Advertisement

BJP ಕರ್ನಾಟಕ ‘ಭ್ರಷ್ಟ ರಾಜ್ಯ’ ಎಂದು ಬಿಂಬಿಸಲು ಮುಂದಾಗಿದೆ: ನಿರ್ಮಲಾ ವಿರುದ್ಧ ಸಿಎಂ ಕಿಡಿ

06:22 PM Jul 29, 2024 | Team Udayavani |

ಮೈಸೂರು: ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ‘ಅನ್ಯಾಯ’ ಎಸಗಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ನಮ್ಮ ವಿರುದ್ಧ “ಸುಳ್ಳು” ಆರೋಪಗಳನ್ನು ಮಾಡುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಸೋಮವಾರ ಕಿಡಿ ಕಾರಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಅನುದಾನ ಹಂಚಿಕೆ ಕುರಿತು ಸಾಕಷ್ಟು ತಪ್ಪು ಮಾಹಿತಿಗಳನ್ನು ಹರಡಲಾಗುತ್ತಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿಕೆ ನೀಡಿರುವ ಕುರಿತು ಪ್ರತಿಕ್ರಿಯಿಸಿದರು. ‘ಕಾಂಗ್ರೆಸ್ ಆಡಳಿತವಿರುವ ಕರ್ನಾಟಕವನ್ನು ‘ಭ್ರಷ್ಟ ರಾಜ್ಯ’ ಎಂದು ಬಣ್ಣಿಸಲು ಬಿಜೆಪಿ ಯತ್ನಿಸುತ್ತಿದೆ’ ಎಂದು ಆರೋಪಿಸಿದರು. ಕರ್ನಾಟಕ ಭ್ರಷ್ಟವಾಗಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿದ್ದೇವೆ, ನಮ್ಮ ಸರ್ಕಾರದ ಅಡಿಯಲ್ಲಿ ಭ್ರಷ್ಟಾಚಾರ ಕಡಿಮೆಯಾಗಿದೆ’ ಎಂದರು.

“ಬಜೆಟ್ ಪೂರ್ವ ಸಭೆ ಕರೆಯಲಾಗಿತ್ತು, ಅಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ ನೀಡುವುದಾಗಿ ಹೇಳಿದ್ದರು, ಬಜೆಟ್‌ನಲ್ಲಿ ಇದೆಯೇ? ಅದನ್ನು ನೀಡಿಲ್ಲ. ಹದಿನೈದನೇ ಹಣಕಾಸು ಆಯೋಗ ತನ್ನ ವರದಿಯಲ್ಲಿ 5,495 ಕೋಟಿ ರೂ.ಗಳನ್ನು ವಿಶೇಷ ಅನುದಾನಕ್ಕೆ ಶಿಫಾರಸು ಮಾಡಿದೆ, ಇದೆಯೇ? ಬೆಂಗಳೂರಿನಲ್ಲಿ ಪೆರಿಫೆರಲ್ ರಿಂಗ್ ರಸ್ತೆಗೆ 3,000 ಕೋಟಿ ನೀಡಲಾಗುವುದು ಎಂದು ಹೇಳಲಾಗಿತ್ತು. ಜಲಮೂಲಗಳ ಅಭಿವೃದ್ಧಿಗೆ 3,000 ಕೋಟಿ ನೀಡುವುದಾಗಿ ಭರವಸೆ ನೀಡಲಾಗಿತ್ತು, ನೀಡಲಾಗಿದೆಯೇ? ಎಂದು ಪ್ರಶ್ನೆಗಳ ಸುರಿಮಳೆಗೈದರು.

‘ಅನುದಾನದ ವಿಚಾರದಲ್ಲಿ ಅನ್ಯಾಯವಲ್ಲವೇ? ಆಂಧ್ರ ಮತ್ತು ಬಿಹಾರಕ್ಕೆ ಮಾತ್ರ ನೀಡಲಾಗಿದೆ, ಕರ್ನಾಟಕಕ್ಕೆ ಏನು ನೀಡಿದ್ದಾರೆ? ಕೇಂದ್ರ ಸಚಿವರಾದ ಎಚ್. ಡಿ. ಕುಮಾರಸ್ವಾಮಿ ಮತ್ತು ನಿರ್ಮಲಾ ಸೀತಾರಾಮನ್ ಅವರು ಕನಿಷ್ಠ ಕರ್ನಾಟಕಕ್ಕೆ ಅದರ ಪಾಲು ಸಿಗುವಂತೆ ಮಾಡಲು ಪ್ರಯತ್ನಿಸುತ್ತೇವೆ ಎಂದು ಹೇಳಬಹುದಿತ್ತಲ್ಲ’ ಎಂದರು.

