Advertisement
ನಾಡಿನ ನೆಲ, ಜಲ, ಭಾಷೆ, ಸ್ವಾಭಿಮಾನ ವಿಚಾರಕ್ಕೆ ಸರ್ಕಾರ ಹಾಗೂ ಸಾಹಿತ್ಯ ವಲಯ ಮೊದಲು ಎದ್ದು ನಿಲ್ಲಬೇಕಾಗುತ್ತದೆ. ಆದರೆ, ಮಹಾರಾಷ್ಟ್ರ ಸಿಎಂ ಅವರು ಕನ್ನಡಿಗರ ಸ್ವಾಭಿಮಾನವನ್ನೇ ಪ್ರಶ್ನಿಸುವಂತೆ ಹೇಳಿಕೆ ನೀಡಿದ್ದಲ್ಲದೆ, ಗಡಿ ತಂಟೆ ಹೋರಾಟಕ್ಕೆ ತಮ್ಮ ಇಬ್ಬರು ಸಚಿವರಿಗೆ ಜವಾಬ್ದಾರಿ ನೀಡಿದ್ದರೂ ರಾಜ್ಯ ಸರ್ಕಾರದಿಂದ ಇದುವರೆಗೂ ಸ್ಪಷ್ಟ ರೀತಿಯ ಹೇಳಿಕೆ ಬಂದಿಲ್ಲ. ಸಾಹಿತ್ಯ ವಲಯದಿಂದ ದೊಡ್ಡ ಮಟ್ಟದ ಖಂಡನೆ ವ್ಯಕ್ತವಾಗಿಲ್ಲ.
Related Articles
Advertisement
1980-1990ರವರೆಗೆ ಬೆಳಗಾವಿ ಜಿಲ್ಲೆಯ ವಿವಿಧ ಸ್ಥಳೀಯ ಸಂಸ್ಥೆಗಳಿಂದ ಎಂಇಎಸ್ ಮೂಲಕ ಹಲವು ನಿರ್ಣಯಗಳನ್ನು ಕೈಗೊಳ್ಳುವಂತೆ ಮಾಡಿದೆ. 2005ರಲ್ಲಿ ವಿಪಕ್ಷಗಳು, ಕನ್ನಡಪರ ಸಂಘಟನೆಗಳ ತೀವ್ರ ವಿರೋಧ, ರಾಜ್ಯ ಸರ್ಕಾರದ ಅಧಿಕಾರಿಗಳ ಆಕ್ಷೇಪಗಳನ್ನು ಧಿಕ್ಕರಿಸಿ, ಎಂಇಎಸ್ ಸ್ಥಳೀಯ ಆಡಳಿತದ ಅಧಿಕಾರ ಬಳಸಿ, ಬೆಳಗಾವಿ ಸೇರಿದಂತೆ ಹಲವು ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಬೇಕೆಂಬ ನಿರ್ಣಯ ಕೈಗೊಂಡಿತ್ತು.
ನಿಲ್ಲದ ಮೊಂಡುತನ: 1881ರಲ್ಲಿ ಬ್ರಿಟಿಷ್ ಸರ್ಕಾರದ ಗೆಜೆಟ್‌ನಲ್ಲಿ ಬೆಳಗಾವಿಯಲ್ಲಿ ಶೇ.64.39ರಷ್ಟು ಕನ್ನಡ ಭಾಷಿಕರು, ಶೇ.26.04ರಷ್ಟು ಮರಾಠಿ ಭಾಷಿಕರು ಇದ್ದಾರೆಂದು ನಮೂದಿಸಲಾಗಿದೆ. 1956ರಲ್ಲಿ ಫಜಲ್ ಅಲಿ ನೇತೃತ್ವದ ರಾಜ್ಯ ಪುನರ್ ವಿಂಗಡಣೆ ಆಯೋಗ, 1967ರಲ್ಲಿ ಗಡಿ ವಿವಾದ ಇತ್ಯರ್ಥಕ್ಕೆಂದೇ ಮಹಾರಾಷ್ಟ್ರದ ಒತ್ತಾಯದ ಮೇರೆಗೆ ಕೇಂದ್ರ ಸರ್ಕಾರ ರಚನೆ ಮಾಡಿದ್ದ ನ್ಯಾ| ಮೆಹರ್ ಚಂದ್ ಮಹಾಜನ ಆಯೋಗ ನೀಡಿದ ವರದಿಯಲ್ಲೂ ಬೆಳಗಾವಿ ಕರ್ನಾಟಕದ್ದೆಂದು ಸ್ಪಷ್ಟಪಡಿಸಿವೆ.
