Advertisement
ನಗರ ಸರ್ಕಾರಿ ಮೆಡಿಕಲ್ ಕಾಲೇಜು ಬೋಧನಾ ಆಸ್ಪತ್ರೆ ಉದ್ಘಾಟನೆಯಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಭಾಗವಹಿಸಲಿರುವ ಹಿನ್ನೆಲೆಯಲ್ಲಿ ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಯವರು ಸಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
Related Articles
Advertisement
ಅಂದು ಮಧ್ಯಾಹ್ನ 1 ಗಂಟೆಗೆ ಚಾಮರಾಜನಗರದ ಯಡಪುರದಲ್ಲಿರುವ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಸಿ.ಐ.ಎಂ.ಎಸ್)ಗೆ ಆಗಮಿಸಲಿದ್ದಾರೆ. ಮಧ್ಯಾಹ್ನ 1.25 ಕ್ಕೆ ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಬಳಿಯ ಹೆಲಿಪ್ಯಾಡ್‌ನಲ್ಲಿ ರಾಷ್ಟ್ರಪತಿಯವರನ್ನು ಬರಮಾಡಿಕೊಳ್ಳಲಿದ್ದಾರೆ. ಮಧ್ಯಾಹ್ನ 3.30 ಕ್ಕೆ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ವತಿಯಿಂದ ಆಯೋಜಿಸಿರುವ 450 ಹಾಸಿಗೆಯ ಬೋಧನಾ ಆಸ್ಪತ್ರೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಸಂಜೆ 4.40 ಕ್ಕೆ ರಾಷ್ಟ್ರಪತಿಗಳನ್ನು ಹೆಲಿಪ್ಯಾಡ್ ನಲ್ಲಿ ಬೀಳ್ಕೊಡುವರು. ಸಂಜೆ 5 ಕ್ಕೆ ಬೆಂಗಳೂರಿಗೆ ತೆರಳುವರು ಎಂದು ಮುಖ್ಯಮಂತ್ರಿಯವರ ಅಧಿಕೃತ ಪ್ರವಾಸ ಕಾರ್ಯಕ್ರಮದಲ್ಲಿ ತಿಳಿಸಲಾಗಿದೆ.
ಹೀಗಾಗಿ ಬೊಮ್ಮಾಯಿ ಅವರು ಚಾಮರಾಜನಗರಕ್ಕೆ ಬರುವುದು ಖಚಿತವಾಗಿದೆ. ಅವರು ಬಂದರೆ ಮೂಢನಂಬಿಕೆಗೆ ಸೆಡ್ಡು ಹೊಡೆದ ಮುಖ್ಯಮಂತ್ರಿಗಳ ಸಾಲಿನಲ್ಲಿ ನಿಲ್ಲುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಎಚ್.ಡಿ. ಕುಮಾರಸ್ವಾಮಿ, ಜಗದೀಶ್ ಶೆಟ್ಟರ್, ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಚಾಮರಾಜನಗರಕ್ಕೆ ಭೇಟಿ ನೀಡಿದ್ದರು. ಅವರ ಸಾಲಿಗೆ ಬಸವರಾಜ ಬೊಮ್ಮಾಯಿ ಸೇರಲಿದ್ದಾರೆ.
ಮೂಢನಂಬಿಕೆಯ ಇತಿಹಾಸ
ಮುಖ್ಯಮಂತ್ರಿಗಳಾಗಿದ್ದ ದೇವರಾಜ ಅರಸ್, ಆರ್. ಗುಂಡೂರಾವ್, ರಾಮಕೃಷ್ಣ ಹೆಗಡೆ, ಎಸ್. ಆರ್. ಬೊಮ್ಮಾಯಿ ಹಾಗೂ ವೀರೇಂದ್ರ ಪಾಟೀಲ್ ಇಲ್ಲಿಗೆ ಭೇಟಿ ನೀಡಿದ ಆರು ತಿಂಗಳಲ್ಲಿ ಅಧಿಕಾರ ಕಳೆದುಕೊಂಡರು ಎಂಬ ಮೂಢನಂಬಿಕೆ ಬಿತ್ತಲಾಯಿತು.
