Advertisement

ಸತೀಶ್‌ ಜಾರಕಿಹೊಳಿ ಹೇಳಿಕೆ ಖಂಡಿಸಿ ಜಿಲ್ಲಾ ಬಿಜೆಪಿ ಪ್ರತಿಭಟನೆ

08:23 PM Nov 09, 2022 | Team Udayavani |

ಉಡುಪಿ/ಮಂಗಳೂರು: ಹಿಂದೂ ಶಬ್ದ ಅಶ್ಲೀಲ ಅರ್ಥಹೊಂದಿದೆ ಎಂದು ಶಾಸಕ ಸತೀಶ್‌ ಜಾರಕಿಹೊಳಿಯವರು ನೀಡಿರುವ ಹೇಳಿಕೆಯನ್ನು ಖಂಡಿಸಿ ಜಿಲ್ಲಾ ಬಿಜೆಪಿ ವತಿಯಿಂದ ಜಿಲ್ಲಾ ಕಚೇರಿ ಮುಂಭಾಗ ಬುಧವಾರ ಪ್ರತಿಭಟನೆ, ಜಾರಕಿಹೊಳಿಯವರ ವಿರುದ್ಧ ಘೋಷಣೆ ಕೂಗಿ ಕೂಡಲೇ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಲಾಯಿತು.

Advertisement

ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್‌ ನಾಯಕ್‌ ಮಾತನಾಡಿ, ಇದು ಜಾರಕಿಹೊಳಿಯವರ ಅಶ್ಲೀಲ ಮಾನಸಿಕತೆ ಹಾಗೂ ಕಾಂಗ್ರೆಸ್‌ನ ಮನಸ್ಥಿತಿಯನ್ನು ತೋರಿಸುತ್ತದೆ. ರಾಮಮಂದಿರ ನಿರ್ಮಾಣ, ರಾಮಸೇತು ವಿಚಾರ ಹಾಗೂ ಕಾಶ್ಮೀರದ ಕುರಿತು ಕಾಂಗ್ರೆಸ್‌ ಹೀಗೆ ಮಾಡುತ್ತ ಬಂದಿದೆ. ಜಾರಕಿಹೊಳಿಯವರ ಹೇಳಿಕೆಯು ಕಾಂಗ್ರೆಸ್‌ನ ಕುಟಿಲ ತಂತ್ರದ ಭಾಗವಾಗಿದೆ ಎಂದರು.

ಮೈಸೂರು ಎಲೆಕ್ಟ್ರಿಕಲ್‌ ಇಂಡಸ್ಟ್ರೀಸ್‌ನ ಅಧ್ಯಕ್ಷ ಕೆ. ಉದಯ ಕುಮಾರ್‌ ಶೆಟ್ಟಿ ಮಾತನಾಡಿ, ದೇಶದ ಹಿಂದೂಗಳಿಗೆ ಕಾಂಗ್ರೆಸ್‌ ಅಪಮಾನ ಮಾಡಿದೆ. ಮುಸ್ಲಿಂ ಧರ್ಮದ ಬಗ್ಗೆ ಸ್ವಲ್ಪ ಮಾತನಾಡಿದ್ದರೂ ಈ ಹೊತ್ತಿಗೆ ಪರಿಸ್ಥಿತಿಯೇ ಬೇರೆ ಆಗುತಿತ್ತು ಎಂದರು.

ಶಾಸಕ ಕೆ. ರಘುಪತಿ ಭಟ್‌, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮಾತನಾಡಿ ಆಕ್ರೋಶ ವ್ಯಕ್ತಪಡಿಸಿದರು.

ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್‌. ನಾಯಕ್‌, ಉಪಾಧ್ಯಕ್ಷೆ ಲಕ್ಷ್ಮೀ ಮಂಜುಕೊಳ, ಪ್ರಮುಖರಾದ ರಾಘವೇಂದ್ರ ಕಿಣಿ, ಸುಪ್ರಸಾದ್‌ ಶೆಟ್ಟಿ, ಶ್ರೀಶ ನಾಯಕ್‌ ಪೆರ್ಣಂಕಿಲ, ಗೀತಾಂಜಲಿ ಸುವರ್ಣ, ಮಹೇಶ್‌ ಠಾಕೂರ್‌, ಶಿಲ್ಪ ಸುವರ್ಣ, ವೀಣಾ ಶೆಟ್ಟಿ, ದಿನಕರ ಬಾಬು, ರವಿ ಅಮಿನ್‌, ಸತ್ಯಾನಂದ ನಾಯಕ್‌, ಪ್ರಕಾಶ್‌ ಶೆಟ್ಟಿ ಪಾದೆಬೆಟ್ಟು, ಗುರುಪ್ರಸಾದ್‌ ಶೆಟ್ಟಿ, ನಳಿನಿ ಪ್ರದೀಪ್‌ ರಾವ್‌, ಅಂಡಾರು ದೇವಿಪ್ರಸಾದ್‌ ಶೆಟ್ಟಿ, ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಸಲೀಂ ಅಂಬಾಗಿಲು, ಶಿವಕುಮಾರ್‌ ಅಂಬಲಪಾಡಿ, ಬಾಲಕೃಷ್ಣ ಶೆಟ್ಟಿ, ಜಗದೀಶ್‌ ಆಚಾರ್ಯ, ಕಿರಣ್‌ ಕುಮಾರ್‌ ಬೈಲೂರು, ಗೋಪಾಲ ಕಡಂಜೆ, ಸುರೇಂದ್ರ ಪಣಿಯೂರು, ಶ್ರೀನಿಧಿ ಹೆಗ್ಡೆ, ಅನಿತಾ ಶ್ರೀಧರ್‌ ಸಹಿತ ವಿವಿಧ ಮೋರ್ಚಾ, ಪ್ರಕೋಷ್ಠದ ಅಧ್ಯಕ್ಷ, ಉಪಾಧ್ಯಕ್ಷರು ಸಂಚಾಲಕರು ಉಪಸ್ಥಿತರಿದ್ದರು.

Advertisement

‌ಸತೀಶ್‌ ಜಾರಕಿಹೊಳಿ ಹೇಳಿಕೆ ವಿರೋಧಿಸಿ ಬಿಜೆಪಿ ಪ್ರತಿಭಟನೆ
ಮಂಗಳೂರು: “ಹಿಂದೂ’ ಪದದ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ನೀಡಿರುವ ಹೇಳಿಕೆ ಖಂಡಿಸಿ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಘಟಕ ನೇತೃತ್ವದಲ್ಲಿ ನಗರದ ಕ್ಲಾಕ್‌ ಟವರ್‌ ಬಳಿ ಬುಧವಾರ ಪ್ರತಿಭಟನೆ ನಡೆಯಿತು.

