ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಆಯ್ಕೆ ಯಾವಾಗಲೂ ಎರಡರಲ್ಲಿ ಒಂದು,ಒಂದೋ ಅವರ ಆಪ್ತ ಬಣದಲ್ಲಿರುವವರು ರೌಡಿ ಹಿನ್ನೆಲೆ ಹೊಂದಿರಬೇಕು,ಇಲ್ಲವಾದರೆ ತೆರಿಗೆ ಕಳ್ಳರಾಗಿರಬೇಕು ಎಂದು ಗುರುವಾರ ಬಿಜೆಪಿ ಸರಣಿ ಟ್ವೀಟ್ ಗಳನ್ನು ಮಾಡಿದೆ.
ಉದಾಹರಣೆಗೆ ಯುವ ಕಾಂಗ್ರೆಸ್ ಭಾವೀ ಅಧ್ಯಕ್ಷ ನಲಪಾಡ್, ಶಾಸಕರ ಕೊಲೆ ಸಂಚಿನ ಆರೋಪಿಗಳು, ಪರಿಷತ್ ಅಭ್ಯರ್ಥಿ ಕೆಜಿಎಫ್ ಬಾಬು ಅವರಂತವರು, ಇತ್ಯಾದಿ ಎಂದು ಟ್ವೀಟ್ ಮಾಡಿದೆ.
ಬಿಜೆಪಿ ಮಾಡಿರುವ ಟ್ವೀಟ್ ಗಳು ಹೀಗಿವೆ
ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಅವರ ಆಸ್ತಿ ಒಮ್ಮೆಲೆ ಏರಿಕೆ ಕಂಡಿತು. ಆಸ್ತಿಯ ಮೂಲ ತೋರಿಸದೆ ಐಟಿ ದಾಳಿ ಎದುರಿಸಿ ತಿಹಾರ್ ಜೈಲು ವಾಸ ಅನುಭವಿಸಿದರು. ಈಗ ಪರಿಷತ್ತಿಗೆ ಮತ್ತೊಬ್ಬ ಕುಬೇರ ಕೆಜಿಎಫ್ ಬಾಬುವನ್ನು ಜನರ ಮುಂದೆ ತಂದು ನಿಲ್ಲಿಸಿದ್ದಾರೆ. ಡಿಕೆಶಿ ಅವರೇ, ನಿಮ್ಮ ಅಭ್ಯರ್ಥಿ ಕೂಡಾ ಖಾಲಿ ಜಾಗಕ್ಕೆ ಬೇಲಿ ಹಾಕಿ ಅಷ್ಟೊಂದು ಸಂಪಾದಿಸಿದ್ದೇ?
ಸಭ್ಯರ ಮನೆ ಎಂದು ಪರಿಗಣಿಸಲ್ಪಡುವ ಪರಿಷತ್ ಪ್ರವೇಶಿಸಲು ತವಕದಿಂದಿರುವ ಪೊಲೀಸ್ ರೌಡಿಶೀಟರ್ ಕೆಜಿಎಫ್ ಬಾಬು ಅವರು ತಮ್ಮ ಆಸ್ತಿಯ ಅನಾರೋಗ್ಯಕರ ಪ್ರದರ್ಶನ ಮಾಡುವುದಕ್ಕಿಂತ ಆಸ್ತಿಯ ಮೂಲವನ್ನು ತೋರುವುದು ಸಕ್ರಮ ವಿಧಾನ. ಡಿಕೆಶಿ ನಿರ್ದೇಶಿತ ಸಿರಿವಂತ ಅಭ್ಯರ್ಥಿಗೆ ತಮ್ಮ ಆಸ್ತಿಯ ಮೂಲ ಹಾಗೂ ಗಳಿಕೆ ವಿಧಾನ ತಿಳಿಸಲು ಸಾಧ್ಯವೇ?
ಕೆಪಿಸಿಸಿ ಅಧ್ಯಕ್ಷರ ಪರಿಷತ್ ಅಭ್ಯರ್ಥಿ ಕೆಜಿಎಫ್ ಬಾಬು ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ. ಇದು ಶಿಕ್ಷಾರ್ಹ ಅಪರಾಧ. ಆಯೋಗಕ್ಕೆ 1734 ಕೋಟಿ ಹೊಂದಿದ್ದೇನೆ ಎಂದು ಮಾಹಿತಿ ನೀಡಿರುವ ಯೂಸುಫ್ ಅವರು ಸಾರ್ವಜನಿಕವಾಗಿ ಬೇರೆ ಬೇರೆ ಲೆಕ್ಕ ಕೊಡುತ್ತಿದ್ದಾರೆ. ನಿಮ್ಮ ಅಭ್ಯರ್ಥಿಯ ಆಸ್ತಿ ಮೌಲ್ಯ 4000 ಕೋಟಿಯೋ 7000 ಸಾವಿರ ಕೋಟಿಯೋ? ಎಂದು ಪ್ರಶ್ನಿಸಿದೆ.