Advertisement

ಬಾಂಬ್ ಸ್ಫೋಟ: ನೋಡಲ್‌ ಅಧಿಕಾರಿ ನೇಮಕ

09:17 AM Apr 23, 2019 | Lakshmi GovindaRaju |

ಬೆಂಗಳೂರು: ಶ್ರೀಲಂಕಾದ ಕೊಲಂಬೋದಲ್ಲಿ ಸಂಭವಿಸಿದ ಸರಣಿ ಬಾಂಬ್‌ ಸ್ಫೋಟದಲ್ಲಿ ಮೃತಪಟ್ಟ ಹಾಗೂ ಗಾಯಾಳುಗಳಾಗಿರುವ ಕನ್ನಡಿಗರ ಕುರಿತು ಮಾಹಿತಿ ಸಂಗ್ರಹಿಸಲು ರಾಜ್ಯ ಸರ್ಕಾರ ನೋಡಲ್‌ ಅಧಿಕಾರಿಯನ್ನು ನೇಮಿಸಿದೆ.

Advertisement

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಪ್ರಧಾನ ಕಾರ್ಯದರ್ಶಿ ಅಜುಂ ಪರ್ವೇಜ್‌ ಅವರನ್ನು ನೋಡಲ್‌ ಅಧಿಕಾರಿಯಾಗಿ ನೇಮಿಸಲಾಗಿದ್ದು, ಶ್ರೀಲಂಕಾ ರಾಯಭಾರ ಕಚೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಜತೆಗೆ ರಮೇಶ್‌ ಬಾಬು ಎಂಬುವರನ್ನು ವಿಶೇಷ ಅಧಿಕಾರಿಯಾಗಿ ನೇಮಿಸಲಾಗಿದೆ.

ಜತೆಗೆ, ಶ್ರೀಲಂಕಾಗೆ ಕಳೆದ ಹತ್ತು ದಿನಗಳಲ್ಲಿ ಕರ್ನಾಟಕದಿಂದ ಪ್ರವಾಸ ಕೈಗೊಂಡವರು, ಅವರು ಉಳಿದಿದ್ದ ಹೋಟೆಲ್‌, ಪ್ರವಾಸಿ ತಾಣಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಪ್ರವಾಸಕ್ಕೆ ಹೋದವರು ವಾಪಸ್ಸಾಗಿದ್ದಾರಾ? ಇಲ್ಲವಾ? ಅಲ್ಲೇ ಉಳಿದುಕೊಂಡಿದ್ದರಾ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಲಿದ್ದಾರೆ.

ವಿಧಾನಸೌಧದಲ್ಲಿ ಈ ಕುರಿತು ಮಾಹಿತಿ ನೀಡಿದ ರಾಜ್ಯ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌, ಅಜುಂ ಪರ್ವೇಜ್‌ ಅವರನ್ನು ನೋಡಲ್‌ ಅಧಿಕಾರಿಯಾಗಿ ನೇಮಿಸಲಾಗಿದೆ.

ಅವರು ಶ್ರೀಲಂಕಾ ರಾಯಭಾರ ಕಚೇರಿಯ ಅಧಿಕಾರಿಗಳ ಜತೆ ಸಂಪರ್ಕದಲ್ಲಿದ್ದಾರೆ. ನೆಲಮಂಗಲ, ಟಿ.ದಾಸರಹಳ್ಳಿ, ತುಮಕೂರಿನಿಂದ ಶ್ರೀಲಂಕಾಗೆ ತೆರಳಿದ್ದ ಏಳು ಜನರ ಪೈಕಿ ನಾಲ್ವರು ಮೃತಪಟ್ಟಿರುವುದು ಖಚಿತಗೊಂಡಿದೆ. ಉಳಿದವರ ಸಂಪರ್ಕ ಸಿಗುತ್ತಿಲ್ಲ ಎಂದು ತಿಳಿಸಿದ್ದಾರೆ.

Advertisement

ಸಿಎಸ್‌ ಜತೆ ಸಿಎಂ ಚರ್ಚೆ: ಈ ಮಧ್ಯೆ, ಉಡುಪಿಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಮುಖ್ಯ ಕಾರ್ಯದರ್ಶಿಗಳ ಜತೆ ಶ್ರೀಲಂಕಾ ದುರಂತ, ಮೃತ ಕನ್ನಡಿಗರ ಪಾರ್ಥಿವ ಶರೀರ ವಾಪಸ್‌ ತರುವ ಸಂಬಂಧ ಚರ್ಚಿಸಿದರು.

