Advertisement

ಮಂಡಳಿ-ಕ್ಯೂಬ್‌ ಸಭೆ ವಿಫ‌ಲ

11:27 AM Feb 24, 2018 | Team Udayavani |

ಯುಎಫ್ಓ ಮತ್ತು ಕ್ಯೂಬ್‌ ವೆಚ್ಚ ದುಬಾರಿಯಾಗುತ್ತಿರುವ ಹಿನ್ನೆಲೆಯಲ್ಲಿ, ರಿಯಾಯಿತಿಗಾಗಿ ನಡೆಸಿದ ಸಭೆಗಳು ವಿಫ‌ಲವಾಗಿದ್ದು ಮಾರ್ಚ್‌ 2 ರಿಂದ ಯುಎಫ್ಓ ಹಾಗು ಕ್ಯೂಬ್‌ಗ ಯಾವುದೇ ಹೊಸ ಚಿತ್ರಗಳನ್ನು ಕೊಡದಿರಲು ಆರು ರಾಜ್ಯಗಳ ವಾಣಿಜ್ಯ ಮಂಡಳಿ ಒಮ್ಮತದಿಂದ ತೀರ್ಮಾನಿಸಿದೆ. ಶುಕ್ರವಾರ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಕರ್ನಾಟಕ, ತಮಿಳುನಾಡು, ಆಂಧ್ರ, ತೆಲಂಗಾಣ, ಕೇರಳ ಹಾಗು ಪುದುಚೇರಿ ರಾಜ್ಯಗಳ ವಾಣಿಜ್ಯ ಮಂಡಳಿ ಅಧ್ಯಕ್ಷರು ಈ ನಿರ್ಧಾರ ತೆಗೆದುಕೊಂಡಿದ್ದಾರೆ.

Advertisement

ಈ ಕುರಿತು ವಿವರ ನೀಡಿದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು, “ಈ ಹಿಂದೆ ಹೈದರಾಬಾದ್‌, ಚೆನ್ನೈನಲ್ಲಿ ಯುಎಫ್ಓ ಮತ್ತು ಕ್ಯೂಬ್‌ ವೆಚ್ಚ ದುಬಾರಿಯಾದ ಹಿನ್ನೆಲೆಯಲ್ಲಿ ಸಭೆ ನಡೆಸಲಾಗಿತ್ತು. ಆದರೆ, ಆ ಸಭೆಯಲ್ಲಿ ಯಾವುದೇ ತೀರ್ಮಾನ ಕೈಗೊಳ್ಳಲಾಗಿರಲಿಲ್ಲ. ಬೆಂಗಳೂರಿನಲ್ಲಿ ನಡೆದ ಮೂರನೇ ಅಂತಿಮ ಸಭೆಯಲ್ಲೂ ಅವರು ನಮ್ಮ ಬೇಡಿಕೆಗೆ ಸ್ಪಂದಿಸಿಲ್ಲ. ಹೀಗಾಗಿ ನಾವು ಮಾರ್ಚ್‌ 2 ರಿಂದ ಅವರಿಗೆ ಯಾವುದೇ ಹೊಸ ಚಿತ್ರಗಳನ್ನು ಕೊಡದಿರಲು ತೀರ್ಮಾನಿಸಿದ್ದೇವೆ.

ನಾವು ಈಗಿನ ವೆಚ್ಚದಲ್ಲಿ ಶೇ.25 ರಷ್ಟು ಕಡಿಮೆ ಮಾಡಿ ಎಂಬ ಬೇಡಿಕೆ ಇಟ್ಟರೂ, ಅವರು ಕೇವಲ ಶೇ.9 ರಷ್ಟು ಕಡಿಮೆ ಮಾಡುವುದಾಗಿ ಹೇಳಿದ್ದಾರೆ. ಹಾಗಾಗಿ ನಮ್ಮ ನಡುವಿನ ಮಾತುಕತೆ ವಿಫ‌ಲವಾಗಿದೆ. ಇದರಿಂದ ಆರು ರಾಜ್ಯಗಳ ವಾಣಿಜ್ಯ ಮಂಡಳಿ ಈ ಒಮ್ಮತದ ತೀರ್ಮಾನ ಮಾಡಿದೆ’ ಎಂದರು. ನಮ್ಮ ಮಾತಿಗೆ ಬೆಲೆ ಕೊಡದ ಅವರ ಜೊತೆ ನಾವು ಇನ್ನು ಮುಂದೆ ಯಾವುದೇ ವ್ಯವಹಾರ ಇಟ್ಟುಕೊಳ್ಳುವುದಿಲ್ಲ. ಅದಕ್ಕೆ ಈಗಾಗಲೇ ಪರ್ಯಾಯ ವ್ಯವಸ್ಥೆಯನ್ನೂ ಮಾಡಲಾಗಿದೆ.

