Advertisement

ಕೇರಳದ ಗಡಿ ರಸ್ತೆ ತೆರವು: ಶೀಘ್ರ ತೀರ್ಮಾನ

10:05 AM Jun 23, 2020 | mahesh |

ಮಂಗಳೂರು: ಲಾಕ್‌ಡೌನ್‌ ಕಾರಣದಿಂದ ಈಗಾಗಲೇ ಬಂದ್‌ ಆಗಿರುವ ಕರ್ನಾಟಕ-ಕೇರಳ ಗಡಿ ತೆರವುಗೊಳಿಸುವ ಸಂಬಂಧ ಕೇಂದ್ರ ಸರಕಾರದ ಸೂಚನೆ ಪಾಲಿಸಿಕೊಂಡು ಕರ್ನಾಟಕ-ಕೇರಳದ ಸಹಮತದೊಂದಿಗೆ ಅಧಿಕೃತ ಒಪ್ಪಿಗೆ ಪಡೆದು ಶೀಘ್ರದಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ದ.ಕ. ಜಿಲ್ಲಾಡಳಿತ ತಿಳಿಸಿದೆ. ಸದ್ಯಕ್ಕೆ ತಲಪಾಡಿ ಮತ್ತು ಜಾಲಸೂರು ಗಡಿಯಲ್ಲಿ ಮಾತ್ರ ಅನುಮತಿ ನೀಡಿದವರಿಗೆ ಮಾತ್ರ ಆಗಮನ-ನಿರ್ಗಮನಕ್ಕೆ ಅವಕಾಶ ನೀಡಲಾಗಿದ್ದು, ಉಳಿದ ಗಡಿಗಳು ಬಂದ್‌ ಆಗಿವೆ. ಇದನ್ನು ತೆರವು ಮಾಡಬೇಕಾದರೆ ರಾಜ್ಯ ಸರಕಾರ ಅನುಮತಿ ಆವಶ್ಯ ಎಂದು ಜಿಲ್ಲಾಡಳಿತ ತಿಳಿಸಿವೆ.

Advertisement

ಈ ಕುರಿತು “ಉದಯವಾಣಿ’ ಜತೆಗೆ ಮಾತನಾಡಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ, “ತಲಪಾಡಿ ಹಾಗೂ ಜಾಲಸೂರು ಗಡಿಗಳಲ್ಲಿ ಎರಡೂ ರಾಜ್ಯ ಸರಕಾರದ ಸಹಮತದೊಂದಿಗೆ ನಿಯಮ ಬದ್ಧವಾಗಿ ಜನರ ಆಗಮನ-ನಿರ್ಗಮನಕ್ಕೆ ಅವಕಾಶ ನೀಡಲಾಗಿದೆ. ಆದರೆ ಉಳಿದ ಗಡಿಗಳಲ್ಲಿ ಮಣ್ಣು ಹಾಕಿರುವ ಹಿನ್ನೆಲೆಯಲ್ಲಿ ಇದನ್ನು ಪೂರ್ಣವಾಗಿ ತೆರವು ಮಾಡಲು ಕೇಂದ್ರ ಸರಕಾರದ ಅನುಮತಿ ಹಾಗೂ ಎರಡೂ ರಾಜ್ಯದ ಸಹಮತ ಬೇಕಾಗುತ್ತದೆ. ವಾರದೊಳಗೆ ಇದಕ್ಕೆ ಅನುಮತಿ ದೊರೆಯುವ ನಿರೀಕ್ಷೆಯಿದೆ. ಗಡಿಯ ಕೆಲವು ಭಾಗದಲ್ಲಿ ತುರ್ತಾಗಿ ಹೋಗಲು ಅವಕಾಶ ನೀಡುವಂತೆ ಸಾರ್ವಜನಿಕರ ಬೇಡಿಕೆ ಹಿನ್ನೆಲೆಯಲ್ಲಿ ದ್ವಿಚಕ್ರ ವಾಹನ ಹಾಗೂ ನಡೆದುಕೊಂಡು ಹೋಗಲು ಅವಕಾಶ ನೀಡುವಂತೆ ಪೊಲೀಸ್‌ ಇಲಾಖೆಗೆ ತಿಳಿಸಲಾಗಿದೆ. ಆದರೆ ಪೂರ್ಣವಾಗಿ ಗಡಿ ತೆರೆಯಲು ಸರಕಾರದ ಒಪ್ಪಿಗೆ ಇನ್ನಷ್ಟೇ ದೊರೆಯಬೇಕು’ ಎಂದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌, “ಕರ್ನಾಟಕ-ಕೇರಳದ 21 ಗಡಿ ಬಂದ್‌ ಮಾಡುವಂತೆ ಈ ಹಿಂದೆ ಕೇಂದ್ರದ ಸೂಚನೆಯಂತೆ ರಾಜ್ಯ ಸರಕಾರ ಆದೇಶ ಹೊರಡಿಸಿ ಬಂದ್‌ ಮಾಡಲಾಗಿದೆ. ಆ ಗಡಿಗಳನ್ನು ತೆರವು ಮಾಡುವುದಾದರೂ ರಾಜ್ಯ ಸರಕಾರದ ಅನುಮತಿ ಅಗತ್ಯ. ಸರಕಾರದ ಮುಂದಿನ ಆದೇಶವನ್ನು ಪರಿಗಣಿಸಿ ತೀರ್ಮಾನ ಕೈಗೊಳ್ಳಲಾಗುವುದು’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next