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಅವರು ಸಹ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರ ಜತೆ ದೂರವಾಣಿ ಮೂಲಕ ಚರ್ಚಿಸಿ ಮಾಹಿತಿ ಪಡೆದಿದ್ದಾರೆ. ಶ್ರೀಲಂಕಾದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ಕ್ರಮ ಕೈಗೊಳ್ಳಲು ಮನವಿ ಮಾಡಿದರು.

ನೆಲಮಂಗಲದ ಜೆಡಿಎಸ್‌ ನಾಯಕರು ಶ್ರೀಲಂಕಾಗೆ ತೆರಳಿದ್ದು, ಮೃತರ ಪಾರ್ಥಿವ ಶರೀರ ಬೆಂಗಳೂರಿಗೆ ತರುವ ಬಗ್ಗೆ ಅಲ್ಲಿನ ಅಧಿಕಾರಿಗಳ ಜತೆ ಸಂಪರ್ಕದಲ್ಲಿದ್ದಾರೆ. ಮೊದಲ ಹಂತದ ಲೋಕಸಭೆ ಚುನಾವಣೆ ಮತದಾನದ ನಂತರ ನೆಲಮಂಗಲದ ಶಿವಕುಮಾರ್‌,

ಲಕ್ಷ್ಮಿನಾರಾಯಣ್‌, ದಾಸರಹಳ್ಳಿಯ ಹನುಮಂತರಾಯಪ್ಪ, ರಂಗಪ್ಪ, ತುಮಕೂರಿನ ರಮೇಶ್‌, ಮಾರೇಗೌಡ ಸೇರಿ ಏಳು ಮಂದಿ ಶ್ರೀಲಂಕಾ ಪ್ರವಾಸಕ್ಕೆ ತೆರಳಿದ್ದರು. ಆ ಪೈಕಿ ಐವರು ಮೃತಪಟ್ಟಿರುವುದು ದೃಢಪಟ್ಟಿದೆ. ಉಳಿದವರ ಸಂಪರ್ಕ ಸಿಗುತ್ತಿಲ್ಲ.

ಶ್ರೀಲಂಕಾದಲ್ಲಿ ನಡೆದ ಬಾಂಬ್‌ ಸ್ಫೋಟ ಘಟನೆ ಹೇಯ ಕೃತ್ಯ. ಇಂತಹ ಘಟನೆಗಳು ನಿಲ್ಲುವವರೆಗೆ ಜಗತ್ತಿನಲ್ಲಿ ಶಾಂತಿ ಇಲ್ಲ. ಎಲ್ಲರೂ ಒಗ್ಗಟ್ಟಾಗಿ ಇಂತಹ ಕೃತ್ಯಗಳ ವಿರುದ್ಧ ಹೋರಾಡಬೇಕಿದೆ. ಸಂತ್ರಸ್ತರಿಗೆ ನಮ್ಮ ದೇಶ ಕೂಡ ನೆರವು ನೀಡಬೇಕು. ಸಾವಿಗೀಡಾದ ಕುಟುಂಬಗಳಿಗೆ ದುಃಖ ಭರಿಸುವ ಶಕ್ತಿ ದೇವರು ನೀಡಲಿ.
-ಎಚ್‌.ಡಿ.ದೇವೇಗೌಡ, ಮಾಜಿ ಪ್ರಧಾನಿ

ಕೊಲಂಬೋದಲ್ಲಿ ಪ್ರವಾಸದಲ್ಲಿದ್ದ ರಾಜ್ಯದ ಜೆಡಿಎಸ್‌ನ ಏಳು ಮಂದಿಯ ತಂಡ ಬಾಂಬ್‌ ಸ್ಫೋಟದ ನಂತರ ಕಾಣೆಯಾಗಿದೆ. ಇದನ್ನು ಕೇಳಿ ನನಗೆ ಇನ್ನಿಲ್ಲದ ಆಘಾತ ಹಾಗೂ ನೋವಾಗಿದೆ. ಈ ಪೈಕಿ ಇಬ್ಬರು ಭಯೋತ್ಪಾದಕರ ದಾಳಿಗೆ ಬಲಿಯಾಗಿದ್ದಾರೆ ಎಂದು ಶಂಕಿಸಲಾಗಿದೆ. ಕಳೆದು ಹೋಗಿರುವವರ ಪತ್ತೆ ಹಚ್ಚಲು ಭಾರತ ರಾಯಭಾರ ಕಚೇರಿಯೊಂದಿಗೆ ಸತತ ಸಂಪರ್ಕದಲ್ಲಿದ್ದೇನೆ.
-ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next