Advertisement
ಸೋಮವಾರದ ಆಟದಲ್ಲಿ ಒಟ್ಟು 13 ವಿಕೆಟ್ ಪತನಗೊಂಡಿತು. ಒಂದಕ್ಕೆ 61 ರನ್ ಮಾಡಿದ್ದ ಆಸ್ಟ್ರೇಲಿಯ 267ಕ್ಕೆ ಆಲೌಟ್ ಆಯಿತು. ದೊಡ್ಡ ಮೇಲುಗೈ ನಿರೀಕ್ಷೆಯಲ್ಲಿದ್ದ ಆಸೀಸ್‌ಗೆ ಲಭಿಸಿದ್ದು 82 ರನ್ ಮುನ್ನಡೆ ಮಾತ್ರ. ಆದರೆ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ 31ಕ್ಕೆ 4 ವಿಕೆಟ್ ಉದುರಿಸಿಕೊಂಡು ಬೌಲರ್‌ಗಳ ಅಷ್ಟೂ ಪ್ರಯತ್ನವನ್ನು ವ್ಯರ್ಥಗೊಳಿಸಿತು.ಇಂಗ್ಲೆಂಡ್ ಈಗಾಗಲೇ ಹಮೀದ್ (7), ಕ್ರಾಲಿ (5), ಮಲಾನ್ (0) ಮತ್ತು ನೈಟ್ ವಾಚ್‌ಮನ್ ಲೀಚ್ (0) ವಿಕೆಟ್ ಕಳೆದುಕೊಂಡಿದೆ. ನಾಯಕ ರೂಟ್ 12 ಮತ್ತು ಸ್ಟೋಕ್ಸ್ 2 ರನ್ ಮಾಡಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಮಿಚೆಲ್ ಸ್ಟಾರ್ಕ್ ಮತ್ತು ಸ್ಕಾಟ್ ಬೋಲ್ಯಾಂಡ್ ತಲಾ 2 ವಿಕೆಟ್ ಉಡಾಯಿಸಿದ್ದಾರೆ. ಮೊದಲ ಟೆಸ್ಟ್ ಆಡುತ್ತಿರುವ ಬೋಲ್ಯಾಂಡ್ ತವರಿನಂಗಳದ 42,626 ವೀಕ್ಷಕರ ಸಮ್ಮುಖದಲ್ಲಿ, ತಾವೆಸೆದ ಏಕೈಕ ಓವರ್‌ನಲ್ಲಿ ಹಮೀದ್ ಮತ್ತು ಲೀಚ್ ವಿಕೆಟ್ ಹಾರಿಸಿ ಸಂಭ್ರಮಿಸಿದರು.
ಆಸ್ಟ್ರೇಲಿಯದ ಬ್ಯಾಟಿಂಗಿಗೆ ಕಡಿವಾಣ ಹಾಕುವಲ್ಲಿ ಇಂಗ್ಲೆಂಡಿನ ತ್ರಿವಳಿ ವೇಗಿಗಳು ಭರಪೂರ ಯಶಸ್ಸು ಕಂಡರು. ಆ್ಯಂಡರ್ಸನ್ 33ಕ್ಕೆ 4 ವಿಕೆಟ್ ಉಡಾಯಿಸಿ ಹೆಚ್ಚಿನ ಯಶಸ್ಸು ಸಾಧಿಸಿದರೆ, ರಾಬಿನ್ಸನ್ ಮತ್ತು ವುಡ್ ತಲಾ 2 ವಿಕೆಟ್ ಕಿತ್ತರು. ಒಂದೆಡೆ ಜತೆಗಾರರು ಒಬ್ಬೊಬ್ಬರಾಗಿ ನಿರ್ಗಮಿಸುತ್ತಿದ್ದರೂ ಆರಂಭಕಾರ ಹ್ಯಾರಿಸ್ 62ನೇ ಓವರ್ ತನಕ ಕ್ರೀಸ್ ಆಕ್ರಮಿಸಿಕೊಂಡು ಆಸೀಸ್‌ಗೆ ಆಸರೆ ಯಾದರು. 189 ಎಸೆತ ಎದುರಿಸಿ 76 ರನ್ ಕೊಡುಗೆ ಸಲ್ಲಿಸಿದರು (7 ಬೌಂಡರಿ). ಇದು ಆಸ್ಟ್ರೇಲಿಯ ಸರದಿಯ ಏಕೈಕ ಅರ್ಧ ಶತಕವಾಗಿತ್ತು.
