Advertisement

BJP: ಅಶಿಸ್ತಿನ ವಿರುದ್ಧ ಹೈಕಮಾಂಡ್‌ ಕ್ರಮ ಕೈಗೊಳ್ಳಲಿ: ಡಿವಿಎಸ್‌

01:24 AM Nov 29, 2024 | Team Udayavani |

ಬೆಂಗಳೂರು: ಪಕ್ಷದ ಆಂತರಿಕ ವಿಚಾರಗಳನ್ನು ಬೀದಿಯಲ್ಲಿ ಚರ್ಚಿಸುವುದು ಅಶಿಸ್ತು. ಅಂತಹ ಅಶಿಸ್ತು ತೋರುವವರನ್ನು ರಾಜ್ಯ ಬಿಜೆಪಿಯ ಯಾವ ನಾಯಕರೂ ಸರಿಪಡಿಸುವ ಸ್ಥಿತಿಯಲ್ಲಿಲ್ಲ. ಹೀಗಾಗಿ ವರಿಷ್ಠರು ಮಧ್ಯಪ್ರವೇಶಿಸಬೇಕು. ಅಶಿಸ್ತು ತೋರುವವರು ಯಾರೇ ಇದ್ದರೂ ನಿರ್ದಾಕ್ಷಿಣ್ಯ ಕ್ರಮ ಜರಗಿಸಬೇಕು ಎಂದು ಮಾಜಿ ಸಿಎಂ ಸದಾನಂದ ಗೌಡ ಆಗ್ರಹಿಸಿದರು.

Advertisement

ಸುದ್ದಿಗಾರರ ಜತೆ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಹೊಸ ಹೊಸ ವಿಷಯಗಳನ್ನು ಬಂಗಾರದ ಬಟ್ಟಲಿನಲ್ಲಿ ಇಟ್ಟು ಕೊಡುತ್ತಿದೆ. ಆದರೆ ಅದನ್ನು ಬಳಸಿಕೊಳ್ಳುವುದರಲ್ಲಿ ವಿಪಕ್ಷವಾಗಿ ಬಿಜೆಪಿ ಸೋಲುತ್ತಿದೆ. ಕಾಂಗ್ರೆಸ್‌ ಸರಕಾರದ ದುರಾಡಳಿತ, ದೌರ್ಬಲ್ಯಗಳ ಬಗ್ಗೆ ಜನ ಮಾತ ನಾಡುವಂತೆ ನಾವು ಮಾಡಬೇಕಿತ್ತು. ಆದರೆ ಜನರೇ ನಮ್ಮಲ್ಲಿನ ಭಿನ್ನಾಭಿ ಪ್ರಾಯ, ದೌರ್ಬಲ್ಯಗಳ ಕುರಿತು ಚರ್ಚಿಸುವಂತಾಗಿದೆ ಎಂದು ಶಾಸಕ ಯತ್ನಾಳ್‌ ಹಾಗೂ ವಿಜ ಯೇಂದ್ರ ಬಣ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ರಾಜ್ಯ ಬಿಜೆಪಿಯಲ್ಲಿನ ಪರಿಸ್ಥಿತಿ ಬಗ್ಗೆ ವರಿಷ್ಠರಿಗೆ 2 ಪತ್ರ ಬರೆದಿದ್ದೇನೆ. ಆದರೂ ಪ್ರಯೋಜನ ಆಗಿಲ್ಲ. ಇಷ್ಟು ದಿನ ಬೇರೆ ರಾಜ್ಯಗಳ ಚುನಾವಣೆಗಳಲ್ಲಿ ವರಿಷ್ಠರು ತಲ್ಲೀನರಾಗಿದ್ದರು. ಇನ್ನು ಮುಂದಾದರೂ ರಾಜ್ಯ ಬಿಜೆಪಿಯ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಶೀಘ್ರ ಬಗೆಹರಿಸಬೇಕು. ಮುಂದಿನ ಚುನಾವಣೆ ವೇಳೆಗೆ ಸರಿಮಾಡುತ್ತೇವೆ ಎಂದುಕೊಂಡರೆ ಪರಿಸ್ಥಿತಿ ಕೈ ಮೀರಿ ಹೋಗಬಹುದು ಎಂದೂ ಎಚ್ಚರಿಸಿದರು.

ಹಿಂದೆಯೂ ಬಣ ರಾಜಕೀಯ ಇತ್ತು. ಆದರೆ ಬೀದಿಗೆ ಬರುತ್ತಿರಲಿಲ್ಲ. ಅಶಿಸ್ತಿನವರು ಪಕ್ಷದಲ್ಲಿರಲು ಯೋಗ್ಯ ರಲ್ಲ. ಮರದಲ್ಲಿರುವ ಒಂದು ಕಾಗೆಗೆ ಗುಂಡು ಹೊಡೆದರೆ ಉಳಿದ ಕಾಗೆ ಗಳು ಹಾರಿ ಹೋಗುತ್ತವೆ. ತಾನಾಗಿಯೇ ಎಲ್ಲವೂ ಸರಿ ಹೋಗುತ್ತದೆ ಎಂದರು.

ಕೋರ್‌ ಕಮಿಟಿಯಲ್ಲಿ ಚರ್ಚೆ
ಡಿ. 3ರಂದು ನಡೆಯುವ ಕೋರ್‌ ಕಮಿಟಿ ಸಭೆಯಲ್ಲೂ ಚರ್ಚಿಸಿ ಒಂದು ವರದಿಯನ್ನಾದರೂ ವರಿಷ್ಠರಿಗೆ ತಲುಪಿಸುವ ಪ್ರಯತ್ನ ಮಾಡುತ್ತೇವೆ. ಇಲ್ಲದಿದ್ದರೆ ನಾವೇ ದಿಲ್ಲಿಗೆ ಹೋಗುತ್ತೇವೆ ಎಂದು ಡಿವಿಎಸ್‌ ಹೇಳಿದರು.

Advertisement

ಎರೆಹುಳು ನಾಗರಹಾವು ಆಗಬಾರದು
ಪಕ್ಷ ವಿರೋಧಿ ಹೇಳಿಕೆ ಕೊಡುವುದೇ ನನ್ನ ರಾಜಕೀಯ ಶಕ್ತಿ ಎನ್ನುವುದು ಬಿಜೆಪಿಯ ಹಲವು ರಾಜಕಾರಣಿಗಳಿಗೆ ಬಂದಿದೆ. ಎರೆಹುಳ ಎರೆಹುಳ ಆಗಿಯೇ ಮಣ್ಣಿನ ಸಂಪತ್ತನ್ನು ಹೆಚ್ಚು ಮಾಡಬೇಕೇ ಹೊರತು ಎರೆಹುಳ ನಾಗರಹಾವಾಗಲು ಪ್ರಯತ್ನ ಮಾಡಬಾರದು ಎಂದು ಸದಾನಂದ ಗೌಡ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next