Advertisement

ಬಿ.ಕೆ.ಹರಿಪ್ರಸಾದ್‌ ನಾಮಪತ್ರ ಸಲ್ಲಿಕೆ

11:43 AM Mar 27, 2019 | Lakshmi GovindaRaju |

ಬೆಂಗಳೂರು: ಕಾಂಗ್ರೆಸ್‌ನ ಹಿರಿಯ ಮುಖಂಡ ಬಿ.ಕೆ.ಹರಿಪ್ರಸಾದ್‌ ಅವರು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟದ ಅಭ್ಯರ್ಥಿಯಾಗಿ ಮಂಗಳವಾರ ನಾಮಪತ್ರ ಸಲ್ಲಿಸಿದರು.

Advertisement

ಪಕ್ಷದ ಹಿರಿಯ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಬೆಳಗ್ಗೆ ಬಸವನಗುಡಿಯ ದೊಡ್ಡ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ, ಜಯನಗರದ 2ನೇ ಹಂತದಲ್ಲಿರುವ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ದಕ್ಷಿಣ ವಲಯ ಕಚೇರಿಯಲ್ಲಿ ಚುನಾವಣಾಧಿಕಾರಿಗಳಿಗೆ ನಾಮಪತ್ರವನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಮೇಯರ್‌ ಗಂಗಾಂಬಿಕೆ, ಶಾಸಕರಾದ ರಾಮಲಿಂಗಾರೆಡ್ಡಿ, ಸೌಮ್ಯರೆಡ್ಡಿ, ಎಂ.ಕೃಷ್ಣಪ್ಪ, ಆರ್‌.ರೋಶನ್‌ ಬೇಗ್‌, ಮಾಜಿ ಶಾಸಕ ಆರ್‌.ವಿ.ದೇವರಾಜ್‌, ಮುಖಂಡ ಬಿ.ಕೆ.ಶಿವರಾಂ, ಜೆಡಿಎಸ್‌ ಪರಿಷತ್‌ ಸದಸ್ಯ ಟಿ.ಎ. ಶರವಣ ಉಪಸ್ಥಿತರಿದ್ದರು.

ನಾಮಪತ್ರ ಸಲ್ಲಿಕೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಬಿ.ಕೆ.ಹರಿಪ್ರಸಾದ್‌, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ತನ್ನದೇ ಆದ ಮತಗಳಿವೆ. ಜತಗೆ ಮೂವರು ಕಾಂಗ್ರೆಸ್‌ ಶಾಸಕರಿದ್ದು, ಜೆಡಿಎಸ್‌ ಕೂಡ ಬೆಂಬಲ ಸೂಚಿಸಿರುವುದರಿಂದ ಗೆಲುವಿನ ವಿಶ್ವಾಸವಿದೆ ಎಂದು ಹೇಳಿದರು.

ಮುಖಂಡರೊಂದಿಗೆ ಮಾತುಕತೆ: ಇದಕ್ಕೂ ಮೊದಲು ಹರಿಪ್ರಸಾದ್‌, ಜಯನಗರದ ಕಮ್ಯೂನಿಟಿ ಇನ್‌ಸ್ಟಿಟ್ಯೂಟ್‌ ಆಫ್ ಮ್ಯಾನೇಜ್‌ಮೆಂಟ್‌ ಸ್ಟಡೀಸ್‌ ಕಾಲೇಜಿನಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಸ್ಥಳೀಯ ಮುಖಂಡರನ್ನು ಭೇಟಿ ಮಾಡಿ, ಗೆಲುವಿನ ಬಗ್ಗೆ ಸಮಾಲೋಚನೆ ನಡೆಸಿದರು. ಮಾಜಿ ಮೇಯರ್‌ಗಳಾದ ರಾಮಚಂದ್ರಪ್ಪ, ಮಂಜುನಾಥ ರೆಡ್ಡಿ, ಸಂಪತ್‌ ಕುಮಾರ್‌ ಹಾಜರಿದ್ದರು.

