ಪುಸ್ತಕವೆಂದರೆ ಅಕ್ಷರಗಳ ಭಂಡಾರ. ಲೋಕಜ್ಞಾನದ ಸಂಚಿ. ಹಲವು ಸುಂದರ ಜಗತ್ತುಗಳ ಸಂಪರ್ಕಸೇತು. ಅನುಭವಗಳ ಗುತ್ಛ. ಅದೊಂದು ನೆಮ್ಮದಿ.
ಓದು ಅನ್ನುವುದು ಮನುಷ್ಯ ಭಾಷಾ ಬಳಕೆಯಲ್ಲಿ ಮಾತನಾಡುವುದರ ಬಳಿಕದ ಕ್ರಿಯೆ. ಓದಿನ ಅನಂತರ ಬರುವುದು ಬರೆವಣಿಗೆ. ಹೀಗಾಗಿ ಬಹಳ ಜನ ಮಾತಿನಲ್ಲೇ ತೃಪ್ತರಾಗಿಬಿಡುತ್ತಾರೆ. ಜತೆಗೆ ಓದೆಂಬ ಅಮೃತಕಲಶವನ್ನು ಸ್ಪರ್ಶಿಸುವುದೇ ಇಲ್ಲ. ಕೆಲವರು ಸ್ವರ್ಶಿಸಿದರೂ ಅಲ್ಲಿಗೇ ಕೈ ಮುಗಿಯುತ್ತಾರೆ. ಸ್ವಲ್ಪ ಪ್ರಯತ್ನ ಪಟ್ಟು ಸ್ವಲ್ಪ ರುಚಿ ನೋಡಿದವರಿಗೆ ಗೊತ್ತು ಆ ಓದೆಂಬ ಅನುಭವ! ಲೌಕಿಕ ಜಗ ಮರೆಸುವ ಅನುಭವ. ಅಂತರಗಕ್ಕಿಳಿಸಿ ಬಹಿರಂಗದಲ್ಲಿ ಎತ್ತರಕ್ಕೇರಿಸುವ ಅನುಭೂತಿಯನ್ನು ಓದಿಯೇ ಪಡೆಯಬೇಕು. ಪುಸ್ತಕ ಸಂಗವಿದ್ದವರು ಎಲ್ಲಿಯಾದರೂ ಬದುಕಿಯಾರು. ಹೀಗಾಗಿಯೇ ಹಿರಿಯರು ದೇಶ ಸುತ್ತು, ಕೋಶ ಓದು ಎಂದಿದ್ದು. ಅವರಿಗೂ ಸ್ವಷ್ಟವಾಗಿ ತಿಳಿದಿತ್ತು. ಅನುಭವ ದಿಗಂತವನ್ನು ವಿಸ್ತರಿಸುವ ಎರಡು ತುದಿಗಳೆಂದರೇ ಇವೇ.
ಓದುಗರು ಎರಡು ಜಗತ್ತುಗಳಲ್ಲಿ ವಾಸಿಸುತ್ತಿರುತ್ತಾರೆ. ಒಂದು ಪ್ರಾಪಂಚಿಕವಾದರೆ ಇನ್ನೊಂದು ಹೊತ್ತಗೆಯದು. ಹೊರಗಿನ ಒಣಜಂಜಾಟಗಳಿಂದ ಪುಸ್ತಕ ನಮ್ಮನ್ನು ಪಾರು ಮಾಡುತ್ತದೆ. ಲೌಕಿಕದಲ್ಲಿನ ಎಲ್ಲ ತಲ್ಲಣಗಳನ್ನು ಶಮನಗೊಳಿಸಿಕೊಳ್ಳುವ ಪಾಠವನ್ನು ಕೊಡುತ್ತದೆ. ತಮ್ಮ ತಲ್ಲಣಗಳನ್ನು ದಾಟಿ ಸಮಾಜಕ್ಕೆ ಸಹಸ್ಪಂದಿಸುವುದನ್ನು ಕಲಿಸಿಕೊಡುತ್ತವೆ. ಪುಸ್ತಕವೆಂದರೆ ಯಾವುದೂ ಆಗಬಹುದು ಕಥೆ, ಕವನ, ಕಾದಂಬರಿಗಳಂತಹ ಸೃಜನಶೀಲ ಸಾಹಿತ್ಯ ಅಥವಾ ವಿಮರ್ಶೆ, ಸಂಶೋಧನೆಗಳಂತಹ ಸೃಜನೇತರ ಸಾಹಿತ್ಯ. ಎಲ್ಲವೂ ನವಅನುಭೂತಿಯ ಕೇಂದ್ರಗಳು.