Related Articles
Advertisement
ಸಂಕ್ಷಿಪ್ತ ಸ್ಕೋರ್: ಇಂಗ್ಲೆಂಡ್-185 ಮತ್ತು 4 ವಿಕೆಟಿಗೆ 31 (ರೂಟ್ ಬ್ಯಾಟಿಂಗ್ 12, ಬೋಲ್ಯಾಂಡ್ 1ಕ್ಕೆ 2, ಸ್ಟಾರ್ಕ್ 11ಕ್ಕೆ 2). ಆಸ್ಟ್ರೇಲಿಯ-267 (ಹ್ಯಾರಿಸ್ 76, ವಾರ್ನರ್ 38, ಹೆಡ್ 27, ಆ್ಯಂಡರ್ಸನ್ 33ಕ್ಕೆ 4. ರಾಬಿನ್ಸನ್ 64ಕ್ಕೆ 2, ವುಡ್ 71ಕ್ಕೆ 2 ವಿಕೆಟ್).
ಇಂಗ್ಲೆಂಡ್ ತಂಡದಲ್ಲಿ ಕೊರೊನಾ ಗೊಂದಲ!ಇಂಗ್ಲೆಂಡ್ ತಂಡದಲ್ಲಿ ಕೊರೊನಾ ಗೊಂದಲ ಉಂಟಾದ ಪರಿಣಾಮ ಮೆಲ್ಬರ್ನ್ ಟೆಸ್ಟ್ ಪಂದ್ಯದ ದ್ವಿತೀಯ ದಿನದಾಟ ಅರ್ಧ ಗಂಟೆ ವಿಳಂಬವಾಗಿ ಆರಂಭಗೊಂಡಿತು. ಇಂಗ್ಲೆಂಡ್ ಕ್ರಿಕೆಟಿಗರ ಕುಟುಂಬದ ಇಬ್ಬರು ಸದಸ್ಯರಲ್ಲಿ ಹಾಗೂ ಇಬ್ಬರು ಸಹಾಯಕ ಸಿಬಂದಿಗೆ ಕೊರೊನಾ ಬಂದಿದೆ ಎಂಬ ಮಾಹಿತಿ “ಕ್ರಿಕೆಟ್ ಆಸ್ಟ್ರೇಲಿಯ’ಕ್ಕೆ ಲಭ್ಯವಾಗಿತ್ತು. ಇದು ನಿಜವೂ ಆಗಿತ್ತು. ಹೀಗಾಗಿ ಇಂಗ್ಲೆಂಡ್ ಕ್ರಿಕೆಟಿಗರಿಗೆಲ್ಲ ಸೋಮವಾರ ಮುಂಜಾನೆಯೇ ಪಿಸಿಆರ್ ಟೆಸ್ಟ್ ನಡೆಸಲಾಗಿತ್ತು. ಇದರ ಫಲಿತಾಂಶಕ್ಕಾಗಿ ಎಲ್ಲರೂ ಕಾಯುತ್ತಿದ್ದರು. ಎಲ್ಲರ ಫಲಿತಾಂಶವೂ ನೆಗೆಟಿವ್ ಬಂದ ಬಳಿಕವೇ ದ್ವಿತೀಯ ದಿನದಾಟ ಆರಂಭಗೊಂಡಿತು. ಆ್ಯಶಸ್ ಕಮೆಂಟ್ರಿ ಟೀಮ್‌ನಲ್ಲೂ ಕೋವಿಡ್!
ಆ್ಯಶಸ್ ಸರಣಿಯ “ಚಾನೆಲ್ 7′ ಕಮೆಂಟ್ರಿ ತಂಡಕ್ಕೂ ಕೊರೊನಾ ಕಾಟ ತಟ್ಟಿದೆ. ಪರಿಣಾಮ, ದ್ವಿತೀಯ ದಿನ ಸಂಪೂರ್ಣ ಕಮೆಂಟ್ರಿ ತಂಡವನ್ನೇ ಬದಲಾಯಿಸಲಾಯಿತು. ಇಯಾನ್ ಬೋಥಂ, ರಿಕಿ ಪಾಂಟಿಂಗ್ ಮೊದಲಾದ ಖ್ಯಾತನಾಮರೂ ಐಸೊಲೇಶನ್‌ಗೆ ಒಳಗಾಗಬೇಕಾಯಿತು!