ಮಹಾಜನ ಆಯೋಗ ನೀಡುವ ತೀರ್ಪು ಒಪ್ಪುತ್ತೇವೆಂದು ಹೇಳಿದ್ದ ಮಹಾರಾಷ್ಟ್ರ ನಂತರ ಉಲ್ಟಾ ಹೊಡೆದು, ತನ್ನ ಮೊಂಡುತನ ಮುಂದುವರಿಸಿದೆ. ಅದರ ಮುಂದುವರಿದ ಭಾಗವಾಗಿ ಮಹಾರಾಷ್ಟ್ರದ ಸಿಎಂ, ಬೆಳಗಾವಿ ನಮ್ಮದು ಎಂಬರ್ಥದಲ್ಲಿ ಹೇಳಿಕೆ ನೀಡಿದ್ದಲ್ಲದೆ, ಗಡಿ ವಿಚಾರದಲ್ಲಿ ಕಾನೂನು ಹೋರಾಟಕ್ಕೆ ಇಬ್ಬರು ಸಚಿವರಿಗೆ ಜವಾಬ್ದಾರಿ ನೀಡಿದ್ದನ್ನು ನೋಡಿದರೆ, ಶಿವಸೇನೆ ಗಡಿ ವಿಚಾರವನ್ನು ದೊಡ್ಡ ಮಟ್ಟದಲ್ಲಿ ಕೆದಕುವ, ಆ ಮೂಲಕ ಎಂಇಎಸ್‌ಗೆ ಜೀವ ತುಂಬುವ ಕೆಲಸಕ್ಕೆ ಮುಂದಾಗಿದೆ ಎಂದೆನಿಸುತ್ತಿದೆ.
ಬಾಯಿ ಬಿಡದ ಸಿಎಂ: ಕನ್ನಡಿಗರು ಅತಿಕ್ರಮಣಕಾರರು ಎಂಬಂತೆ ಮಹಾರಾಷ್ಟ್ರ ಸಿಎಂ ಹೇಳಿಕೆ ನೀಡಿದಾಗ ಸಿಎಂ ಯಡಿಯೂರಪ್ಪ ತೀಕ್ಷ್ಣ ಪ್ರತಿಕ್ರಿಯೆ ನೀಡಬೇಕಾಗಿತ್ತು. ಆದರೂ, ಅದು ಆಗಿಲ್ಲ. ಕಾಂಗ್ರೆಸ್ ಸರ್ಕಾರದಲ್ಲಿ ಎಚ್.ಕೆ.ಪಾಟೀಲ ಗಡಿ ಉಸ್ತುವಾರಿ ಸಚಿವರಾಗಿದ್ದರು. ನಂತರದಲ್ಲಿ ಸಮ್ಮಿಶ್ರ ಸರ್ಕಾರ ಹಾಗೂ ಪ್ರಸ್ತುತ ಬಿಜೆಪಿ ಸರ್ಕಾರದಲ್ಲೂ ಗಡಿ ಉಸ್ತುವಾರಿ ಸಚಿವರ ನೇಮಕ ಆಗಿಲ್ಲ.