ಹಲವಾರು ಓದುಗರಿಗೆ ಪುಸ್ತಕದೊಟ್ಟಿಗೆ ಬಾಂಧವ್ಯ ಬೆಳೆದುಬಿಟ್ಟಿರುತ್ತದೆ. ಅದು ಅವರು ಪುಸ್ತಕ ನಿಭಾಯಿಸುವ ರೀತಿಯಲ್ಲಿಯೇ ವ್ಯಕ್ತವಾಗುತ್ತದೆ. ಹೊಸಪುಸ್ತಕದ ಘಮವನ್ನು ಆಸ್ವಾದಿಸುವವರಿದ್ದಾರೆ. ಬೇಕಂತಲೇ ಖೀಲವಾಗುತ್ತಿರುವ ಹಳೆಯ ಪುಸ್ತಕಪುಟಗಳನ್ನು ನಾಜೂಕಾಗಿ ಸಂಭಾಳಿಸಿ ಓದುವವರಿದ್ದಾರೆ. ನೀಟಾಗಿ ಒಂದೆಡೆ ಕೂತು ಓದುವವರಿ¨ªಾರೆ. ತಾವು ಮನೆಯಲ್ಲಿ ಹೇಗೆಲ್ಲ ದೇಹವನ್ನು ಹೊರಳಾಡಿಸಿದರೂ ಸಹ ಪುಸ್ತಕದ ಮೇಲಿರುವ ಕೈ ಮತ್ತು ಕಣ್ಣುಗಳನ್ನು ತೆಗೆಯದೇ ಓದುವವರಿದ್ದಾರೆ. ಪುಟದ ಕಿವಿ ಮಡಚುವ, ಎಲ್ಲೆಂದರಲ್ಲಿ ಗೀಚುವ, ಮುಖಪುಟವನ್ನು ಮಡಿಚಿ ಓದುವ ಕ್ರಿಯೆಗಳೆಲ್ಲ ಅಸಭ್ಯತನದ್ದು ಎಂದು ಪರಿಗಣಿಸುವವರಿದ್ದಾರೆ. ಇದೆಲ್ಲ ಓದಿನ ಸುಖದ ಇನ್ನೊಂದು ಮಗ್ಗಲು ಅಷ್ಟೇ.
