ಬೆಂಗಳೂರು: ನಕಲಿ ಕೀ ಬಳಸಿ ಬ್ಯೂಟಿಷಿಯನ್ ಮನೆಯಲ್ಲಿ ಕಳ್ಳತನ ಮಾಡಿದ್ದ ಮೂವರು ಆರೋಪಿಗಳನ್ನು ಕೆಂಪೇಗೌಡ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಚಾಮರಾಜಪೇಟೆ ದಾಸಪ್ಪ ಗಾರ್ಡನ್ ನಿವಾಸಿ ಆನಂದ್ (34), ಶ್ರೀನಗರ ರಾಘವೇಂದ್ರ ಬ್ಲಾಕ್ ನಿವಾಸಿ ನಾರಾಯಣ (43) ಹಾಗೂ ಕುಮಾರಸ್ವಾಮಿ ಲೇಔಟ್ ನಿವಾಸಿ ಕಿರಣ್ (33) ಬಂಧಿತರು.
ಆರೋಪಿಗಳಿಂದ 4 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 3.70 ಲಕ್ಷ ರೂ. ನಗದು ಜಪ್ತಿ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಆರೋಪಿಗಳ ಪೈಕಿ ಕಿರಣ್ ಸಲೂನ್ ನಡೆಸುತ್ತಿದ್ದ. ಆನಂದ್ ಲಿಫ್ಟ್ ಟೆಕ್ನಿಷಿಯನ್ ಹಾಗೂ ಕಬಾಬ್ ಅಂಗಡಿ ನಡೆಸುತ್ತಿದ್ದ. ನಾರಾಯಣ್ ಫುಡ್ ಡೆಲಿವರಿ ಬಾಯ್ ಆಗಿದ್ದ. ಮೂವರು ಹಲವು ವರ್ಷಗಳಿಂದ ಸ್ನೇಹಿತರಾಗಿದ್ದು, ದೂರುದಾರೆ ಮತ್ತು ಆಕೆಯ ಕುಟುಂಬದ ಬಗ್ಗೆ ತಿಳಿದುಕೊಂಡಿದ್ದ ಕಿರಣ್, ತನ್ನ ಸ್ನೇಹಿತರ ಜತೆ ಸಂಚು ರೂಪಿಸಿ ಮನೆ ಕಳ್ಳತನ ಮಾಡಿ ದ್ದಾನೆ. ಕಿರಣ್ ನಡೆಸುತ್ತಿದ್ದ ಸಲೂನ್ ಮಳಿಗೆ ಮುಂಭಾಗವೇ ದೂರುದಾರೆಯ ತಂದೆ ಮೊಟ್ಟೆ ಮಾರಾಟ ಮಳಿಗೆ ನಡೆಸುತ್ತಿದ್ದರು. ಹೀಗಾಗಿ ದೂರು ದಾರೆ ಮತ್ತು ಆಕೆಯ ಕುಟುಂಬ ಸದಸ್ಯರ ಚಟು ವಟಿಕೆ ಗಳು ಹಾಗೂ ಆರ್ಥಿಕ ಸ್ಥಿತಿ ಬಗ್ಗೆ ತಿಳಿದುಕೊಂಡಿದ್ದ. ಮೊದಲೇ ಸಂಚು ರೂಪಿಸಿದಂತೆ ಆರೋಪಿ ಕಿರಣ್ ಉಚಿತ ಮೇಕಪ್ ಮಾಡಿಸುವುದಾಗಿ ಹೇಳಿ ನಾಲ್ವರು ಯುವತಿಯರನ್ನು ತನ್ನ ಮನೆಗೆ ಕರೆಸಿದ್ದ. ಮೇಕಪ್ ಮಾಡಬೇಕೆಂದು ಹೇಳಿ ದೂರುದಾರೆ ಬ್ಯೂಟಿಷಿಯನ್ ರನ್ನೂ ಮನೆಗೆ ಕರೆಸಲಾಗಿತ್ತು. ಮೇಕಪ್ ಮಾಡುವ ಸಂದರ್ಭದಲ್ಲಿ ಬ್ಯೂಟಿಷಿಯನ್‌ರ ಗಮನ ಬೇರೆಡೆ ಸೆಳೆದು ಆಕೆಯ ಪರ್ಸ್‌ನಲ್ಲಿದ್ದ ಮನೆ ಬೀಗದ ಕೀ ಕಳವು ಮಾಡಿದ್ದ. ಅದನ್ನು ತನ್ನ ಸಹಚರರಿಗೆ ಕೊಟ್ಟು ನಕಲಿ ಕೀ ಮಾಡಿಸಿಕೊಂಡಿದ್ದ.
ಬಳಿಕ ಅಸಲಿ ಕೀಯನ್ನು ಆಕೆಯ ಪರ್ಸ್‌ನಲ್ಲೇ ಇಟ್ಟಿದ್ದರು. ಕೆಲಸ ಮುಗಿಸಿ ಬ್ಯೂಟಿಷಿಯನ್ ಮನೆಗೆ ವಾಪಸ್ ಹೋಗಿದ್ದರು. ಕೆಲ ದಿನಗಳ ಬಳಿಕ ಮಾ. 29ರಂದು ಬ್ಯೂಟಿಷಿಯನ್ ಮನೆಯಲ್ಲಿ ಯಾರೂ ಇರಲಿಲ್ಲ. ಇದೇ ಸಂದರ್ಭದಲ್ಲಿ ನಕಲೀ ಕೀ ಬಳಸಿ ಒಳನುಗ್ಗಿದ್ದ ಆರೋಪಿಗಳು, ಚಿನ್ನಾಭರಣ ಹಾಗೂ ನಗದು ದೋಚಿ ಪರಾಗಿಯಾಗಿದ್ದರು. ಕಳವು ಚಿನ್ನಾ ಭರಣಗಳನ್ನು ಮಾರಾಟ ಮಾಡಿ, ತಮ್ಮ ಸಾಲ ಹಾಗೂ ಮೋಜಿನ ಜೀವನ ನಡೆಸಿದ್ದರು ಎಂದು ಹೇಳಿದರು.
ಆಟೋ ಕೊಟ್ಟ ಸುಳಿವು: ಬ್ಯೂಟಿಷಿಯನ್ ಮನೆ ಯಲ್ಲಿದ್ದ ಸಿಸಿ ಕ್ಯಾಮರಾಗಳು ನಿಷ್ಕ್ರಿಯ ಗೊಂಡಿತ್ತು. ಆರಂಭದಲ್ಲಿ ಆರೋಪಿಗಳ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಆದರೆ ಮನೆ ಸಮೀಪದ ಬೇರೊಂದು ಕ್ಯಾಮರಾದಲ್ಲಿ ಆರೋಪಿ ಗಳು ಆಟೋದಲ್ಲಿ ಹೋಗಿದ್ದು ಗೊತ್ತಾಗಿತ್ತು. ಅದರ ನೋಂದಣಿ ಸಂಖ್ಯೆ ಆಧರಿಸಿ, ಆಟೋ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆರೋಪಿಗಳ ಸುಳಿವು ಪತ್ತೆಯಾಯಿತು. ಈ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.