Advertisement

ಬಿಜೆಪಿ ಸರಣಿ ಸಮಾವೇಶ, ಯಾತ್ರೆ

06:00 AM Feb 15, 2018 | |

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿ ಅವರ ರ್ಯಾಲಿಯಿಂದ ಉತ್ಸುಕರಾಗಿರುವ ಬಿಜೆಪಿ ಮುಖಂಡರು, ರಾಜ್ಯದ ವಿವಿಧ ಭಾಗದಲ್ಲಿ ಫೆಬ್ರವರಿ 19 ರಿಂದ 28ರ ವರೆಗೆ ನಿರಂತರ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. 

Advertisement

ಇವುಗಳಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಸಹಿತವಾಗಿ ಕೇಂದ್ರ ಸಚಿವರು, ರಾಷ್ಟ್ರೀಯ ನಾಯಕರು ರಾಜ್ಯಕ್ಕೆ ಆಗಮಿಸಲಿದ್ದಾರೆ.

ಶ್ರವಣಬೆಳಗೊಳದಲ್ಲಿ ನಡೆಯಲಿರುವ ಮಹಾಮಸ್ತಕಾಭಿಷೇಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಲುವಾಗಿ ಫೆ.18ರ ರಾತ್ರಿಯೇ ಮೈಸೂರಿಗೆ ಬರಲಿರುವ ಮೋದಿ ಅವರು, 19 ರಂದು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಅಲ್ಲಿಂದ ಬೆಳಗ್ಗೆ 11 ಗಂಟೆಗೆ ವಾಪಸ್‌ ಮೈಸೂರಿಗೆ ಬಂದು ರೈಲು ಯೋಜನೆಗೆ ಚಾಲನೆ ಮತ್ತು ಇಎಸ್‌ಐ ಆಸ್ಪತ್ರೆಯ ಉದ್ಘಾಟನೆ ನೆರವೇರಿಸಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಬಿಜೆಪಿ ಹಿತೈಷಿಗಳ, ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಭಾಷಣ ಮಾಡಲಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಬುಧವಾರ ಮಾಹಿತಿ ನೀಡಿದರು.

ಫೆ.20ರಿಂದ ಶಾ ಪ್ರವಾಸ
ಫೆ.20 ಮತ್ತು 21ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಪ್ರವಾಸ ಮಾಡಲಿದ್ದಾರೆ. 19ರ ರಾತ್ರಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಾಸ್ತವ್ಯ ಹೂಡುವ ಅವರು, 20ರ ಬೆಳಗ್ಗೆ ಕುಕ್ಕೇ ಸುಬ್ರಹ್ಮಣ್ಯ ಸ್ವಾಮಿಯ ದರ್ಶನ ಪಡೆದು, ನಂತರ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಅಲ್ಲಿಂದ ನೇರವಾಗಿ ಬಂಟ್ವಾಳದಲ್ಲಿ ಮೂರು ವಿಧಾನಸಭಾ ಕ್ಷೇತ್ರದ ನವಶಕ್ತಿ ಸಮಾವೇಶ ಉದ್ಘಾಟಿಸಿ ಭಾಷಣ ಮಾಡಲಿದ್ದಾರೆ. ನಂತರ ಇತ್ತೀಚೆಗೆ ಕೊಲೆಯಾದ ಕಾಟಿಪಳ್ಳದ ದೀಪಕ್‌ ರಾವ್‌ ಮನೆ ಭೇಟಿ ನೀಡಲಿದ್ದಾರೆ. ಅದೇ ದಿನ ಸಂಜೆ ಉಡುಪಿಯಲ್ಲಿ ಮೂರು ಜಿಲ್ಲೆಯ ಮೀನುಗಾರರ ಸಮಾವೇಶ ಉದ್ದೇಶಿಸಿ ಭಾಷಣ ಮಾಡಿದ್ದಾರೆ ಎಂಬ ಮಾಹಿತಿ ನೀಡಿದರು.

ಫೆ.21ರ ಬೆಳಗ್ಗೆ ಉಡುಪಿ ಶ್ರೀಕೃಷ್ಣಮಠಕ್ಕೆ ಭೇಟಿ ನೀಡಿ, ಬೇರೆ ಬೇರೆ ಮಠಾಧೀಶರೊಂದಿಗೆ ಚರ್ಚೆ ನಡೆಸಲಿದ್ದಾರೆ.  ಬೆಳಗ್ಗೆ 11ಕ್ಕೆ ಶಕ್ತಿಕೇಂದ್ರ ಪ್ರಮುಖರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ನಂತರ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಕಾರ್ಯಕರ್ತರೊಂದಿಗೆ ಸಂವಾದ ನಡೆಸಲಿದ್ದಾರೆ. ಅಲ್ಲಿಂದ ಉತ್ತರ ಕನ್ನಡದ ಕುಮಟದಲ್ಲಿ ಇತ್ತೀಚೆಗೆ ಕೊಲೆಯಾದ  ಪರೇಶ್‌ ಮೇಸ್ತನ ಮನೆಗೆ ಭೇಟಿ ನೀಡಲಿದ್ದಾರೆ. ಸಂಜೆ ಕುಮಟದಲ್ಲಿ ನಡೆಯುವ ನವಶಕ್ತಿ ಸಮಾವೇಶ ಉದ್ಘಾಟಿಸಿ ಭಾಷಣ ಮಾಡಲಿದ್ದಾರೆ ಎಂದರು.

