ಮುಂಬಯಿ : ಏಶ್ಯನ್ ಶೇರು ಮಾರುಕಟ್ಟೆಗಳಲ್ಲಿ ಮಿಶ್ರ ಪ್ರತಿಕ್ರಿಯೆ ತೋರಿ ಬಂದಿರುವ ಹೊರತಾಗಿಯೂ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಸೋಮವಾರದ ಆರಂಭಿಕ ವಹಿವಾಟಿನಲ್ಲಿ 217 ಅಂಕಗಳ ಮುನ್ನಡೆ ಸಾಧಿಸುವ ಮೂಲಕ 29,000 ಅಂಕಗಳ ಮನೋಪ್ರಾಬಲ್ಯದ ಗಡಿಯನ್ನು ದಾಟಿ ಮುನ್ನುಗ್ಗಿದೆ.
ಬೆಳಗ್ಗೆ 10.30ರ ಹೊತ್ತಿಗೆ ಸೆನ್ಸೆಕ್ಸ್ 192.13 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 29,024.58 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯ 57.50 ಅಂಕಗಳ ಮುನ್ನಡೆಯೊಂದಿಗೆ 8,955.05 ಅಂಕಗಳ ಮಟ್ಟದಲ್ಲಿ ವ್ಯವಹಾರ ನಿರತವಾಗಿದ್ದವು.
ಇಂದಿನ ಆರಂಭಿಕ ವಹಿವಾಟಿನಿಂದಲೇ ಉತ್ತಮ ತೇಜಿಯನ್ನು ಪ್ರದರ್ಶಿಸಿದ ರಿಲಯನ್ಸ್ ಶೇರು ಧಾರಣೆ ಶೇ.3ರಷ್ಟು ಏರಿತು. ಆದರೆ ಐಟಿ ಶೇರುಗಳು ಅಮೆರಿಕದ ಎಚ್1ಬಿ ವೀಸಾ ತೊಡಕಿನ ಕಾರಣಕ್ಕೆ ಮಾರಾಟದ ಒತ್ತಡಕ್ಕೆ ಗುರಿಯಾಗಿ ಹಿನ್ನಡೆ ಕಂಡವು.
ಇಂದಿನ ಆರಂಭಿಕ ವಹಿವಾಟಿನಲ್ಲಿ 1,369 ಶೇರುಗಳು ಮುನ್ನಡೆಯನ್ನು ಕಂಡರೆ 634 ಶೇರುಗಳು ಹಿನ್ನಡೆಗೆ ಗುರಿಯಾದವು. 96 ಶೇರುಗಳ ಧಾರಣೆಯಲ್ಲಿ ಯಾವುದೇ ಬದಲಾವಣೆ ಕಂಡು ಬರಲಿಲ್ಲ.
ಇಂದು ಆಟೋ, ಬ್ಯಾಂಕಿ,ಗ್, ಪಿಎಸ್‌ಯು, ಆಯಿಲ್ ಮತ್ತು ಗ್ಯಾಸ್, ಪವರ್, ಕ್ಯಾಪಿಟಲ್ ಗೂಡ್ಸ್, ಎಫ್ಎಂಸಿಜಿ, ಹೆಲ್ತ್ ಕೇರ್,ರಿಯಲ್ಟಿ ಮತ್ತು ಮೆಟಲ್ ಶೇರುಗಳು ಉತ್ತಮ ಗಳಿಕೆಯನ್ನು ಸಾಧಿಸಿದವು.