ಬಹುಜನರಿಗೆ ಇಷ್ಟದ ಕಥೆ, ಕಾದಂಬರಿಗಳ ಓದಂತೂ ನಿಜವಾಗಿಯೂ ಹೊಸಲೋಕದ ಪ್ರಯಾಣವೇ ಸರಿ. ಎಷ್ಟೋ ಸಲ ಅದರಲ್ಲಿನ ಪಾತ್ರಗಳನ್ನು ನಮ್ಮೊಟ್ಟಿಗೆ ಸಮೀಕರಿಸಿಕೊಂಡು ಓಡಾಡಿದ್ದಿದೆ. ಕೃತಿಗಳಲ್ಲಿನ ವಿಸ್ಮಯವನ್ನು ನಮ್ಮ ಪಾಡಿಗೆ ನಾವು ಕಟ್ಟಿಕೊಂಡು ಅದರೊಟ್ಟಿಗೆ ಜೀವಿಸುವುದಿದೆ. ಅದರಲ್ಲಿನ ಊರಿಗೆ ಭೇಟಿಯಿತ್ತಾಗ ಪುಳಕಗೊಂಡಿದ್ದಿದೆ. ಮೂಡಿಗೆರೆಯೆಂದರೆ ಪೂಚಂತೆಯವರ ಕಾರ್ವಾಲೋ ನೆನಪಾಗುತ್ತದೆ. ಹನೆಹಳ್ಳಿ ಎಂದರೆ ಚಿತ್ತಾಲರು ನೆನಪಾಗುತ್ತಾರೆ. ಧಾರವಾಡವೆಂದರೆ ಪುಣೇಕರ, ಬೇಂದ್ರೆಯಥವರು ನೆನಪಾಗುತ್ತಾರೆ. ಹೀಗೆ ಒಳಹೊರಗನ್ನು ಒಂದು ಮಾಡುವ ವಿಸ್ಮಯ ಪುಸ್ತಕ. ಇರುವ ಜಗತ್ತಿನಲ್ಲಿಯೇ ನೂತನಜಗತ್ತಿನ ಪರಿಚಯ ಮಾಡಿಸುತ್ತದೆ. ಲೋಕವನ್ನು ಗ್ರಹಿಸಲು ಹೊಸ ದೃಷ್ಟಿಕೋನವನ್ನು ಕೊಡುತ್ತದೆ.
ಇನ್ನೂ ಕೆಲವು ಬಾರಿ ಹೊರಗಿನ ಸಮಸ್ಯೆಗಳಿಗೆ ಕೃತಿಗಳೇ ಪರಿಹಾರ ಒದಗಿಸಿದ್ದಿದೆ. ಓದುಗರಿಗೆ ಪುಸ್ತಕ ಅವಿಭಾಜ್ಯ ಅಂಗವಾಗಿಬಿಡುತ್ತದೆ. ಒಂದು ಪುಸ್ತಕದ ಓದು ಬದುಕನ್ನೇ ಬದಲಾಯಿಸಿ ಬಿಡಬಹುದು. ಸಾಯಲೆಂದು ಹೊರಟವರು ಪುಸ್ತಕ ಓದಿ ಮನಪರಿವರ್ತನೆ ಹೊಂದಿ ಬದುಕಿದ್ದಾರೆ, ಬಾಳಿದ್ದಾರೆ, ಜೀವಿಸಿದ್ದಾರೆ. ಬದುಕಿಗೆ ಜೀವಕಳೆ ತುಂಬಿಸಿಕೊಳ್ಳುವುದಕ್ಕಾರೂ ಓದಬೇಕು, ಪುಸ್ತಕದ ಸಹವಾಸ ಮಾಡಬೇಕು, ಅಕ್ಷರಸಾನಿಧ್ಯದಲ್ಲಿರಬೇಕು, ಸಾಹಿತ್ಯ ಸಾಮಿಪ್ಯ ಸಾಧಿಸಬೇಕು. ಪುಸ್ತಕ ಎಂದಿಗೂ ನಮ್ಮ ಕೈ ಬಿಡುವುದಿಲ್ಲ. ಮಾರ್ಗದರ್ಶಿತ್ವದ ದೀಕ್ಷೆ ಅದಕ್ಕಾಗಿದೆ. ದಾರಿಯನ್ನು ತೋರಿಯೇ ತೋರುತ್ತದೆ. ಪುಸ್ತಕಗಳ ಬಗ್ಗೆ ಹಿಂದೊಮ್ಮೆ ಬರೆದ ಸಾಲುಗಳಿವು.
ಹೊತ್ತು ಹೋಗಲು
ಓದುವುದಕಲ್ಲ ಹೊತ್ತಿಗೆ.
ಓದಿದರೆ,
ಬದುಕಲಿ ಒದಗಿ ಬರುವುದು
ಅದು ಸರಿಯಾದ ಹೊತ್ತಿಗೆ.
- ಚಿದಂಬರ ಕುಲಕರ್ಣಿ, ಕವಿವಿ ಧಾರವಾಡ.