Advertisement

ಮೋದಿ ಅಲೆಯಿಲ್ಲ: ಕಳೆದ ಬಾರಿ ಪ್ರಧಾನಿ ನರೇಂದ್ರ ಮೋದಿ ಅವರ ಪರ ಅಲೆಯಿತ್ತು. ಈ ಬಾರಿ ಅಂತಹ ಯಾವುದೇ ಅಲೆಯಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರು ಗುರುತಿಸಿಕೊಂಡಿದ್ದು, ಬುದ್ಧಿವಂತರು ಹೆಚ್ಚು ಇಲ್ಲಿ ನೆಲೆಸಿದ್ದಾರೆ.

ಆಲೋಚನೆ ಮಾಡಿ ಮತ ಹಾಕುವ ಶಕ್ತಿ ಅವರಿಗಿದೆ ಎಂದರು. ಬಿಜೆಪಿ ಹಿರಿಯ ಮುಖಂಡ ದಿವಂಗತ ಅನಂತ್‌ಕುಮಾರ್‌ ಅವರ ಪತ್ನಿ ತೇಜಸ್ವಿನಿ ಅನಂತ್‌ಕುಮಾರ್‌ ಅವರಿಗೆ ಕೊನೆ ಗಳಿಗೆಯಲ್ಲಿ ಬಿಜೆಪಿ ಟಿಕೆಟ್‌ ನಿರಾಕರಿಸಿರುವುದು ಆ ಪಕ್ಷದ ಆಂತರಿಕ ವಿಷಯ. ಅದರ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದರು.

ಆಸ್ತಿ ವಿವರ: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಬಿ.ಕೆ.ಹರಿಪ್ರಸಾದ್‌ ಅವರು, ಕೃಷಿ ಭೂಮಿ ಹೊಂದಿಲ್ಲ. 10.50 ಕೋಟಿ ಮೌಲ್ಯದ ವಾಣಿಜ್ಯ ಕಟ್ಟಡ ಹೊಂದಿದ್ದಾರೆ. ತಮ್ಮ ಹೆಸರಿನಲ್ಲಿ 9.36 ಲಕ್ಷ ದ ಒಂದು ಕಾರು, 3.50 ಲಕ್ಷ ಮೌಲ್ಯದ ಇನ್ನೊಂದು ಕಾರು, ಪತ್ನಿ ಹೆಸರಿನಲ್ಲಿ 20 ಲಕ್ಷ ಮೌಲ್ಯದ ಚಿನ್ನಾಭರಣ ಹೊಂದಿದ್ದಾರೆ

ನಗದು: 30 ಸಾವಿರ ರೂ.
ಚರಾಸ್ತಿ: 46.01 ಲಕ್ಷ ರೂ.
ಸ್ಥಿರಾಸ್ತಿ: 24 ಕೋಟಿ ರೂ.
ಸಾಲ: 3.44 ಕೋಟಿ ರೂ.

ಪ್ರಧಾನಿ ನರೇಂದ್ರ ಮೋದಿ ಸುಳ್ಳು ಭರವಸೆಗಳನ್ನು ನೀಡುತ್ತಿದ್ದು, ಉದ್ಯೋಗವಿಲ್ಲದೆ ಯುವಕರು ಪರದಾಡುತ್ತಿದ್ದಾರೆ. ಹೀಗಾಗಿ ಜನತೆ ಈ ಬಾರಿ ಬಿಜೆಪಿ ಪಕ್ಷಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ಬಿ.ಕೆ.ಹರಿಪ್ರಸಾದ್‌ ಅವರ ಗೆಲುವಿಗೆ ಒಗ್ಗಟಾಗಿ ಹೋರಾಟ ನಡೆಸುತ್ತೇವೆ.
-ರಾಮಲಿಂಗಾರೆಡ್ಡಿ, ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next