ಬಳ್ಳಾರಿ: ನಗರದ 12ನೇ ವಾರ್ಡ್ ನ ಮಿಲ್ಲರ ಪೇಟೆಯಲ್ಲಿ ಕಾಣೆಯಾಗಿದ್ದ ಬಾಲಕ ಗುರುವಾರ ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದಾನೆ. ಮಿಲ್ಲರ ಪೇಟೆಯ ಕಲ್ಯಾಣ ಸ್ವಾಮಿ ಮಠದ ಮುಂಭಾಗದ ಬಳಿಯಿರುವ ವಿದ್ಯುತ್ ಪರಿವರ್ತಕದ ಸಮೀಪ ಬಾಲಕನ ಶವ ಪತ್ತೆಯಾಗಿದ್ದು, ಬಾಲಕ ಕೇಶವ (12 ) ಸಾವಿನ ಸುತ್ತ ನಾನಾ ಅನುಮಾನಗಳು ಸೃಷ್ಟಿಯಾಗಿವೆ.
ಬುಧವಾರ ಬೆಳಗ್ಗೆ ಏಕಾಏಕಿ ಕಾಣೆಯಾಗಿದ್ದ ಬಾಲಕನ ಕುರಿತು ಬ್ರೂಸ್ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಜೆಸ್ಕಾಂ ಸಿಬ್ಬಂದಿ ಬಾಲಕನಿಗೆ ವಿದ್ಯುತ್ ಸ್ಪರ್ಶವಾಗಿಲ್ಲ ಎಂದು ಸ್ಪಷ್ಟ ಪಡಿಸಿರುವುದರಿಂದ ಬೆಳಗ್ಗೆಯಾಗುವಷ್ಟರಲ್ಲಿ ವಿದ್ಯುತ್ ಪರಿವರ್ತಕದ ಸಮೀಪ ಬಾಲಕ ಮೃತಪಟ್ಟಿದ್ದು ಹೇಗೆ ಎಂಬ ಪ್ರಶ್ನೆ ಎದ್ದಿದೆ.
ಬಾಲಕನನ್ನು ಕೊಲೆ ಮಾಡಲಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ. ಕೊಲೆ ಮಾಡಿದ ನಂತರ ಅನುಮಾನ ಬರಬಾರದು ಎಂದು ವಿದ್ಯುತ್ ಪರಿವರ್ತಕದ ಬಳಿ ಬಿಸಾಕಿದ್ದಾರೆ ಎಂದು ಆರೋಪಿಸಿದ್ದಾರೆ.
ಸ್ಥಳಕ್ಕೆ ಬ್ರೂಸಪೇಟೆ ಠಾಣೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದು, ತನಿಖೆ ನಂತರ ಸತ್ಯಾಸತ್ಯತೆ ತಿಳಿಯಲಿದೆ.