ವಿಧಾನ ಪರಿಷತ್‌ ಮಾಜಿ ಸದಸ್ಯ ಮೋನಪ್ಪ ಭಂಡಾರಿ ಮಾತನಾಡಿ, ಸತೀಶ್‌ ಜಾರಕಿಹೊಳಿ ಅವರು ಹಿಂದೂ ಶಬ್ದದ ಬಗ್ಗೆ ಬುದ್ಧಿಗೇಡಿ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್‌ ಹಿಂದೂ ವಿರೋಧಿ ಮನೋಸ್ಥಿತಿ ಹೊಂದಿದೆ. ಹಿಂದೂ ಎಂಬುದು ಈ ದೇಶದ ಜೀವನ ಪದ್ಧತಿ ಎಂದು ಸುಪ್ರೀಂಕೋರ್ಟ್‌ ವ್ಯಾಖ್ಯಾನಿಸಿದೆ. ಆದರೆ ರಾಮಸೇತು, ರಾಮಜನ್ಮಭೂಮಿ ಬಗ್ಗೆ ವಿರೋಧದ ನಿಲುವು ತಳೆದಿರುವ ಕಾಂಗ್ರೆಸ್‌ ಈಗ ಹಿಂದೂ ಶಬ್ದದ ಬಗ್ಗೆಯೇ ಅಪಸ್ವರ ಎತ್ತಿದೆ. ಈ ಹೇಳಿಕೆ ಬಗ್ಗೆ ಸತೀಶ್‌ ಜಾರಕಿಹೊಳಿ ಅವರು ತತ್‌ಕ್ಷಣ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮದಾಸ್‌ ಬಂಟ್ವಾಳ ಮಾತನಾಡಿ, ಹಿಂದೂಗಳ ಬಗ್ಗೆ ನೆಹರೂ ಅವರ ಮನೋಸ್ಥಿತಿಯಿಂದ ಕಾಂಗ್ರೆಸ್‌ ನಾಯಕರು ಇನ್ನೂ ಹೊರಬಂದಿಲ್ಲ. ಚುನಾವಣೆಯ ಹೊಸ್ತಿಲಲ್ಲಿ ಅಲ್ಪಸಂಖ್ಯಾಕರ ತುಷ್ಟೀಕರಣಕ್ಕಾಗಿ ಈ ಹೇಳಿಕೆ ನೀಡಲಾಗಿದೆ. ಸತೀಶ್‌ ಜಾರಕಿಹೊಳಿ ಕ್ಷಮೆ ಕೇಳದಿದ್ದರೆ ರಾಜ್ಯಾದ್ಯಂತ ಅವರಿಗೆ ಘೆರಾವ್‌ ಹಾಕಲಾಗುವುದು ಎಂದು ತಿಳಿಸಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಧೀರ್‌ ಶೆಟ್ಟಿ ಕಣ್ಣೂರು, ಮುಡಾ ಮಾಜಿ ಅಧ್ಯಕ್ಷ ರವಿಶಂಕರ ಮಿಜಾರು ಅವರು ಜಾರಕಿಹೊಳಿ ಹೇಳಿಕೆಯನ್ನು ಖಂಡಿಸಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಸ್ತೂರಿ ಪಂಜ, ಉಪಮೇಯರ್‌ ಪೂರ್ಣಿಮಾ, ಮುಖಂಡರಾದ ನಿತಿನ್‌ಕುಮಾರ್‌, ಪ್ರೇಮಾನಂದ ಶೆಟ್ಟಿ, ಸಂತೋಷ್‌ಕುಮಾರ್‌ ರೈ ಬೋಳಿಯಾರ್‌, ರೂಪಾ ಬಂಗೇರ, ವಿಜಯಕುಮಾರ್‌ ಶೆಟ್ಟಿ, ಪ್ರಭಾಮಾಲಿನಿ, ಭಾಸ್ಕರಚಂದ್ರ ಶೆಟ್ಟಿ, ಶಕೀಲಾ ಕಾವ, ಸುಮಂಗಲಾ ರಾವ್‌ ಮುಂತಾದವರು ಭಾಗವಹಿಸಿದ್ದರು.

ಸುದರ್ಶನ್‌ ಖಂಡನೆ
ಸತೀಶ್‌ ಜಾರಕಿಹೊಳಿ ಹಿಂದೂ ವಿರೋಧಿ ಹೇಳಿಕೆಯನ್ನು ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಎಂ. ಖಂಡಿಸಿದ್ದಾರೆ. ಕಾಂಗ್ರೆಸ್‌ ಪ್ರಾರಂಭದಿಂದ ಇವತ್ತಿನ ತನಕ ಹಿಂದೂ ವಿರೋಧಿಯಾಗಿ ಮತೀಯ ವಿಷಬೀಜವನ್ನು ಬಿತ್ತಿಕೊಂಡು ಬಂದಿದೆ. ಈ ಹೇಳಿಕೆಯಿಂದ ಕಾಂಗ್ರೆಸ್‌ ಸಂಸ್ಕೃತಿ ಮತ್ತೊಮ್ಮೆ ಸಾಬೀತಾಗಿದೆ ಎಂದು ಅವರು ಟೀಕಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next