ಬೇಕಾದಷ್ಟು ಮಂದಿ, ಮುಂದೆ ಬಂದಿದ್ದಾರೆ. ನಮಗೆ ನಿರ್ಮಾಪಕರನ್ನು ಅನುಕೂಲಗೊಳಿಸುವುದಷ್ಟೇ ಮುಖ್ಯ ಗುರಿ. ಆದರೆ, ಯುಎಫ್ಓ, ಕ್ಯೂಬ್‌ನವರು ಒಂದೇ ರೀತಿಯ ರೇಟು ಫಿಕ್ಸ್‌ ಮಾಡಿದ್ದಾರೆ. ವರ್ಷಕ್ಕೆ ನೂರಾರು ಚಿತ್ರಗಳು ಬಿಡುಗಡೆಯಾಗುತ್ತವೆ. ಯಶಸ್ಸು ಶೇ.10 ರಷ್ಟು ಮಾತ್ರ. ನಿರ್ಮಾಪಕ ನಷ್ಟ ಅನುಭವಿಸುತ್ತಿದ್ದರೂ, ಅವರು ಮಾತ್ರ ದುಪ್ಪಟ್ಟು ಹಣ ಪಡೆಯುತ್ತಿದ್ದಾರೆ. ನಿರ್ಮಾಪಕನಿಗೆ ಏನೂ ಸಿಗುತ್ತಿಲ್ಲ. ಸಿನಿಮಾ ಪ್ರದರ್ಶನಕ್ಕೂ ಮುನ್ನ, ಜಾಹಿರಾತು ಹಾಕುತ್ತಾರೆ.

ಆ ಜಾಹಿರಾತಿನಿಂದ ವರ್ಷಕ್ಕೆ ಒಂದು ಚಿತ್ರಮಂದಿರದಿಂದ ಸುಮಾರು 4.50 ಲಕ್ಷ ರೂ. ಹಣ ಅವರಿಗೆ ಹೋಗುತ್ತೆ. ಆ ಹಣ ವಿತರಕ, ಪ್ರದರ್ಶಕ ಹಾಗು ನಿರ್ಮಾಪಕರಿಗೆ ಸಿಗಲ್ಲ. ಹೋಗಲಿ, ಆ ಹಣ ಬೇಡ, ನಮ್ಮ ಬೇಡಿಕೆಯಂತೆ, ವೆಚ್ಚದಲ್ಲಿ ಶೇ.25 ರಷ್ಟು ಕಡಿಮೆ ಮಾಡಿ ಅಂದರೂ ಅದನ್ನೂ ಒಪ್ಪುತ್ತಿಲ್ಲ ಎಂದು ಹೇಳಿದರು. ನಿರ್ಮಾಪಕರು ಕಷ್ಟಪಟ್ಟು ಚಿತ್ರ ನಿರ್ಮಾಣ ಮಾಡುತ್ತಾರೆ. ಒಂದೊಂದು ಸಿನಿಮಾಗಳ ಗುಣಮಟ್ಟ ಒಂದೊಂದು ರೀತಿ ಇರುತ್ತೆ. ಅದಕ್ಕೆ ತಕ್ಕಂತೆ ರೇಟು ಇಟ್ಟು, ದುಬಾರಿ ಮಾಡಿದ್ದಾರೆ.

