Advertisement

ಪರಿಷತ್ ಚುನಾವಣೆಯಲ್ಲಿ ಬಿಜೆಪಿ 15 ಸ್ಥಾನ ಗೆಲ್ಲಲಿದೆ: ಜಗದೀಶ್ ಶೆಟ್ಟರ್

02:05 PM Nov 19, 2021 | Team Udayavani |

ತುಮಕೂರು: ವಿಧಾನಪರಿಷತ್ ಸ್ಥಳೀಯ ಸಂಸ್ಥೆಗಳಿಗೆ ನಡೆಯುವ ಚುನಾವಣೆಯಲ್ಲಿ 25 ಸ್ಥಾನಗಳ ಪೈಕಿ ಹದಿನೈದು ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿ ಗಳು ಗೆಲುವು ಸಾಧಿಸಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದರು.

Advertisement

ಬಿಜೆಪಿ ಜನ ಸ್ವರಾಜ್ ಸಮಾವೇಶಕ್ಕೂ ಮುನ್ನ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ 45ಸಾವಿರಕ್ಕೂ ಹೆಚ್ಚು ಗ್ರಾಪಂ ಸದಸ್ಯರು ಬಿಜೆಪಿ ಬೆಂಬಲಿತರಿದ್ದು ಪರಿಷತ್ ಚುನಾವಣೆಯಲ್ಲಿ ಅತೀ ಹೆಚ್ಚು ಸ್ಥಾನ ಗೆಲ್ಲುವುದರೊಂದಿಗೆ ಪರಿಷತ್ ಬಹುಮತ ಸಾಧಿಸಲಿದೆ ಎಂದರು.

ಗ್ರಾಮ ಪಂಚಾಯಿತಿಯಿಂದ ದೆಹಲಿಯವರೆಗೆ ಬಿಜೆಪಿ ಬೆಳವಣಿಗೆ ದಾಖಲೆಯಾಗಿದ್ದು ಅತೀ ಹೆಚ್ಚು ಸಂಸದರು, ಶಾಸಕರು ಹಾಗೂ 19 ಕೋಟಿ ಸದಸ್ಯರನ್ನು ಹೊಂದುವ ಮೂಲಕ ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷವೆನಿಸಿದೆ ಎಂದರು.

ಇದನ್ನೂ ಓದಿ:ಸರ್ವಾಧಿಕಾರಿ ಎಷ್ಟೇ ಶಕ್ತಿಶಾಲಿಯಾಗಿರಲಿ, ಜನಶಕ್ತಿಯ ಎದುರು ಆತ ಮಣಿಯಲೇಬೇಕು: ಸಿದ್ದರಾಮಯ್ಯ

ತುಮಕೂರು ಜಿಲ್ಲೆಯಲ್ಲಿ ಬಿಜೆಪಿ ಪಕ್ಷದ ಐವರು ಶಾಸಕರು, ಸಂಸದರು, ಕೇಂದ್ರ ಸಚಿವರು ಸೇರಿದಂತೆ ಮೂವರು ಸಚಿವರು, ಇಬ್ಬರು ವಿಧಾನ ಪರಿಷತ್ ಸದಸ್ಯ ರಿದ್ದು ಕಳೆದ ಬಾರಿ ಪಕ್ಷದ ಒಬ್ಬ ರೇ ಶಾಸಕರಿದ್ದರೂ ಅಭ್ಯರ್ಥಿಯಾಗಿದ್ದ ಹುಲಿನಾಯ್ಕರ್ ಅವರು 1700 ಮತಗಳನ್ನು ಪಡೆದಿದ್ದರು. ಈ ಬಾರಿ ಪಕ್ಷದ ಅಭ್ಯರ್ಥಿ ಗೆಲವು ಸಾಧಿಸುವುದು ನಿಶ್ಚಿತವೆನೆಸಿದ್ದು ಇಂದು ಅಥವಾ ನಾಳೆಯೊಳಗೆ ಅಭ್ಯರ್ಥಿ ಪ್ರಕಟಿಸಲಾಗುವುದು. ಈಗಾಗಲೇ ಚುನಾವಣೆಗೆ ಅಗತ್ಯ ತಯಾರಿ ನಡೆಸಲಾಗಿದೆ ಎಂದರು.

Advertisement

ಕಾಂಗ್ರೆಸ್ ದೇಶಾದ್ಯಂತ ಅವನತಿ ಹಾದಿ ಹಿಡಿದಿದ್ದು, ಕರ್ನಾಟಕ ದಲ್ಲಿ ಡಿ. ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರ ನಡುವಿನ ಒಳಜಗಳವೇ ಆ ಪಕ್ಷವನ್ನು ನಿರ್ಮೂಲನೆ ಮಾಡಲಿದೆ. ಬಿಟ್ ಕಾಯಿನ್ ವಿಚಾರವಾಗಿ ಯಾವುದೇ ಪುರಾವೆಯಿಲ್ಲದೆ ಬಿಜೆಪಿ ಸರಕಾರ ವನ್ನು ದೂಷಿಸುವ ಕೆಲಸ ಮಾಡುತ್ತಿದೆ ಎಂದು ತಿರುಗೇಟು ನೀಡಿದರು.