Advertisement

ಜಾತಿ ಸಮಾವೇಶ:
ಫೆ.22ರಂದು ಹಾವೇರಿ, ಹುಬ್ಬಳ್ಳಿ, ಧಾರವಾಡ, ಗದಗ, ಬೆಳಗಾವಿ ಮತ್ತು ಚಿಕ್ಕೊಡಿ ಜಿಲ್ಲೆಯ ಪರಿಶಿಷ್ಟ ಜಾತಿಯ ಕಾರ್ಯಕರ್ತರ ಬೃಹತ್‌ ಸಮಾವೇಶವನ್ನು ಹಾವೇರಿಯಲ್ಲಿ ಆಯೋಜಿಸಲಾಗಿದೆ. ಫೆ. 24ರಂದು ರಾಯಚೂರಿನಲ್ಲಿ ಕೊಪ್ಪಳ, ಬಳ್ಳಾರಿ, ಬೀದರ್‌ ಮತ್ತು ಕಲಬುರಗಿಯ ಹಿಂದುಳಿದ ವರ್ಗದ ಕಾರ್ಯಕರ್ತರ ಬೃಹತ್‌ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಫೆ. 25ರಂದು ಕಲಬುರಗಿಯಲ್ಲಿ ವಿಭಾಗ ಮಟ್ಟದ ಪರಿಶಿಷ್ಟ ಜಾತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ರೈತ ಸಮಾವೇಶ:
ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರ 75ನೇ  ಹುಟ್ಟುಹಬ್ಬದ ಹಿನ್ನೆಲೆಯಲ್ಲಿ  ರೈತಬಂಧು ಯಡಿಯೂರಪ್ಪ ಎಂಬ ಹೆಸರಿನ ಬೃಹತ್‌ ರೈತ ಸಮಾವೇಶವನ್ನು ಫೆ.27 ರಂದು ದಾವಣಗೆರೆಯಲ್ಲಿ ಹಮ್ಮಿಕೊಂಡಿದ್ದು, ಪ್ರಧಾನಿ ಮೋದಿಯವರು ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ರೈತರಲ್ಲಿ ಒಬ್ಬರ ಮನೆಗೆ ಆ ದಿನ ಬಿ.ಎಸ್‌.ಯಡಿಯೂರಪ್ಪ ಅವರು ಹೋಗಿಬರಲಿದ್ದಾರೆ. ಹಾಗೆಯೇ ರಾಜ್ಯದಲ್ಲಿ ಅತ್ಯಹತ್ಯೆ ಮಾಡಿಕೊಂಡಿರುವ ರೈತರ ಮನೆಗೆ  ಫೆ. 15ರಿಂದ 25ರ ವರೆಗೆ ಬಿಜೆಪಿ ಕಾರ್ಯಕರ್ತರು ಭೇಟಿ ನೀಡಿ, ಅವರ ಕುಟುಂಬದ ಸ್ಥಿತಿಗತಿ ಅಧ್ಯಯನ ಮಾಡಲಿದ್ದಾರೆ ಎಂಬ ಮಾಹಿತಿ ನೀಡಿದರು.

ಮಹಿಳಾ ಸಮಾವೇಶ:
ರಾಜ್ಯ ಬಿಜೆಪಿ ಪೂರ್ವ ನಿರ್ಧಾರದಂತೆ ಫೆ.28ರಂದು ಮಂಗಳೂರಿನಲ್ಲಿ ಮೊದಲ ಮಹಿಳಾ ಸಮಾವೇಶ ನಡೆಸಲಿದ್ದೇವೆ. ರಾಜ್ಯದ ಎಲ್ಲಾ ವಿಭಾಗದಲ್ಲೂ ಮಹಿಳಾ ಸಮಾವೇಶ ಮಾರ್ಚ್‌ ತಿಂಗಳಲ್ಲಿ ನಡೆಯಲಿದೆ. ಮಂಗಳೂರಿನ ಸಮಾವೇಶಕ್ಕೆ ಉಡುಪಿ, ದ.ಕ. ಮತ್ತು ಉತ್ತರ ಕನ್ನಡ ಜಿಲ್ಲೆಯ ಅರ್ಧಭಾಗದ ಮಹಿಳೆಯರು ಬರಲಿದ್ದಾರೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.