Advertisement

ಈಗ ಶೇ.25 ರಷ್ಟು ಕಡಿಮೆ ಮಾಡಿ, ಅಕ್ಟೋಬರ್‌ ಬಳಿಕ ಮರುಪರಿಶೀಲನೆ ಮಾಡೋಣ ಅಂತ ಹೇಳಿದ್ದಕ್ಕೂ ಅವರು ಒಪ್ಪಿಲ್ಲ. ನಾವು ಅವರ ಮಾತಿಗೆ ಒಪ್ಪದೆ, ಈ ತೀರ್ಮಾನಕ್ಕೆ ಬಂದಿದ್ದೇವೆ. ಸ್ಥಳೀಯ ಭಾಷೆಯ ಚಿತ್ರಗಳಿಗೆ ಸಾಕಷ್ಟು ವೆಚ್ಚ ಭರಿಸಬೇಕಿದೆ. ಆದರೆ, ಇಂಗ್ಲೀಷ್‌ ಚಿತ್ರಗಳಿಗೆ ಒಂದು ರುಪಾಯಿ ಕೂಡ ಅವರು ಚಾರ್ಜ್‌ ಮಾಡುತ್ತಿಲ್ಲ. ಇಡೀ ಚಿತ್ರರಂಗ ಈಗ ಅವರನ್ನೇ ಅವಲಂಬಿಸಿದೆ. ಹಾಗಾಗಿ ನಾವೂ ಕೂಡ ಹಂತ ಹಂತವಾಗಿ, ಅವರಿಂದ ಹೊರಬರಬೇಕು ಎಂದು ಯೋಚಿಸಿದ್ದೇವೆ.

ಈಗಾಗಲೇ ಒಂದಿಬ್ಬರು ಪರ್ಯಾಯ ವ್ಯವಸ್ಥೆಗೂ ಸಜ್ಜಾಗಿದ್ದಾರೆ. ಸ್ವಲ್ಪ ಸಮಯ ಬೇಕಿದೆ. ಆಮೇಲೆ ಎಲ್ಲವೂ ಸರಿಹೋಗಲಿದೆ. ಮಾರ್ಚ್‌ 2 ರಿಂದ ಹೊಸ ಚಿತ್ರಗಳ ವ್ಯವಹಾರ ಮಾಡುವುದಿಲ್ಲ. ಆದರೆ, ಈಗಾಗಲೇ ಸೆನ್ಸಾರ್‌ ಆಗಿರುವ ಚಿತ್ರಗಳು ಅವರ ಜತೆ ವ್ಯವಹರಿಸಿದ್ದರೆ, ಅವೆಲ್ಲವೂ ಬಿಡುಗಡೆಯಾಗುತ್ತವೆ. ಸದ್ಯಕ್ಕೆ ಆರು ರಾಜ್ಯಗಳ ಫಿಲ್ಮ್ಚೇಂಬರ್‌ನಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು.

ಮೊದಲೆಲ್ಲಾ ಪ್ರದರ್ಶನವೊಂದಕ್ಕೆ 50 ರುಪಾಯಿ ಕೊಡಿ ಸಾಕು ಅಂತ ಬಂದರು. ನಾವೂ ಆಯ್ತು ಅಂತ ಡಿಜಿಟಲ್‌ಗೆ ಮೊರೆ ಹೋದೆವು. ಈಗ ನೋಡಿದರೆ, 14 ಸಾವಿರದಿಂದ 27 ಸಾವಿರ ರುಪಾಯಿವರೆಗೆ ಬಂದಿದ್ದಾರೆ. ಇದು ಜಾಸ್ತಿಯಾಗಿದೆ. ಪ್ರಾದೇಶಿಕ ಭಾಷೆ ಚಿತ್ರಗಳಿಗೆ ಕಡಿಮೆ ಮಾಡಬೇಕು ಆದರೆ, ಅದಕ್ಕೆ ಹೆಚ್ಚು ಹಣ ಪಡೆದು, ಹಾಲಿವುಡ್‌ ಚಿತ್ರಗಳಿಗೆ ಯಾವುದೇ ಹಣ ಪಡೆಯದೆ ಅವಕಾಶ ಕೊಡುತ್ತಿದ್ದಾರೆ.

ಇಷ್ಟರಲ್ಲೇ ನಾವು ಸಭೆ ಸೇರಿ, ಮುಂದಿನ ವ್ಯವಸ್ಥೆ ಕುರಿತು ಚರ್ಚಿಸಲಿದ್ದೇವೆ ಎಂದರು. ಸಭೆಯಲ್ಲಿ ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸುರೇಶ್‌, ಸುರೇಶ್‌ಬಾಬು, ರವಿ ಕೋಟರರ್‌, ರಾಕ್‌ಲೈನ್‌ ವೆಂಕಟೇಶ್‌, ಎಂ.ಜಿ.ರಾಮಮೂರ್ತಿ, ಚಂದ್ರಶೇಖರ್‌, ಎನ್‌.ಎಂ.ಸುರೇಶ್‌, ನರಸಿಂಹಲು ಸೇರಿದಂತೆ ಮಂಡಳಿಯ ಹಲವು ಪದಾಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next