Advertisement
ಬದಿಯಡ್ಕ, ಪಳ್ಳತ್ತಡ್ಕ, ಕುಂಬಾಜೆ, ಮುಳ್ಳೇರಿಯ, ನೀರ್ಚಾಲು, ವರ್ಕಾಡಿ ಸಹಿತ ಜಿಲ್ಲೆಯ ವಿವಿಧೆಡೆಗಳಿಂದ ತೆರಳಿದ ಬಿಜೆಪಿ ಕಾರ್ಯಕರ್ತರ ಬಸ್‌ಗಳಿಗೆ ಕಲ್ಲೆಸೆಯಲಾಗಿದೆ. ಕಾಸರಗೋಡಿನಿಂದ ನೀಲೇಶ್ವರ ಮಧ್ಯೆ ಕಲ್ಲೆಸೆತ ನಡೆದಿದ್ದು, ವಾಹನಗಳಿಗೆ ವ್ಯಾಪಕ ನಾಶನಷ್ಟ ಸಂಭವಿಸಿದೆ. ಹಲವರು ಗಾಯಗೊಂಡಿದ್ದಾರೆ. ವರ್ಕಾಡಿ ಭಾಗಕ್ಕೆ ಮರಳುತ್ತಿದ್ದ ಬಿಜೆಪಿ ಕಾರ್ಯಕರ್ತರು ಸಂಚರಿಸಿದ ಮೂರು ಬಸ್‌ಗಳಿಗೆ ನೀಲೇಶ್ವರ, ಚಂದ್ರಗಿರಿ ಹಾಗೂ ಉದುಮದಲ್ಲಿ ಕಲ್ಲೆಸೆಯಲಾಗಿದೆ. ಉದುಮದಲ್ಲಿ ಪೊಲೀಸರ ಕಣ್ಮುಂದೆಯೇ ಆರು ಮಂದಿಯ ತಂಡ ಕಲ್ಲೆಸೆದು ಪರಾರಿಯಾಗಿದ್ದಾಗಿ ದೂರಲಾಗಿದೆ. ನೀಲೇಶ್ವರ ಬಳಿ ನಡೆದ ಕಲ್ಲೆಸೆತದಿಂದ ಪಳ್ಳತ್ತಡ್ಕ ನಿವಾಸಿಯೊಬ್ಬರು ಗಾಯಗೊಂಡಿದ್ದಾರೆ. ಕಾಸರಗೋಡು ಬಳಿಯ ಚಳಿಯಂಗೋಡಿನಲ್ಲಿ ಬಸ್ಸೊಂದಕ್ಕೆ ಕಲ್ಲೆಸೆಯಲಾಗಿದೆ. ಅದರಿಂದ ಅನಂತರ ಬಂದ ವಾಹನಗಳನ್ನು ಇಲ್ಲಿ ನಿಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ಈ ರಸ್ತೆಯಲ್ಲಿ ಬಂದ ಕೆಎಸ್‌ಆರ್‌ಟಿಸಿ ಬಸ್‌ಗೆ ತಂಡವೊಂದು ಕಲ್ಲೆಸೆದಿದೆ. ಇದರಿಂದ ಗಾಜು ಪುಡಿಯಾಗಿದೆ. ಸುಮಾರು 5 ಸಾವಿರ ರೂ. ನಷ್ಟವಾಗಿದೆ. ಸ್ಥಳಕ್ಕೆ ಧಾವಿಸಿದ ಬೇಕಲ ಪೊಲೀಸರು ಅಲ್ಲಿ ಗುಂಪು ಗೂಡಿದ್ದ ಜನರನ್ನು ಚದುರಿಸಲು ಅಶ್ರುವಾಯು ಪ್ರಯೋಗಿಸಿದರು.
ಕರಿವೆಳ್ಳೂರು ಪೇಟೆಯಲ್ಲಿರುವ ಸಿಂಡಿಕೇಟ್ ಬ್ಯಾಂಕ್‌ನ ಎಟಿಎಂ ಕೌಂಟರ್‌ಗೆ ಹಾನಿ ಮಾಡಲಾಗಿದೆ. ಕರಿವೆಳ್ಳೂರು ಟೆಲಿಫೋನ್ ಎಕ್ಸ್‌ಚೇಂಜ್‌ಗೆ ಕಲ್ಲೆಸೆದು ಗಾಜು ಪುಡಿ ಮಾಡಲಾಗಿದೆ. ಹಲವು ಮನೆಗಳಿಗೆ ಕಲ್ಲೆಸೆದು ಹಾನಿ ಮಾಡಲಾಗಿದೆ. ಬಿಜೆಪಿ ಕಾರ್ಯಕರ್ತರು ಪ್ರಯಾಣಿಸುತ್ತಿದ್ದ ಬಸ್‌ಗಳಿಗೆ ಪಡನ್ನಕ್ಕಾಡ್‌ನಲ್ಲಿ ಕಲ್ಲೆಸೆಯಲಾಗಿದೆ. ಕಲ್ಲೆಸೆತದಿಂದ ಕಾಸರಗೋಡನ ನಗರಸಭೆಯ ಮಾಜಿ ಕೌನ್ಸಿಲರ್ ಗಾಯಗೊಂಡಿದ್ದಾರೆ. ಬಿಜೆಪಿ ಕಾರ್ಯಕರ್ತ ಕಿಶೋರ್ ಸಹಿತ ಹಲವರು ಗಾಯಗೊಂಡಿದ್ದಾರೆ. ಸಿಪಿಎಂ ಕಾರ್ಯಕರ್ತರು ಕಲ್ಲೆಸೆದಿರುವುದಾಗಿ ಆರೋಪಿಸಲಾಗಿದೆ. ಕಲ್ಲೆಸೆದವರನ್ನು ಬಂಧಿಸಬೇಕೆಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ರಸ್ತೆಯಲ್ಲೇ ಕುಳಿತು ಹೆದ್ದಾರಿ ತಡೆಯೊಡ್ಡಿದ್ದರು.