ಸಾತ್ವಿಕ ಸಿಟ್ಟು ಮರೆತ ಸಾಹಿತ್ಯ ವಲಯ: ಮಹಾರಾಷ್ಟ್ರ ಸಿಎಂ ಉದ್ಧಟತನದ ಹೇಳಿಕೆಗೆ ಕನ್ನಡ ಸಾಹಿತ್ಯ ಪರಿಷತ್ತು ಒಂದು ಹೇಳಿಕೆ ನೀಡಿದ್ದು ಬಿಟ್ಟರೆ ಸಾಹಿತ್ಯ ವಲಯದಿಂದ ದೊಡ್ಡ ಮಟ್ಟದ ವಿರೋಧ ಬಂದಿಲ್ಲ. ನೆಲ-ಜಲ, ಭಾಷೆಯಂತಹ ವಿಚಾರದಲ್ಲಿ ಮೊದಲಿಗೆ ಸಾಹಿತ್ಯ ವಲಯ ಎದ್ದು ನಿಲ್ಲಬೇಕಾಗುತ್ತದೆ. ಸಾತ್ವಿಕ ಸಿಟ್ಟನ್ನು ಹೊರ ಹಾಕಬೇಕಾಗುತ್ತದೆ. ನಾಡಿನ ನೆಲ-ಜಲದ ವಿಚಾರದಲ್ಲಿ ಚಿತ್ರರಂಗವೂ ಸಿಡಿದೇಳಬೇಕಾಗುತ್ತದೆ. ರಾಜ್ಯದ ಪರ ಧ್ವನಿ ಮೊಳಗಿಸಬೇಕಾಗಿದೆ. ಆದರೆ, ಇದಾವುದೂ ಕಂಡು ಬರುತ್ತಿಲ್ಲ.
ಮಹಾರಾಷ್ಟ್ರ ಸಿಎಂ ಗಡಿ ತಂಟೆ ತೆಗೆದಿದ್ದಷ್ಟೇ ಅಲ್ಲದೆ, ಕನ್ನಡಿಗರನ್ನು ಅವಮಾನಿಸುವ ರೀತಿ ಹೇಳಿಕೆ ನೀಡಿದ್ದರೂ ರಾಜ್ಯ ಸರ್ಕಾರ ಪ್ರತಿರೋಧ ತೋರದೆ ಉದಾಸೀನತೆ ತೋರುತ್ತಿದೆ. ನೆಲ-ಜಲದ ವಿಚಾರಕ್ಕೆ ತಕ್ಷಣಕ್ಕೆ ಸ್ಪಂದಿಸುವ ಜವಾಬ್ದಾರಿಯನ್ನು ಸರ್ಕಾರ ಮರೆತಿದೆ. ರಾಜ್ಯ ಪ್ರತಿನಿಧಿಸುವ ಕೇಂದ್ರ ಸಚಿವರು ಹಾಗೂ ರಾಜ್ಯದ ಸಚಿವರ ಧ್ವನಿ ಯಾಕಿಲ್ಲ?-ಎಚ್.ಕೆ.ಪಾಟೀಲ, ಮಾಜಿ ಸಚಿವ ಗಡಿ ಸಂರಕ್ಷಣಾ ಆಯೋಗ ಹಾಗೂ ಗಡಿ ಅಭಿವೃದ್ಧಿ ಪ್ರಾಧಿಕಾರದ ಕಚೇರಿಗಳು ಬೆಂಗಳೂರಿನಲ್ಲಿ ಏಕಿರಬೇಕು? ಬೆಳಗಾವಿಗೆ ಅವುಗಳನ್ನು ವರ್ಗಾಯಿಸಿಲಿ. ಗಡಿ ಸಂರಕ್ಷಣಾ ಆಯೋಗಕ್ಕೆ ಜಲ ವಿವಾದವನ್ನು ಸೇರಿಸಲಾಗಿದ್ದು, ಅದನ್ನು ಹಿಂತೆಗೆಯುವ ಕೆಲಸ ಆಗಬೇಕು. ಗಡಿ ವಿಚಾರದಲ್ಲಿ ಶಿವಸೇನೆಯ ಬಾಯಿ ಮುಚ್ಚಿಸಲು ಸಾಹಿತ್ಯ ವಲಯ, ಸರ್ಕಾರ, ಸಾರ್ವಜನಿಕರಿಂದ ಸಂಘಟಿತ ಗಟ್ಟಿಧ್ವನಿ ಮೊಳಗಲಿ.
-ಅಶೋಕ ಚಂದರಗಿ, ಅಧ್ಯಕ್ಷರು, ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ * ಅಮರೇಗೌಡ ಗೋನವಾರ