ಮುಂಬಯಿ: ತನ್ನ ವಾರ್ಷಿಕ ಸಂಪ್ರದಾಯದಂತೆ ಬಿಎಂಸಿ ಈ ವರ್ಷವೂ 12 ದಿನಗಳ ಗಣೇಶೋತ್ಸವ ಆಚರಣೆ ಸಂದರ್ಭ ನಗರದ ರಸ್ತೆಗಳಿಗೆ ಹಾನಿ ಉಂಟು ಮಾಡಿದ್ದಕ್ಕಾಗಿ ಹಾಗೂ 200ಕ್ಕೂ ಹೆಚ್ಚಿನ ಗುಂಡಿಗಳನ್ನು ಮುಚ್ಚದೆ ಹಾಗೇ ಬಿಟ್ಟುಹೋಗಿರುವುದಕ್ಕಾಗಿ ಲಾಲ್‌ಬಾಗ್‌ನ ರಾಜ ಸಾರ್ವಜನಿಕ ಗಣೇಶೋತ್ಸವ ಮಂಡಲಕ್ಕೆ 4.8ಲ. ರೂ.ಗಳ ದಂಡ ವಿಧಿಸಿದೆ. ಕಳೆದ ವರ್ಷ ಮಂಡಳಿಗೆ 4.5ಲ.ರೂ.ಗಳ ದಂಡ ವಿಧಿಸಲಾಗಿದ್ದು, ಅದನ್ನು ಅದು ಪಾವತಿಸಿತ್ತು.
ಪೆಂಡಾಲ್ ನಿರ್ಮಾಣ ಹಾಗೂ ಭಕ್ತರ ಸಾಲುಗಳನ್ನು ನಿರ್ವ ಹಿಸಲು ವಿಭಾಜಕಗಳನ್ನು ರಚಿಸುವ ಮೂಲಕ ರಸ್ತೆಗೆ ಹಾನಿ ಉಂಟು ಮಾಡಿರುವುದಕ್ಕಾಗಿ ಮಂಡಲಕ್ಕೆ 4.86 ಲ.ರೂ. ದಂಡ ವಿಧಿಸಲಾಗಿದೆ ಎಂದು ಎಫ್ ದಕ್ಷಿಣ ವಾರ್ಡ್‌ನ ಸಹಾಯಕ ಆಯುಕ್ತ ವಿಶ್ವಾಸ್ ಮೋತೆ ಹೇಳಿದ್ದಾರೆ.
ಮಂಡಲಗಳು ದಂಡ ಪಾವತಿಸುವ ವರೆಗೆ ಕಾಯುವ ಬದಲಿಗೆ ನಾವು ಈಗಲೇ ಗುಂಡಿಗಳನ್ನು ಮುಚ್ಚುವ ಕಾರ್ಯ ಆರಂಭಿಸಿದ್ದೇವೆ.ಒಂದು ವಾರದೊಳಗಾಗಿ ಎಲ್ಲ ರಸ್ತೆಗಳ ದುರಸ್ತಿ ಮಾಡಲಾಗುವುದು ಎಂದು ಎಫ್ ದಕ್ಷಿಣ ವಾರ್ಡ್‌ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪಾಲಿಕೆ ಅಧಿಕಾರಿಗಳು ಎಲ್ಲ 24 ವಾರ್ಡ್‌ಗಳಲ್ಲಿ ಗಣೇಶ ಮಂಡಲ ಗಳಿಂದ ರಸ್ತೆಗಳಿಗೆ ಉಂಟಾಗಿರುವ ಹಾನಿಯನ್ನು ಲೆಕ್ಕಹಾಕಲು ಆರಂಭಿಸಿರುವ ಹೊರತಾಗಿಯೂ ಈ ಪರಿಶೀಲನೆ ಪೂರ್ಣಗೊಳಿಸಲು ಅವರಿಗೆ ಕನಿಷ್ಟ ವಾರ ಬೇಕಾಗಲಿದೆ. ಪ್ರತಿ ಗುಂಡಿಗೆ ಬಿಎಂಸಿಯು 2,000 ರೂ.ಶುಲ್ಕ ವಿಧಿಸುತ್ತಿದೆ.
ದಂಡ ವಿಧಿಸಲಾಗಿರುವ ಬಗ್ಗೆ ತಮಗೆ ಬಿಎಂಸಿಯಿಂದ ಈವರೆಗೆ ಯಾವುದೇ ರೀತಿಯ ನೋಟಿಸ್ ಸಿಕ್ಕಿಲ್ಲ. ನಮ್ಮ ಪೆಂಡಾಲ್‌ನಿಂದಾಗಿ ರಸ್ತೆಗಳಿಗೆ ಹಾನಿಯಾಗಿದ್ದರೆ, ನಾವು ಅದನ್ನು ಪಾವತಿಸಲು ಸಿದ್ಧರಾಗಿದ್ದೇವೆ. ಆದರೆ, ಈ ವರ್ಷ ನಾವು ಹೆಚ್ಚುವರಿ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದ್ದು, ನಮ್ಮಿಂದ ರಚಿಸಲಾಗಿರುವ ಎಲ್ಲ ಗುಂಡಿಗಳನ್ನು ಮುಚ್ಚಿ ಹಾಕಿದ್ದೇವೆ. ನಮ್ಮಿಂದಾಗಿ 200ಕ್ಕೂ ಹೆಚ್ಚು ಗುಂಡಿಗಳು ಉಳಿದಿರಲು ಸಾಧ್ಯವೇ ಇಲ್ಲ ಎಂದು ಲಾಲ್‌ಬಾಗಾ ರಾಜ ಸಾರ್ವಜನಿಕ ಗಣೇಶೋತ್ಸವ ಮಂಡಲದ ಅಧ್ಯಕ್ಷ ಬಾಳಾಸಾಹೇಬ್ ಕಾಂಬ್ಳೆ ಪ್ರತಿಪಾದಿಸಿದ್ದಾರೆ.