ಕರ್ನಾಟಕ ಸುರಕ್ಷಾ ಯಾತ್ರೆ
ಕರಾವಳಿಯ ಯುವ ಜನತೆಯಲ್ಲಿ ಜಾಗೃತಿ ಮೂಡಿಸಲು ರಾಜ್ಯ ಬಿಜೆಪಿ ಮಾ.3ರಿಂದ 6ರ ತನಕ ಕರ್ನಾಟಕ ಸುರಕ್ಷಾ ಯಾತ್ರೆ ಹಮ್ಮಿಕೊಂಡಿದೆ. ಮಾ.3ರಂದು ಕೊಡಗು ಜಿಲ್ಲೆಯ ಕುಶಾಲನಗರದಿಂದ ಮತ್ತು ಉತ್ತರ ಕನ್ನಡ ಜಿಲ್ಲೆಯ ಅಂಕೋಲದಿಂದ ಸುರಕ್ಷಾ ಯಾತ್ರೆ ಹೊರಡಲಿದೆ. ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಮತ್ತು ಸಂಸದ ಪ್ರತಾಪ್‌ ಸಿಂಹ ಅವರು ಕುಶಾಲನಗರದಲ್ಲಿ ಮತ್ತು ಕೇಂದ್ರ ಸಚಿವರಾದ ಅನಂತಕುಮಾರ್‌ ಮತ್ತು ಅನಂತ್‌ ಕುಮಾರ್‌ ಹಗಡೆಯವರು ಅಂಕೋಲದಲ್ಲಿ ಯಾತ್ರೆಗೆ ಚಾಲನೆ ನೀಡಲಿದ್ದಾರೆ.

ಕುಶಾಲನಗರದಿಂದ ಮಡಿಕೇರಿ, ಸುಳ್ಯ, ಪುತ್ತೂರು ಕಲ್ಲಡ್ಕ, ಬಿ.ಸಿ.ರೋಡ್‌, ಮಂಗಳೂರು ಮಾರ್ಗವಾಗಿ ಸುರತ್ಕಲ್‌ ಸೇರಲಿದೆ. ಅಂಕೋಲದಿಂದ ಕುಮಟ, ಭಟ್ಕಳ, ಬೈಂದೂರು, ಕುಂದಾಪುರ, ಉಡುಪಿ, ಕಾಪು, ಮುಲ್ಕಿ ಮಾರ್ಗವಾಗಿ ಸುರತ್ಕಲ್‌ ಸೇರಲಿದೆ. ಮಾ.6ರಂದು ಸುರತ್ಕಲ್‌ನಲ್ಲಿ ಬೃಹತ್‌ ಸಮಾವೇಶ ನಡೆಯಲಿದ್ದು, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಭಾಗವಹಿಸಲಿದ್ದಾರೆ ಎಂಬ ಮಾಹಿತಿ ನೀಡಿದರು.

ಎಲ್ಲಿ, ಯಾವ ಕಾರ್ಯಕ್ರಮ?
– ಫೆ.19 – ಮೈಸೂರಿನಲ್ಲಿ ಮೋದಿ ಸಮಾವೇಶ
– ಫೆ.20 – ಬಂಟ್ವಾಳದಲ್ಲಿ ಶಾ ನವಶಕ್ತಿ ಸಮಾವೇಶ
– ಫೆ.21 – ಕುಮಟಾದಲ್ಲಿ ಶಕ್ತಿ ಕೇಂದ್ರ ಪ್ರಮುಖರ ಜತೆ ಶಾ ಮಾತು
– ಫೆ.22- ಹಾವೇರಿಯಲ್ಲಿ ಪರಿಶಿಷ್ಟ ಜಾತಿ ಕಾರ್ಯಕರ್ತರ ಬೃಹತ್‌ ಸಮಾವೇಶ
– ಫೆ. 24- ರಾಯಚೂರಿನಲ್ಲಿ ಹಿಂದುಳಿದ ವರ್ಗದ ಕಾರ್ಯಕರ್ತರ ಬೃಹತ್‌ ಸಮಾವೇಶ
– ಫೆ. 25- ಕಲಬುರಗಿಯಲ್ಲಿ ವಿಭಾಗ ಮಟ್ಟದ ಪರಿಶಿಷ್ಟ ಜಾತಿ ಸಮಾವೇಶ
–  ಫೆ.27  – ದಾವಣಗೆರೆಯಲ್ಲಿ ರೈತಬಂಧು ಯಡಿಯೂರಪ್ಪ ಸಮಾವೇಶ, ಮೋದಿ ಭಾಗಿ
– ಫೆ.28 – ಮಂಗಳೂರಿನಲ್ಲಿ ಮಹಿಳಾ ಸಮಾವೇಶ
– ಮಾ.3-6 – ಕರ್ನಾಟಕ ಸುರಕ್ಷಾ ಯಾತ್ರೆ

Advertisement

Udayavani is now on Telegram. Click here to join our channel and stay updated with the latest news.

Next