ಮುಂಬಯಿ: ಶ್ರೀ ಧರ್ಮಸ್ಥಳ ಸಮೀಪದ ಕನ್ಯಾಡಿ ಶ್ರೀರಾಮ ಕ್ಷೇತ್ರದಲ್ಲಿ ಸೆ. 3 ರಂದು ದಕ್ಷಿಣದ ಮಹಾಸಂಸ್ಥಾನದ ಮಠಾಧೀಶ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರ ಪಟ್ಟಾಭಿಷೇಕ ದಶಮಾನೋತ್ಸವ ಸಂಭ್ರಮ, ಮತ್ತು ಶ್ರೀರಾಮ ತಾರಕಮಂತ್ರ ಯಜ್ಞ ಮತ್ತು ಧರ್ಮ ಸಂಸದ್‌ನಲ್ಲಿ ಮುಂಬಯಿ ತುಳು-ಕನ್ನಡಿಗರು ಸಮಾಜ ಬಾಂಧವರು ಸಕ್ರೀಯರಾಗಿ ಪಾಲ್ಗೊಳ್ಳೋಣ ಎಂದು ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ್ ಎಸ್. ಪೂಜಾರಿ ನುಡಿದರು.
ಧರ್ಮ ಸಂಸದ್ ನಿಮಿತ್ತ ಸಾಂತಾಕ್ರೂಜ್ ಪೂರ್ವದ ಬಿಲ್ಲವ ಭವನದಲ್ಲಿ ಆ. 17 ರಂದು ಸಂಜೆ ಮುಂಬಯಿ ಸಮಿತಿಯ ವತಿಯಿಂದ ನಡೆದ ಪೂರ್ವಭಾವಿ ಸಭೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದ ಅವರು ಸಂಭ್ರಮದ ವಿಶೇಷತೆಯನ್ನು ತಿಳಿಸಿದರು.
ಧರ್ಮ ಸಂಸದ್ ಮುಂಬಯಿ ಸಮಿತಿಯ ಸಂಚಾಲಕರುಗಳಾದ ಗಂಗಾಧರ ಜೆ. ಪೂಜಾರಿ, ನಿತ್ಯಾನಂದ ಡಿ. ಕೋಟ್ಯಾನ್, ಸಂತೋಷ್ ಕೆ. ಪೂಜಾರಿ ಮಲಾಡ್, ಬಿಲ್ಲವರ ಅಸೋಸಿಯೇಶನ್‌ನ ಮಾಜಿ ಅಧ್ಯಕ್ಷ ಎಲ್. ಅಮೀನ್, ಭಾರತ್ ಬ್ಯಾಂಕಿನ ನಿರ್ದೇಶಕರುಗಳಾದ ಭಾಸ್ಕರ್ ಎಂ. ಸಾಲ್ಯಾನ್, ನ್ಯಾಯವಾದಿ ಎಸ್. ಬಿ. ಅಮೀನ್, ಉದ್ಯಮಿಗಳಾದ ಯಶೋಧಾ ಎನ್. ಟಿ. ಪೂಜಾರಿ, ನಾರಾಯಣ ಕೆ. ಸುವರ್ಣ ಕಲ್ವಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಶ್ರೀ ಬ್ರಹ್ಮಾನಂದ ಸ್ವಾಮೀಜಿ ಪಟ್ಟಾಭೀಷೇಕ ದಶಮಾನೋತ್ಸವ ಆಮಂತ್ರಣ ಪತ್ರಿಕೆಯನ್ನು ಅಧ್ಯಕ್ಷ ಚಂದ್ರಶೇಖರ್ ಪೂಜಾರಿ ಬಿಡುಗಡೆಗೊಳಿಸಿದರು.
ಸನಾತನ ಹಿಂದೂ ಧರ್ಮದ ಉತ್ಥಾನಕ್ಕಾಗಿ ಬಾಳಿ ಬೆಳಗಿರುವ ಈ ಪುಣ್ಯ ಭೂಮಿಯಲ್ಲಿ ಜನಿಸಿರುವ ಕನ್ಯಾಡಿ ರಾಮಕ್ಷೇತ್ರದಲ್ಲಿ ದೈವೈಕ್ಯ ಶ್ರೀ ಆತ್ಮನಂದ ಸರಸ್ವತಿ ಸ್ವಾಮೀಜಿ ಅವರು ನಿರ್ಮಿಸಿದ ದೇಗುಲವು ನಮ್ಮೆಲ್ಲರ ಹೆಮ್ಮೆಯ ಧಾರ್ಮಿಕ ತಾಣವಾಗಿದೆ. ಅವರ ಉತ್ತರಾಧಿಕಾರಿಯಾಗಿ ದೀಕ್ಷೆ ಪಡೆದ ಬ್ರಹ್ಮನಂದಾ ಸ್ವಾಮೀಜಿ ಗುರುವರ್ಯರ ಧ್ಯೇಯೋದ್ದೇಶಗಳನ್ನು ಧಾರ್ಮಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಕಾಯಕಗಳೊಂದಿಗೆ ಪ್ರಾಮಾಣಿಕ ಹಾಗೂ ನಿಷ್ಠೆಯಿಂದ ಪೂರೈಸಿ ಇದೀಗ ಹತ್ತು ವರ್ಷಗಳ ಸೇವೆಯಲ್ಲಿ ಮುನ್ನಡೆಯುತ್ತಿದ್ದಾರೆ. ತನ್ನ ಪಟ್ಟಾಭಿಷೇಕದ ದಶಸಂಭ್ರದ ಪ್ರಯುಕ್ತ ರಾಷ್ಟ್ರೀಯ ಧರ್ಮ ಸಂಸದ್ 2018ರ ಮುಖೇನ ಆಧ್ಯಾತ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರದ ಕ್ರಾಂತಿಯ ಸಲುವಾಗಿ ಮಹಾತ್ ಕಾರ್ಯವನ್ನು ಕೈಗೊಂಡಿರುವುದು ಅಭಿನಂದನೀಯ. ಅಂದು ಹಿಮಾಲಯದಿಂದ ಸುಮಾರು ಎರಡು ಸಾವಿರಕ್ಕೂ ಅಧಿಕ ಸಾಧು-ಸಂತರು ಹಾಗೂ ರಾಜಕೀಯ ನೇತಾರರು, ಸಾಮಾಜಿಕ ಧುರೀಣರು ಪಾಲ್ಗೊಳ್ಳಲಿದ್ದಾರೆ ಎಂದು ಗಂಗಾಧರ ಜೆ. ಪೂಜಾರಿ ಕಾರ್ಯಕ್ರಮದ ಬಗ್ಗೆ ಸ್ಥೂಲವಾದ ಮಾಹಿತಿ ನೀಡಿದರು.