“ಕುಮಾರಸ್ವಾಮಿ ಅವರ ಮಂಡ್ಯ ಕ್ಷೇತ್ರಕ್ಕೆ ಏನಾದರೂ ಹೊಸ ಉದ್ಯಮ ಬಂದಿದೆಯೇ? ರಾಜ್ಯಕ್ಕೆ ಕೈಗಾರಿಕಾ ಕಾರಿಡಾರ್ ಬಂದಿದೆಯೇ? ಮೇಕೆದಾಟು ಯೋಜನೆಗೆ ಇಲ್ಲ, ನಾವು ಬಯಸಿದ ಅನುದಾನ ಬಂದಿಲ್ಲ, ನಾವು ರಾಯಚೂರಿನಲ್ಲಿ ಏಮ್ಸ್, ಹಾಸನ ಅಥವಾ ಮೈಸೂರಿಗೆ IITಗಾಗಿ ಬೇಡಿಕೆ ಇತ್ತು, ಬಂದಿದೆಯೇ? ಯಾವುದೇ ಅನ್ಯಾಯ ಆಗಿಲ್ಲ ಎಂದು ಹೇಳಲು ನಿರ್ಮಲಾ ಸೀತಾರಾಮನ್ ಏನು ಕೊಟ್ಟಿದ್ದಾರೆ ಎಂದು ಹೇಳಲಿ’ ಎಂದು ತಿರುಗೇಟು ನೀಡಿದರು.

Advertisement

ನಿರ್ಮಲಾ ಸೀತಾರಾಮನ್ ಅವರು ಕರ್ನಾಟಕಕ್ಕೆ ಬಂದಾಗಲೆಲ್ಲಾ ಸುಳ್ಳು ಹೇಳುತ್ತಾರೆ. “ಅವರು ಹಿಂದೆಯೂ ಸುಳ್ಳು ಹೇಳಿದ್ದಾರೆ, ಈಗಲೂ ಅವಳು ಸುಳ್ಳು ಹೇಳುತ್ತಿದ್ದಾರೆ. ರಾಜ್ಯಕ್ಕೆ ಅನುದಾನ ನೀಡಿರುವುದಾಗಿ ಹೇಳಿಕೊಳ್ಳುತ್ತಾರೆ, ರಾಜ್ಯಸಭಾ ಸದಸ್ಯೆಯಾಗಿ ರಾಜ್ಯವನ್ನು ಪ್ರತಿನಿಧಿಸುತ್ತಿದ್ದರೂ ಹದಿನೈದನೇ ಹಣಕಾಸು ಆಯೋಗದಲ್ಲಿ ಅತಿ ಹೆಚ್ಚು ಅನ್ಯಾಯವನ್ನು ಎದುರಿಸಿದ ರಾಜ್ಯ ಕರ್ನಾಟಕ ಎಂದು ನಿಮಗೆ ತಿಳಿದಿದೆಯೇ?’ ಎಂದು ಪ್ರಶ್ನಿಸಿದರು.

ತೆರಿಗೆ ಸಂಗ್ರಹದಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದರೆ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ನಾವು ನೀಡದ ಕೊಡುಗೆ ಏನು? ಎಂದು ಸಿಎಂ ಪ್ರಶ್ನಿಸಿದರು. ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯದ ವಿರುದ್ಧ ಪ್ರತಿಭಟಿಸಿ ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ NITI ಆಯೋಗ್ ಸಭೆಯನ್ನು ಬಹಿಷ್ಕರಿಸಿದ್ದೆ ಎಂದರು.

“ಪಕ್ಷ ಮತ್ತು ಸರಕಾರದದ ಬಗ್ಗೆ ಚರ್ಚಿಸಲುಹೈಕಮಾಂಡ್ ಕರೆದಿರುವ ಕಾರಣ ನಾನು ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ದೆಹಲಿಗೆ ಪ್ರಯಾಣಿಸುತ್ತಿದ್ದೇವೆ ಎಂದ ಸಿಎಂ ಹೆಚ್ಚಿನ ವಿವರ ನೀಡಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next