ಹುಬ್ಬಳ್ಳಿ: ರಾಜ್ಯ ಸರ್ಕಾರ ತನ್ಮ ಗ್ಯಾರಂಟಿ ಯೋಜನೆಗಳ ನಿರ್ವಹಣೆಗಾಗಿ ಹಣ ಕ್ರೋಡೀಕರಿಸಲು ಸುಮಾರು 21ಲಕ್ಷ ಬಿಪಿಎಲ್ ಕಾರ್ಡ್ ರದ್ದುಗೊಳಿಸಲು ಹೊರಟಿದೆ. ಆ ಮೂಲಕ ಸಿಎಂ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಗಂಭೀರ ಆರೋಪ ಮಾಡಿದರು.
ಗುರುವಾರ (ನ.21) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳ ನಿರ್ವಹಣೆ ಮಾಡುವಲ್ಲಿ, ಅದಕ್ಕೆ ಹಣ ಕ್ರೋಡೀಕರಿಸುವಲ್ಲಿ ವಿಫಲವಾಗಿದೆ. ಅದಕ್ಕೆ ಹಣ ಹೊಂದಿಸಲು ಬಡವರ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಗೊಳಿಸಲು ಹೊರಟಿದೆ. ಅದರಿಂದ ಗೃಹಲಕ್ಷ್ಮಿಯ ಸಾವಿರಾರು ಕೋಟಿ ರೂ. ಹಣ ಉಳಿಯುತ್ತದೆ. ಅದಕ್ಕಾಗಿ ಈ ಕೆಲಸಕ್ಕೆ ಮುಂದಾಗಿದೆ ಎಂದರು.
ಸರ್ಕಾರ ಯಾವುದೇ ತಯಾರಿ, ಮಾನದಂಡ ಇಲ್ಲದೆ ಪಾನ್ ಕಾರ್ಡ್ ನೆಪಮಾಡಿಕೊಂಡು ಅವೈಜ್ಞಾನಿಕವಾಗಿ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಗೊಳಿಸುತ್ತಿದೆ. ಸಿಎಂ ತಮ್ಮ ಹುಳಕು, ವೈಫಲ್ಯ ಮುಚ್ಚಿ ಹಾಕಲು ಕೇಂದ್ರದ ಮೇಲೆ ಗೂಬೆ ಕೂಡ್ರಿಸುತ್ತಿದ್ದಾರೆ. ಅವರು ತಮ್ಮ ಸ್ಥಾನ, ಘನತೆಗೆ ತಕ್ಕಂತೆ ನಡೆದು ಕೊಳ್ಳಬೇಕು ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ರೈತರು, ಆಡಳಿತ ಪಕ್ಷದ ಶಾಸಕರು ಸೇರಿದಂತೆ ಯಾರೂ ನೆಮ್ಮದಿಯಿಂದ ಇಲ್ಲ. ಯಾವ ಕ್ಷೇತ್ರದಲ್ಲೂ ಯಾವುದೇ ಹೊಸ ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ. ಶಾಸಕರಾಗಿದ್ದು ದುರ್ದೈವ ಎನ್ನುತ್ತಿದ್ದು, ಅವರೆಲ್ಲ ಹತಾಶರಾಗಿದ್ದಾರೆ. ಆಡಳಿತ ಪಕ್ಷದ ಶಾಸಕರೇ ಅಸಮರ್ಥ ಸಿಎಂ ಎನ್ನುತ್ತಿದ್ದಾರೆ. ಸಿಎಂರನ್ನು ನೋಡಿದರೆ ಅಯ್ಯೋ ಪಾಪ ಅನಿಸುತ್ತದೆ ಎಂದು ಕುಟುಕಿದರು.
ಸಿಎಂ ವಕ್ಫ್ ವಿಚಾರದಲ್ಲಿ ರೈತರಿಗೆ ಬರೆ ಎಳೆಯುತ್ತಿದ್ದಾರೆ. ಈ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳುತ್ತಿದ್ದಾರೆ. ಇದನ್ನು ವಿರೋಧಿಸಿ ಬಿಜೆಪಿಯ ಯಾರು ಮೊದಲು ಧರಣಿ, ಹೋರಾಟ ಆರಂಭಿಸಿದ್ದಾರೆ ಎಂಬುದು ಮುಖ್ಯವಲ್ಲ. ಬಸನಗೌಡ ಪಾಟೀಲ ಯತ್ನಾಳ, ಆರ್. ಅಶೊಕ ಸೇರಿದಂತೆ ನಾವ್ಯಾರು ಕ್ರೆಡಿಟ್ ವಾರ್ ನಡೆಸುತ್ತಿಲ್ಲ. ರೈತರಿಗೆ ಅನ್ಯಾಯವಾದಾಗ ಪಕ್ಷ ಹೋರಾಟ ಮಾಡುತ್ತಿದೆ. ನಾವು ನಡೆಸುತ್ತಿರುವ ಹೋರಾಟದಲ್ಲಿ ಯತ್ನಾಳ ಬಿಜೆಪಿ ಜೊತೆ ಇರಲಿದ್ದಾರೆ ಎಂದರು.
ಕಾಂಗ್ರೆಸ್ ಪಕ್ಷದಲ್ಲೇ ಸಿಎಂಗಾಗಿ ಪೈಪೋಟಿ ತೀವ್ರಗೊಂಡಿದೆ. ಬಿಜೆಪಿ 66 ಶಾಸಕರನ್ನು ಇಟ್ಟುಕೊಂಡು ಆಡಳಿತ ನಡೆಸಲು ಇಚ್ಛಿಸಲ್ಲ. ಅದರ ಅವಶ್ಯಕತೆಯೂ ಇಲ್ಲ. ಆದರೆ, ಕಾಂಗ್ರೆಸ್‌ನವರೇ ಸಿಎಂ ಕುರ್ಚಿ ಹರಾಜಿಗೆ ಇಟ್ಟಿದ್ದಾರೆ. ಆಡಳಿತ ಪಕ್ಷದವರೇ ಶಾಸಕರನ್ನು ಹರಾಜು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.