ಪುಂಜಾಲಕಟ್ಟೆ: ಬಂಟ್ವಾಳದಲ್ಲಿ ಸಚಿವ ರಮಾನಾಥ ರೈ ಅವರ ಜನವಿರೋಧಿ ನೀತಿಯಿಂದ ಜನ ಬೇಸತ್ತಿದ್ದಾರೆ. ಅವರ ಸವಾಲನ್ನು ಸ್ವೀಕರಿಸಿ ಪಕ್ಷ ಸಂಘಟನೆಗಾಗಿ ವಿಸ್ತಾರಕನಾಗಿ ಬಂದಿದ್ದು, ಮುಂದಿನ ಚುನಾವಣೆಯಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ಬಿಜೆಪಿ ತೆಕ್ಕೆಗೆ ಬರುವುದು ನಿಶ್ಚಿತ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದರು. ಅವರು ಶುಕ್ರವಾರ ಬಂಟ್ವಾಳ ತಾಲೂಕಿನ ಸಿದ್ದಕಟ್ಟೆ ಅಶ್ವಿನಿ ವಾಣಿಜ್ಯ ಸಂಕೀರ್ಣದ ಸಭಾಭವನದಲ್ಲಿ ಬಿಜೆಪಿ ಸಂಗಬೆಟ್ಟು ಶಕ್ತಿಕೇಂದ್ರ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ದ.ಕ.ಜಿಲ್ಲೆ ಮತ್ತೆ ಶಾಂತಿಯುತವಾಗಿ ನೆಲೆಸಲು ಬಿಜೆಪಿಯೊಂದೇ ಪರಿಹಾರವಾಗಿದೆ ಎಂದ ಅವರು, ಕೇಂದ್ರ ಸರಕಾರದ ಜನಪರ ಯೋಜನೆಗಳನ್ನು ಹಾಗೂ ಪಕ್ಷದ ಮೂಲ ತತ್ವಗಳನ್ನು ಜನರಿಗೆ ತಿಳಿಸುವುದರ ಜತೆಗೆ ಗ್ರಾಮೀಣ ಸಮಸ್ಯೆಯನ್ನು ಅರಿಯುವ ಕಾರ್ಯವನ್ನು ಕಾರ್ಯಕರ್ತರು ಮಾಡಬೇಕು. ಪ್ರಜಾತಂತ್ರ ವ್ಯವಸ್ಥೆಯಲ್ಲಿ ರಾಜಕೀಯ ಆಗುಹೋಗುಗಳ ಬಗ್ಗೆ ಜನತೆ ತಿಳಿದು ಮತದಾನ ಮಾಡುವಂತಾಗಲು ಕಾರ್ಯಕರ್ತರು ವಿಸ್ತಾರಕರಾಗಬೇಕು ಎಂದರು.
ಸಂಸದ ನಳಿನ್ ಕುಮಾರ್ ಮಾತನಾಡಿ ದ.ಕ. ಜಿಲ್ಲೆಯ ಅಭಿವೃದ್ಧಿಗೆ 2,000 ಕೋ.ರೂ. ಅನುದಾನವನ್ನು ಕೇಂದ್ರ ಸರಕಾರ ಬಿಡುಗಡೆಗೊಳಿಸಿದೆ. ಸಿಆರ್‌ಎಫ್ ಯೋಜನೆಯಲ್ಲಿ ರಸ್ತೆ ಅಭಿವೃದ್ಧಿಗಾಗಿ ಜಿಲ್ಲೆಗೆ 28 ಕೋ.ರೂ. ಈಗಾಗಲೇ ಬಿಡುಗಡೆಗೊಂಡಿದೆ ಎಂದವರು ತಿಳಿಸಿದರು. ಬಿ.ಸಿ.ರೋಡ್‌ನಿಂದ ಮೂಡಬಿದಿರೆ ಮತ್ತು ಬಂಟ್ವಾಳ ಚಾರ್ಮಾಡಿವರೆಗಿನ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿಗೊಳಿಸಲು ಈಗಾಗಲೇ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದ ಅವರು ಬಿ.ಸಿ. ರೋಡ್‌ನ ಸರ್ವಿಸ್ ರಸ್ತೆಯನ್ನು ಕಾಂಕ್ರೀಟ್‌ಗೊಳಿಸಿ ಅಭಿವೃದ್ಧಿ ಪಡಿಸಲು 19 ಕೋ.ರೂ.ಅನುದಾನ ಮಂಜೂರಾಗಿದ್ದು ಟೆಂಡರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗಿದೆ.ಮಳೆಗಾಲ ಮುಗಿದ ತತ್‌ಕ್ಷಣ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದರು. ಆರು ಬಾರಿ ಶಾಸಕ, ಸಚಿವರಾಗಿ ರಮಾನಾಥ ರೈ ಅವರು ಜಿಲ್ಲೆಗೆ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದ ಸಂಸದರು ಅವರ ಕಾಲದಲ್ಲಿ ಅತಿ ಹೆಚ್ಚು ಕೋಮು ಗಲಭೆಯಾಗಿದ್ದು ಬಿಟ್ಟರೆ ಸಾಧನೆ ಶೂನ್ಯ ಎಂದು ಟೀಕಿಸಿದರು.
ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಮಾಜಿ ಶಾಸಕರಾದ ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ರಾಜ್ಯ ಬಿಜೆಪಿ ಸಹ ವಕ್ತಾರೆ ಸುಲೋಚನಾ ಜಿ.ಕೆ.ಭಟ್, ಬಂಟ್ವಾಳ ಕ್ಷೇತ್ರ ಬಿಜೆಪಿ ಮುಖಂಡ ರಾಜೇಶ್ ನಾೖಕ್ ಉಳಿಪಾಡಿಗುತ್ತು, ಜಿಲ್ಲಾ ಕೋಶಾಧಿಕಾರಿ ಸಂಜಯ್ ಪ್ರಭು, ಪ್ರಧಾನ ಕಾರ್ಯದರ್ಶಿ ಕ್ಯಾ| ಬೃಜೇಶ್ ಚೌಟ, ಜಿಲ್ಲಾ ಉಪಾಧ್ಯಕ್ಷ ಆನಂದ ಜಿ., ಬಿಜೆಪಿ ಹಿಂದುಳಿದ ವರ್ಗಗಳ ಪ್ರಧಾನ ಕಾರ್ಯದರ್ಶಿ ಕೃಷ್ಣಪ್ಪ ಪೂಜಾರಿ, ಜಿ.ಪಂ.ಸದಸ್ಯ ಎಂ. ತುಂಗಪ್ಪ ಬಂಗೇರ, ತಾ.ಪಂ. ಸದಸ್ಯ ರಮೇಶ್ ಕುಡ್ಮೇರು,ಸಂಗಬೆಟ್ಟು ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಸಂಜೀವ ಪೂಜಾರಿ ಪಿಲಿಂಗಾಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಮುನ್ನ ಭಾರತಮಾತೆ ಹಾಗೂ ಪಂ| ದೀನದಯಾಳ ಉಪಾಧ್ಯಾಯ ಅವರ ಚಿತ್ರಕ್ಕೆ ಸಚಿವ ಡಿ.ವಿ.ಸದಾನಂದ ಗೌಡ ಅವರು ಪುಷ್ಪಾರ್ಚನೆಗೈದರು.ಇದೇ ವೇಳೆ ಹತ್ಯೆಗೀಡಾದ ಶರತ್ ಮಡಿವಾಳ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವದಾಸ ಶೆಟ್ಟಿ ಸ್ವಾಗತಿಸಿದರು.ಸಂಗಬೆಟ್ಟು ಶಕ್ತಿ ಕೇಂದ್ರದ ಅಧ್ಯಕ್ಷ ರತ್ನಕುಮಾರ್ ಚೌಟ ವಂದಿಸಿದರು. ಬಂಟ್ವಾಳ ಕ್ಷೇತ್ರ ಬಿಜೆಪಿ ಮೋನಪ್ಪ ದೇವಸ್ಯ ಕಾರ್ಯಕ್ರಮ ನಿರೂಪಿಸಿದರು.
ಕರ್ನಾಟಕದ ಅಭಿವೃದ್ಧಿಗೆ ಬಿಜೆಪಿ ಪಕ್ಷ ಅಗತ್ಯ
ದೇಶದ ಅರ್ಥ ವ್ಯವಸ್ಥೆಯಲ್ಲಿ ಸಾಮಾನ್ಯ ಪ್ರಜೆಯೂ ಸೇರಿಕೊಂಡಾಗ ದೇಶದ ಅಭಿವೃದ್ಧಿ ಸಾಧ್ಯ ಎಂಬುವುದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮನಗಂಡು ಜನ್‌ಧನ್ ಯೋಜನೆ ಸಹಿತ ಅದ್ಭುತ ಯೋಜನೆಗಳನ್ನು ಜನತೆಗೆ ನೀಡಿದ್ದಾರೆ. ದೇಶದ ಹಿತಾಸಕ್ತಿ, ಅಭಿವೃದ್ಧಿಗೆ ಪೂರಕವಾದ ರಾಜನೀತಿ ನಡೆಯಬೇಕಾದರೆ ಪ್ರತೀ ಕಾರ್ಯಕರ್ತರು ವಿಸ್ತಾರಕರಾಗಿ ಕಾರ್ಯನಿರ್ವಹಿಸಬೇಕಾಗಿದೆ. ಕರ್ನಾಟಕದಲ್ಲಿ ಆರ್ಥಿಕ ಪರಿಸ್ಥಿತಿ ಮತ್ತು ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಕರ್ನಾಟಕದ ಅಭಿವೃದ್ಧಿಗೆ ಬಿಜೆಪಿ ಅಧಿಕಾರಕ್ಕೆ ಬರಬೇಕು .
– ಸದಾನಂದ ಗೌಡ , ಕೇಂದ್ರ ಸಚಿವ