ನವದೆಹಲಿ: ಮದ್ಯ ನೀತಿ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಎಪ್ರಿಲ್ 16 ರಂದು ಕೇಂದ್ರ ತನಿಖಾ ದಳ (ಸಿಬಿಐ) ವಿಚಾರಣೆಗೆ ಕರೆಸಿದೆ. ಇದು ತನ್ನ ವಿರೋಧಿಗಳನ್ನು ತೊಡೆದುಹಾಕಲು ಬಿಜೆಪಿಯ ಸೂತ್ರ ಎಂದು ಆಮ್ ಆದ್ಮಿ ಪಕ್ಷ ಆಕ್ರೋಶ ಹೊರ ಹಾಕಿದೆ. ಸಿಬಿಐನ ಕ್ರಮದ ಬಗ್ಗೆ ಅರವಿಂದ್ ಕೇಜ್ರಿವಾಲ್ ಇನ್ನೂ ಪ್ರತಿಕ್ರಿಯಿಸಿಲ್ಲ.
ಎಎಪಿ ನಾಯಕಿ ಅತಿಶಿ ಮಾತನಾಡಿ, “ಕೇಂದ್ರ ಸರಕಾರಿ ತನಿಖಾ ಸಂಸ್ಥೆ ಸಿಎಂ ಕೇಜ್ರಿವಾಲ್‌ಗೆ ನೋಟಿಸ್ ಕಳುಹಿಸಿದೆ. ಎದುರಾಳಿಗಳನ್ನು ಮಟ್ಟ ಹಾಕಲು ಬಿಜೆಪಿಯ ಸೂತ್ರವಿದು. ಅವರ ವಿರುದ್ಧ ಯಾರೇ ಧ್ವನಿ ಎತ್ತಿದರೂ ನಿರ್ಮೂಲನೆ ಮಾಡಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸ್ನೇಹಿತರ ಕಂಪನಿಯಲ್ಲಿ ಸಾವಿರಾರು ಕೋಟಿ ಹೂಡಿಕೆಯಾಗಿದೆ. ಎಲ್ ಐಸಿಯ 50,000 ಕೋಟಿ ರೂ. ಇವೆಲ್ಲವನ್ನೂ ತನಿಖೆ ಮಾಡಿಲ್ಲ. ಆದರೆ ಸಿಎಂ ಕೇಜ್ರಿವಾಲ್ ಅದನ್ನು ಬಹಿರಂಗಪಡಿಸಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಎಎಪಿ ನಾಯಕ ಸಂಜಯ್ ಸಿಂಗ್ ಮಾತನಾಡಿ, “ಪಿಎಂ ಮೋದಿ ಅವರು ತಮ್ಮ ಸ್ನೇಹಿತ ಅದಾನಿ ಕಂಪನಿಯಲ್ಲಿ ಲಕ್ಷ ಕೋಟಿ ಕಪ್ಪು ಹಣವನ್ನು ಹೂಡಿಕೆ ಮಾಡಿದ್ದಾರೆ. ದೆಹಲಿಯ ವಿಧಾನಸಭೆಯಲ್ಲಿ ಅರವಿಂದ್ ಕೇಜ್ರಿವಾಲ್ ಅವರು ಮೋದಿ ಭ್ರಷ್ಟಾಚಾರದ ಸತ್ಯವನ್ನು ಬಹಿರಂಗಪಡಿಸಿದರು. ಸಿಬಿಐ ನೋಟಿಸ್ ಅವರಿಗೆ ಶಿಕ್ಷೆಯಾಗಿದೆ.” ಎಂದು ಆಕ್ರೋಶ ಹೊರ ಹಾಕಿದ್ದಾರೆ.
ದೆಹಲಿ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅನಿಲ್ ಚೌಧರಿ ಟ್ವೀಟ್ ಮಾಡಿ , “ದಿಲ್ಲಿಯನ್ನು ಹಗರಣಗಳ ರಾಜಧಾನಿ ಮಾಡಲು ಕೇಜ್ರಿವಾಲ್ ಕಾರಣರಾಗಿದ್ದಾರೆ. ನೀವು ಸಿಎಂ ಹುದ್ದೆಯ ಘನತೆಯನ್ನು ಉಳಿಸಲು ಬಯಸಿದರೆ ರಾಜೀನಾಮೆ ನೀಡಿ ಸಿಬಿಐ ಬಾಗಿಲಿಗೆ ಬನ್ನಿ” ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಫೆಬ್ರವರಿಯಲ್ಲಿ, ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಎಂಟು ಗಂಟೆಗಳ ಕಾಲ ವಿಚಾರಣೆ ನಡೆಸಿದ ನಂತರ ಸಿಬಿಐ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಬಂಧಿಸಿತ್ತು.
ಕಳೆದ ವರ್ಷ ಜುಲೈನಲ್ಲಿ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು ಹೊಸ ಅಬಕಾರಿ ನೀತಿಯು ಖಾಸಗಿ ಮದ್ಯ ಮಾರಾಟಗಾರರಿಗೆ ಅನಗತ್ಯ ಪ್ರಯೋಜನಗಳನ್ನು ನೀಡಿದೆ ಎಂಬ ಆರೋಪದ ಬಗ್ಗೆ ಸಿಬಿಐ ತನಿಖೆಗೆ ಶಿಫಾರಸು ಮಾಡಿತ್ತು.