮುಖಾಮುಖೀಗೆ ವಿವಾಹಾಕಾಂಕ್ಷಿ ಯುವ ಕರು ಬಂದಿದ್ದರು. ಆದರೆ, ಯುವತಿಯರೇ ಬಂದಿರಲಿಲ್ಲ.
ಸಮಾವೇಶಕ್ಕೆ ಬಂದ ವರರಿಗೆ ವಧುವನ್ನೇ ತೋರಿಸದ ಕಾರಣ ವರ ಮತ್ತು ಅವರ ಕುಟುಂಬಸ್ಥರು ಆಯೋಜಕರನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡರು. ಈ ಸಮಾವೇಶಕ್ಕಾಗಿ ಪ್ರತಿಯೊಬ್ಬರಿಂದ 3 ರಿಂದ 5 ಸಾವಿರ ರೂ.ವರೆಗೂ ಹಣ ಪಡೆಯಲಾಗಿತ್ತು. ನೂರಾರು ಯುವಕರಿಂದ ಲಕ್ಷಾಂತರ ರೂ.ಹಣ ಸಂಗ್ರಹಿಸ ಲಾಗಿತ್ತು. ನಿರೀಕ್ಷೆಗೂ ಮೀರಿ ಯುವಕರು ಆಗಮಿಸಿದ್ದರು. ಆದರೆ, ಯುವತಿಯರು ಆಗಮಿ ಸಿರಲಿಲ್ಲ. ಇದರಿಂದ ಆಕ್ರೋಶಗೊಂಡು ಅಪೇಕ್ಷಿತರು ಹಣ ವಾಪಸ್ ಕೊಡುವಂತೆ ಆಯೋಜಕಿ ವಿದ್ಯಾ ಅವರನ್ನು ತರಾಟೆಗೆ ತೆಗೆದುಕೊಂಡರು.
ಗಲಾಟೆ ಹೆಚ್ಚಾದ ಹಿನ್ನೆಲೆಯಲ್ಲಿ ದೊಡ್ಡಪೇಟೆ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಸ್ಥಿತಿ ತಿಳಿಗೊಳಿಸಿದರು. ಆಯೋಜಕರನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.