ಬೆಂಗಳೂರು: ತುಳುವರು ಎಂದರೆ ಸಾಂಸ್ಕೃತಿಕ, ಸಾಹಸ, ಧಾರ್ಮಿಕ ಶ್ರದ್ಧೆಯ ಸಂಕೇತ. ಮುಂದಿನ ವರ್ಷವೂ ಯಶಸ್ವಿಯಾಗಿ ಬೆಂಗಳೂರು ಕಂಬಳ ನಡೆಯಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾರೈಸಿದರು.
ಬೆಂಗಳೂರು ಕಂಬಳ ಸಮಿತಿಯು ಅರಮನೆ ಮೈದಾನದಲ್ಲಿ ಭಾನುವಾರ ರಾತ್ರಿ ಹಮ್ಮಿಕೊಂಡಿದ್ದ “ಬೆಂಗಳೂರು ಕಂಬಳ, ನಮ್ಮ ಕಂಬಳ’ದ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆಯಲ್ಲಿ ಮಾತನಾಡಿದರು.
ಮೊಟ್ಟ ಮೊದಲ ಬಾರಿಗೆ ಬೆಂಗಳೂರು ನಗರದಲ್ಲಿ ಕಂಬಳ ಆಚರಿಸುವ ಮೂಲಕ ಇಡೀ ಬೆಂಗಳೂರು ಜನತೆಗೆ ಹಬ್ಬದ ವಾತಾವರಣ ನಿರ್ಮಿಸಿಕೊಡಲಾಗಿದೆ. ಈ ಮೂಲಕ ರಾಜಧಾನಿಗೆ ರಾಜ ಗೌರವ ಸಮರ್ಪಣೆ ಆಗಿದೆ ಎಂದು ತಿಳಿಸಿದರು.
ಕಂಬಳಕ್ಕೆ 35 ಎಕರೆ ಜಾಗ ಮೀಸಲಿಡಬೇಕು: ಬೆಂಗಳೂರು ಕಂಬಳ ಸಮಿತಿ ಅಧ್ಯಕ್ಷ ಕೆ.ಎಸ್. ಅಶೋಕ್ ರೈ ಮಾತನಾಡಿ, ಮುಂದಿನ ದಿನಗಳಲ್ಲಿ ಐಪಿಎಲ್ ಕ್ರಿಕೆಟ್ ಮಾದರಿಯಲ್ಲಿ ಕಂಬಳ ನಡೆಸುವ ವ್ಯವಸ್ಥೆ ಆಗಲಿದೆ. ಸರ್ಕಾರ ಕಂಬಳಕ್ಕೆ ಸಹಕಾರ ನೀಡುವ ನಿಟ್ಟಿನಲ್ಲಿ ಕರ್ನಾಟಕದಲ್ಲಿ 35 ಎಕರೆ ಜಾಗ ಕಂಬಳಕ್ಕಾಗಿ ನಿಗದಿಪಡಿಸಬೇಕು. ಅಲ್ಲಿ ಪ್ರತಿ ವರ್ಷ ಕಂಬಳ ಆಗಬೇಕು. ಕನ್ನಡ ಸಂಸ್ಕೃತಿ ಇಲಾಖೆಯ ಮೂಲಕ ಬೆಂಗಳೂರಿನಲ್ಲಿ 40 ಎಕರೆ ಕಂಬಳಕ್ಕಾಗಿ ಜಾಗ ಮೀಸಲಿಡುವಂತಾಗಲಿ ಎಂದು ತಿಳಿಸಿದರು.
ಕಂಬಳ ಪ್ರೀಮಿಯಮ್ ಲೀಗ್: ಕಂಬಳ ಸಮಿತಿ ಗೌರವಾಧ್ಯಕ್ಷ ಕೆ.ಪ್ರಕಾಶ್ ಶೆಟ್ಟಿ ಮಾತನಾಡಿ, ಕರಾವಳಿಯಲ್ಲಿರುವ ಕಂಬಳನ್ನು ಬೆಂಗಳೂರಿನಲ್ಲಿ ಆಯೋಜಿಸಿರುವುದು ನಮ್ಮ ಸಾಧನೆ. 65 ಸಂಘಟನೆಗಳು ಜಾತ್ಯತೀತವಾಗಿ ಒಟ್ಟಾಗಿ ಕಂಬಳ ಆಯೋಜಿಸಿದ್ದೇವೆ ಎಂದರು.
ಪ್ರತಿ ವರ್ಷವೂ ಕಂಬಳ ನಡೆಯಲಿ: ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ಮಾತ ನಾಡಿ, ನನ್ನ ಕ್ಷೇತ್ರದಲ್ಲಿ ಕಂಬಳ ನಡೆಯುತ್ತಿರುವುದು ನನಗೆ ವಿಶೇಷ. ಪ್ರತಿ ವರ್ಷವೂ ಇಲ್ಲಿ ಕಾರ್ಯಕ್ರಮ ನಡೆಯಲಿ ಎಂದು ತಿಳಿಸಿದರು. ಮಾಜಿ ಸಿಎಂ ಯಡಿಯೂರಪ್ಪ, ಮಾಜಿ ಸಚಿವ ಸಿ.ಟಿ.ರವಿ, ಶಾಸಕ ಹರೀಶ್ ಪೂಂಜಾ, ವಿಧಾನ ಪರಿಷತ್ತು ಸದಸ್ಯ ಮಂಜುನಾಥ್ ಭಂಡಾರಿ, ಬೆಂಗಳೂರು ಕಂಬಳ ಸಮಿತಿಯ ಉಪಾಧ್ಯಕ್ಷ ಬೆಳ್ಳಿಪ್ಪಾಡಿ ಗುಣರಂಜನ್ ಶೆಟ್ಟಿ, ಸಂಘಟನಾ ಅಧ್ಯಕ್ಷ ಉಮೇಶ್ ಶೆಟ್ಟಿ, ಉಪಾಧ್ಯಕ್ಷ ಉಪೇಂದ್ರ ಶೆಟ್ಟಿ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.