ಅಕಾಲಿಕ ಮಳೆಯಿಂದಾಗಿ ರಾಜ್ಯ ದಲ್ಲಾಗಿರುವ ಹಾನಿಯ ಬಗ್ಗೆಯೂ ಸರಕಾರಕ್ಕೆ ಕಾಳಜಿಯಿದ್ದು, ಇಂದು ಕಂದಾಯ ಸಚಿವರು ಡಿಸಿ ಸಿಇಓ ಗಳ ಜೊತೆಗೆ ಸಭೆ ನಡೆಸುವರು. ಉಸ್ತುವಾರಿ ಸಚಿವರು ಆಯಾ ಜಿಲ್ಲೆಗಳಿಗೆ ತೆರಳಿ ಪರಾಮರ್ಶೆ ನಡೆಸುವರು. ಅಗತ್ಯ ಪರಿಹಾರ ಒದಗಿಸಲು ಸರಕಾರ ಬದ್ದವಿದೆ ಎಂದರು.

ಮೂರು ಕೃಷಿ ಕಾಯ್ದೆಗಳನ್ನು ಪ್ರಧಾನಿ ಹಿಂಪಡೆದಿರುವ ಕುರಿತು ನನಗೆ ಮಾಹಿತಿಯಿಲ್ಲ. ಮಾಹಿತಿ ಪಡೆದು ಪ್ರತಿಕ್ರಿಯಿಸುವೆ ಎಂದರು.

ಮುಂದಿನ ಸಿಎಂ ಆಗುವ ಅದೃಷ್ಟ ನಿಮ್ಮದಾಗಲಿದೆಯಾ ಎಂಬ ಪ್ರಶ್ನೆಗೆ ಕಾಂಗ್ರೆಸ್ಗಂತೂ ಆ ಅದೃಷ್ಟ ಇಲ್ಲ ಎಂದು ಮಾರ್ಮಿಕವಾಗಿ ಪ್ರತಿಕ್ರಿಯಿಸಿ ರಾಜ್ಯದಲ್ಲಿ ಸದ್ಯಕ್ಕೆ ಸಿಎಂ ಹುದ್ದೆ ಖಾಲಿ ಇಲ್ಲ. ಯಾರ ನೇತೃತ್ವದಲ್ಲಿ ಚುನಾವಣೆಗೆ ಹೋಗಬೇಕು ಎಂಬುದನ್ನು ಸಹ ಈಗಲೇ ಹೇಳಲು ಸಾಧ್ಯವಿಲ್ಲ ಎಂದು ನುಡಿದರು.

ಸುದ್ದಿಗೋಷ್ಠಿಯಲ್ಲಿ ಸಚಿವರಾದ ಜೆ. ಸಿ. ಮಾಧುಸ್ವಾಮಿ, ಬೈರತಿ ಬಸವರಾಜ್, ಗೋಪಾಲಯ್ಯಾ, ಬಿ. ಸಿ. ನಾಗೇಶ್, ರಾಜ್ಯ ಉಪಾಧ್ಯಕ್ಷ ಬಿ. ವೈ. ವಿಜಯೇಂದ್ರ, ಸಂಸದ ಜಿ. ಎಸ್. ಬಸವರಾಜ್, ಶಾಸಕರಾದ ಜಿ. ಬಿ. ಜ್ಯೋತಿ ಗಣೇಶ್, ಮಸಾಲೆ ಜಯರಾಂ, ಸಿ. ಎಂ. ರಾಜೇಶ್ ಗೌಡ, ಎಂಎಲ್ಸಿಗಳಾದ ತುಳಸಿ ಮುನಿರಾಜು ಗೌಡ, ಮಹೇಶ್ ತೆಂಗಿನಕಾಯಿ, ವೈ. ಎ.  ನಾರಾಯಣ ಸ್ವಾಮಿ, ಚಿದಾನಂದ ಗೌಡ, ಮಾಜಿ ಸಚಿವ ಎಸ್. ಶಿವಣ್ಣ, ಮಾಜಿ ಶಾಸಕ ಕೆ. ಎಸ್ ಕಿರಣ್ ಕುಮಾರ್, ರಾಜ ಉಪಾಧ್ಯಕ್ಷ ಎಂ. ಬಿ ನಂದೀಶ್, ಹೆಬ್ಬಾಕರವಿ, ಬಿ. ಕೆ. ಮಂಜುನಾಥ್, ಬಾವಿ ಕಟ್ಟೆ ನಾಗಣ್ಣ ಮತ್ತಿತರ ಮುಖಂಡರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next