ನಂತರ 1990ರಲ್ಲಿ ವೀರೇಂದ್ರ ಪಾಟೀಲರು ಅನಾರೋಗ್ಯದ ಕಾರಣ ಅಧಿಕಾರ ಕಳೆದುಕೊಂಡರು. ಬಂಗಾರಪ್ಪನವರು ಮುಖ್ಯಮಂತ್ರಿಯಾದ ನಂತರವಂತೂ ಅನೇಕ ಮುಖ್ಯಮಂತ್ರಿಗಳೂ ಚಾಮರಾಜನಗರಕ್ಕೆ ಬರಲಿಲ್ಲ.
ಅನಂತರ ಮುಖ್ಯಮಂತ್ರಿಗಳಾದ ಎಸ್. ಬಂಗಾರಪ್ಪ, ವೀರಪ್ಪ ಮೊಯಿಲಿ, ಎಚ್.ಡಿ. ದೇವೇಗೌಡ, ಜೆ.ಎಚ್. ಪಟೇಲ್, ಎಸ್. ಎಂ. ಕೃಷ್ಣ, ಧರಂ ಸಿಂಗ್ ಚಾ.ನಗರಕ್ಕೆ ಭೇಟಿ ನೀಡಲಿಲ್ಲ. ಸಮಾಜವಾದಿ ಎನಿಸಿಕೊಂಡ ಪಟೇಲ್ ಅವರು ಸಹ ನೂತನ ಚಾ.ನಗರ ಜಿಲ್ಲೆಯನ್ನು ಮಹದೇಶ್ವರ ಬೆಟ್ಟದಲ್ಲಿ ಉದ್ಘಾಟಿಸಿದರು.
17 ವರ್ಷಗಳ ಬಳಿಕ, ಜೆಡಿಎಸ್, ಬಿಜೆಪಿ ಮೈತ್ರಿ ಸರ್ಕಾರದ ಅವಧಿಯಲ್ಲಿ ಎಚ್.ಡಿ. ಕುಮಾರಸ್ವಾಮಿ ಪಟ್ಟಣಕ್ಕೆ ಭೇಟಿ ನೀಡಿ ಅಚ್ಚರಿ ಮೂಡಿಸಿದರು. ಅಧಿಕಾರ ಹಂಚಿಕೆ ಒಡಂಬಡಿಕೆ ವಿವಾದದಿಂದ ಅವರು ಅಧಿಕಾರ ಕಳೆದುಕೊಂಡರು. ಬಳಿಕ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಿ.ಎಸ್. ಯಡಿಯೂರಪ್ಪ ಪಟ್ಟಣಕ್ಕೆ ಬರಲೇ ಇಲ್ಲ. ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾದ ಕೊನೆಯ ದಿನಗಳಲ್ಲಿ ಎರಡು ಬಾರಿ ಚಾ.ನಗರಕ್ಕೆ ಭೇಟಿ ನೀಡಿದ್ದರು. ಬಳಿಕ ಸಿದ್ದರಾಮಯ್ಯ ಹಲವಾರು ಬಾರಿ ಭೇಟಿ ನೀಡಿದ್ದರು.
30ಜನ ಸತ್ತರೂ ಬಾರದ ಬಿಎಸ್‌ವೈ: ನಿಕಟಪೂರ್ವ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಮೂಢನಂಬಿಕೆಯನ್ನು ಬಲವಾಗಿ ನಂಬಿ, ಆಕ್ಸಿಜನ್ ದುರಂತದಲ್ಲಿ 30ಕ್ಕೂ ಹೆಚ್ಚು ಜನರು ಸತ್ತರೂ ಚಾಮರಾಜನಗರಕ್ಕೆ ಬರಲಿಲ್ಲ. ಅಧಿಕಾರ ಕಳೆದುಕೊಂಡ ಎರಡೇ ದಿನಕ್ಕೆ ತಮ್ಮ ಅಭಿಯಾನಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಕಾರಣಕ್ಕೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿಗೆ ಭೇಟಿ ನೀಡಿದರು.
ಕೆ.ಎಸ್. ಬನಶಂಕರ ಆರಾಧ್ಯ