ಬೆಂಗಳೂರು: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ನ. 2ರಿಂದ ಬಿಜೆಪಿ ಹಮ್ಮಿಕೊಂಡಿರುವ ನವ ಕರ್ನಾಟಕ ನಿರ್ಮಾಣ ಪರಿವರ್ತನಾ ರಥಯಾತ್ರೆಯಲ್ಲಿ ಮುಂದಿನ ಕರ್ನಾಟಕ ಹೇಗಿರಬೇಕು ಎಂಬ ಬಗ್ಗೆ ಜನರಿಂದ ಅಭಿಪ್ರಾಯ ಪಡೆಯುವುದರ ಜತೆಗೆ ರಾಜ್ಯ ಸರ್ಕಾರದ ಭ್ರಷ್ಟಾಚಾರ ವಿರೋಧಿ ಯಾತ್ರೆಯಾಗಿಯೂ ಪರಿಗಣಿಸಲು ತೀರ್ಮಾನಿಸಲಾಗಿದೆ.
ಸ್ಥಿರ ಮತ್ತು ಭ್ರಷ್ಟಾಚಾರ ರಹಿತ ನವ ಕರ್ನಾಟಕ ಹೇಗಿರಬೇಕು ಎಂಬ ಬಗ್ಗೆ ಜನರಿಂದ ಅಭಿಪ್ರಾಯ ಪಡೆಯುವುದರೊಂದಿಗೆ ರಾಜ್ಯ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ, ಆಡಳಿತ ವೈಫಲ್ಯತೆ, ಕಾನೂನು ಸುವ್ಯವಸ್ಥೆ ಸಮಸ್ಯೆ, ರೈತರ ಸಮಸ್ಯೆ ಮತ್ತು ಆತ್ಮಹತ್ಯೆ, ಧಾರ್ಮಿಕ ಭಯೋತ್ಪಾದನೆ ಕುರಿತಾದ ರಾಜ್ಯ ಸರ್ಕಾರದ ಮೃದು ಧೋರಣೆಗಳನ್ನೇ ಸರ್ಕಾರದ ವಿರುದ್ಧ ಅಸ್ತ್ರವಾಗಿ ಬಳಸಿಕೊಳ್ಳಲು ನಿರ್ಧಾರ ಕೈಗೊಳ್ಳಲಾಗಿದೆ.
ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್ ಅವರ ಸಮ್ಮುಖದಲ್ಲಿ ಶುಕ್ರವಾರ ನಡೆದ ಕೋರ್ ಕಮಿಟಿ ಸಭೆಯಲ್ಲಿ ಯಾತ್ರೆ ಕುರಿತು ಸುದೀರ್ಘವಾಗಿ ಚರ್ಚಿಸಲಾಗಿದ್ದು, ಈಗಾಗಲೇ ಸಿದ್ಧಪಡಿಸಿರುವ ಮಾರ್ಗನಕ್ಷೆ ಮತ್ತು ವೇಳಾಪಟ್ಟಿಗೆ ಒಪ್ಪಿಗೆ ನೀಡಲಾಗಿದೆ.
ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರರಾವ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆಯಲಿರುವ ನವಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆಯು ಕೇವಲ ನವ ಕರ್ನಾಟಕ ನಿರ್ಮಾಣ ಕುರಿತು ಸೀಮಿತವಾಗಿರದೆ ರಾಜ್ಯ ಸರ್ಕಾರದ ಭ್ರಷ್ಟಾಚಾರ ವಿರೋಧಿ ಯಾತ್ರೆಯೂ ಆಗಿರಲಿದೆ ಎಂದರು.
ಕಾಂಗ್ರೆಸ್ ಮುಕ್ತ ಕರ್ನಾಟಕ ನಿಟ್ಟಿನಲ್ಲಿ ಯಾತ್ರೆಯನ್ನು ಯಾವ ರೀತಿ ಯಶಸ್ವಿಗೊಳಿಸಬೇಕು ಎಂಬ ಬಗ್ಗೆ ಕೋರ್ ಕಮಿಟಿ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಲಾಗಿದೆ. ಯಾತ್ರೆ ಹಳ್ಳಿ ಮಟ್ಟ ಮತ್ತು ಬೂತ್ ಮಟ್ಟಕ್ಕೆ ಹೇಗೆ ತಲುಪಿಸಬೇಕು ಎಂಬ ಬಗ್ಗೆಯೂ ಚರ್ಚಿಸಲಾಗಿದೆ ಎಂದರು.
ಸಮಿತಿಗಳ ಸಭೆ:
ಕೋರ್ ಕಮಿಟಿ ಸಭೆ ಬಳಿಕ ಬೂತ್ ಸಮಿತಿ, ಸಾಂಪ್ರದಾಯಿಕ ಪ್ರಚಾರ ಸಮಿತಿ, ಅಸಾಂಪ್ರದಾಯಿಕ ಪ್ರಚಾರ ಸಮಿತಿ ಹಾಗೂ ಹಣಕಾಸು ಸಮಿತಿಯ ಸಭೆಗಳನ್ನು ನಡೆಸಲಾಗಿದ್ದು, ಯಾತ್ರೆಯಲ್ಲಿ ಯಾವ ರೀತಿ ಈ ಸಮಿತಿಗಳು ಸಮನ್ವಯತೆಯಿಂದ ಕೆಲಸ ಮಾಡಬೇಕು ಎಂಬ ಬಗ್ಗೆ ಮುರಳೀಧರರಾವ್ ಮತ್ತು ಯಡಿಯೂರಪ್ಪ ಅವರು ಸದಸ್ಯರಿಗೆ ಸೂಚನೆಗಳನ್ನು ನೀಡಿದ್ದಾರೆ.