ಬ್ರಹ್ಮಾನಂದ ಸ್ವಾಮೀಜಿ ಅವರ ಇದೊಂದು ಒಳ್ಳೆಯ ಯೋಚನೆ ಮತ್ತು ಯೋಜನೆಯಾಗಿದೆ. ಧನ ಸಹಾಯ, ಸ್ವಯಂ ಸೇವೆ ಮಾಡಿಯಾದರೂ ಇಂತಹ ಪುಣ್ಯಧಿ ಕಾರ್ಯಕ್ರಮವನ್ನು ಫಲಪ್ರದ ಪಡಿಸಬೇಕು. ಲೋಕ ಕಲ್ಯಾಣಕ್ಕಾಗಿ ನಡೆಸಲ್ಪಡುವ ಈ ಕಾರ್ಯಕ್ರಮಗಳಿಂದ ಸ್ವಸಮಾಜದ ಗೌರವಕ್ಕೂ ಪೂರಕವಾಗಿದೆ ಎಂದು ನಿತ್ಯಾನಂದ್ ಡಿ. ಕೋಟ್ಯಾದ್ ಅವರು ತಿಳಿಸಿದರು.
ಇದೊಂದು ಬೃಹತ್ ಧರ್ಮ ರಕ್ಷಣಾ ಕಾರ್ಯಕ್ರಮ. ಸಮಾಜದ ಉನ್ನತೀಕರಣದ ಸಿದ್ಧಾಂತವನ್ನು ಸಿದ್ಧಿಗೊಳಿಸುವ ಕಾರ್ಯಕ್ರಮವೂ ಹೌದು. ಇದನ್ನು ನಾವೆಲ್ಲರೂ ಜವಾಬ್ದಾರಿಯಿಂದ ನಿಭಾಯಿಸಿ ಯಶಗೊಳಿಸಿದಾಗ ಅದರ ಪುಣ್ಯ ನಮಗೂ ಫಲಿಸುವುದು. ಭಾರತೀಯ ಮೂಲ ಸಂಸ್ಕೃತಿಯ ಪುನರುತ್ಥಾನದ ಉದ್ದೇಶವೇ ಈ ಧರ್ಮ ಸಂಸದ್‌ನದ್ದಾಗಿದೆ ಎಂದು ಎಲ್. ವಿ. ಅಮೀನ್ ಅವರು ನುಡಿದರು.
ಸಭೆಯಲ್ಲಿ ಅಸೋಸಿಯೇಶನ್‌ನ ಉಪಾಧ್ಯಕ್ಷರುಗಳಾದ ಶಂಕರ ಡಿ. ಪೂಜಾರಿ, ಹರೀಶ್ ಜಿ. ಅಮೀನ್, ಶ್ರೀನಿವಾಸ ಆರ್. ಕರ್ಕೇರ, ಗೌರವ ಪ್ರಧಾನ ಕಾರ್ಯದರ್ಶಿ ಧನಂಜಯ ಎಸ್. ಕೋಟ್ಯಾನ್, ಗೌರವ ಪ್ರಧಾನ ಕೋಶಾಧಿಕಾರಿ ರಾಜೇಶ್ ಜೆ. ಬಂಗೇರ, ಯುವಾಭ್ಯುದಯ ಉಪ ಸಮಿತಿಯ ಕಾರ್ಯಾಧ್ಯಕ್ಷ ನಾಗೇಶ್ ಎಂ. ಕೋಟ್ಯಾನ್ ಸೇರಿದಂತೆ ಅಸೋಸಿಯೇಶನ್‌ನ ಸ್ಥಳೀಯ ಸಮಿತಿಗಳ ಮುಖ್ಯಸ್ಥರು ಹಾಗೂ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು. ಜಯಂತಿ ಎಸ್. ಕೋಟ್ಯಾನ್ ಮತ್ತು ಗಿರಿಜಾ ಪೂಜಾರಿ ಪ್ರಾರ್ಥನೆಗೈದರು. ಅಸೋಸಿಯೇಶನ್‌ನ ಗೌರವ ಪ್ರಧಾನ ಕಾರ್ಯದರ್ಶಿ ಧನಂಜಯ ಎಸ್. ಕೋಟ್ಯಾನ್ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರ್ವಹಿಸಿದರು.
ಚಿತ್ರ- ವರದಿ : ರೋನ್ಸ್ ಬಂಟ್ವಾಳ್