Advertisement

ಪ್ರತಿಭಟನೆ ವೇಳೆ ಬಿಜೆಪಿ ಕಚೇರಿ ಎದುರು ಗೊಂದಲ ವಾತಾವರಣ

08:44 AM Dec 28, 2017 | Team Udayavani |

ಬೆಂಗಳೂರು: 4 ದಿನಗಳಿಂದ ಮಹದಾಯಿ ಹೋರಾಟಗಾರರು ಬಿಜೆಪಿ ಕಚೇರಿ ಎದುರು ನಡೆಸುತ್ತಿದ್ದ ಧರಣಿಗೆ ಪ್ರತಿಯಾಗಿ ರಾಜ್ಯ ಬಿಜೆಪಿ ರೈತ ಮೋರ್ಚಾ ಕಾರ್ಯದರ್ಶಿ ಈಶ್ವರ ಚಂದ್ರ ಹೊರಮನಿ ಮುಂದಾಳತ್ವದಲ್ಲಿ ನೂರಾರು ರೈತರು ಅಲ್ಲಿ
ಜಮಾಯಿಸಿದ್ದರಿಂದ ಬುಧವಾರ ಬೆಳಗ್ಗೆ ಸ್ವಲ್ಪ ಹೊತ್ತು ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

Advertisement

ಮಹದಾಯಿ ಹೋರಾಟಗಾರರು ಬಿಜೆಪಿ ಕಚೇರಿ ಎದುರು ಹೋರಾಟ ನಡೆಸುತ್ತಿರುವುದರಿಂದ ಇದು ಕಾಂಗ್ರೆಸ್‌ ಪ್ರೇರಿತ ಎಂದು ರೈತ ಮೋರ್ಚಾ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ರೈತರು ಆರೋಪಿಸಿದರು. ಈ ವೇಳೆ ಹೆಚ್ಚಿನ ಪೊಲೀಸ್‌
ಬಂದೋಬಸ್ತ್ ಇದ್ದುದರಿಂದ ಯಾವುದೇ ಅಹಿತಕರ ಘಟನೆ ನಡೆಯಲು ಅವಕಾಶವಾಗಲಿಲ್ಲ. ನಂತರ ರೈತ ಮೋರ್ಚಾ ನೇತೃತ್ವದಲ್ಲಿ ಬಂದಿದ್ದವರು ಕಾಂಗ್ರೆಸ್‌ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಕೆಪಿಸಿಸಿ ಕಚೇರಿ ಕಡೆ ತೆರಳಿದರೆ, ಬಿಜೆಪಿ ಕಚೇರಿ ಎದುರು ನಾಲ್ಕು ದಿನಗಳಿಂದ ಧರಣಿ ನಡೆಸುತ್ತಿದ್ದವರು ಪಾದಯಾತ್ರೆ ಮೂಲಕ ರಾಜಭವನದತ್ತ ಹೊರಟರು.

ಕನ್ನಡ ಒಕ್ಕೂಟದಿಂದ ಕರಾಳ ದಿನ
ಬೆಂಗಳೂರು: ಮಹದಾಯಿ ಸಮಸ್ಯೆ ಇತ್ಯರ್ಥಕ್ಕೆ ಗಂಭೀರ ಪ್ರಯತ್ನ ಮಾಡದ ಪ್ರಧಾನಿ, ಗೋವಾ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಗಳ ವಿರುದ್ಧ ಗುರುವಾರ ಕಪ್ಪು ಬಾವುಟ ಪ್ರದರ್ಶನದ ಮೂಲಕ ಕರಾಳ ದಿನಾಚರಣೆ ನಡೆಸಲು ಕನ್ನಡ ಒಕ್ಕೂಟ ನಿರ್ಧರಿಸಿದೆ. ನಗರದ ಮೈಸೂರು ಬ್ಯಾಂಕ್‌ ವೃತ್ತದಲ್ಲಿ ಬೆಳಗ್ಗೆ 11.30ಕ್ಕೆ ಕರಾಳ ದಿನಾಚರಣೆ ನಡೆಯಲಿದೆ. ಕನ್ನಡ ಚಳವಳಿ ನಾಯಕ ವಾಟಾಳ್‌ ನಾಗರಾಜ್‌, ಡಾ.ರಾಜ್‌ಕುಮಾರ್‌ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು, ಕನ್ನಡ ಸೇನೆಯ ರಾಜ್ಯಾಧ್ಯಕ್ಷ
ಕೆ.ಆರ್‌.ಕುಮಾರ್‌, ಕರ್ನಾಟಕ ರಕ್ಷಣಾ ವೇದಿಕೆ ವಿವಿಧ ಬಣದ ಅಧ್ಯಕ್ಷರಾದ ಶಿವರಾಮೇಗೌಡ, ಪ್ರವೀಣ್‌ ಕುಮಾರ್‌ ಶೆಟ್ಟಿ, ಕನ್ನಡ ಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ಮಂಜುನಾಥ್‌ ದೇವ್‌ ಮೊದಲಾದವರು ಭಾಗವಹಿಸಲಿದ್ದಾರೆ.

ಬೆಂಗಳೂರಿನ ಹೋರಾಟ ನಿಲ್ಲಿಸಿ
ಹೋರಾಟದ ನೆಲೆಯಾದ ನರಗುಂದಕ್ಕೆ ಹೋಗಿ ಮುಂದಿನ ಹೋರಾಟದ ರೂಪುರೇಷೆ ಸಿದ್ಧಪಡಿಸಲಿದ್ದೇವೆ. ಜನವರಿ
31ರೊಳಗೆ ಸರ್ವಪಕ್ಷ ನಿಯೋಗವನ್ನು ಪ್ರಧಾನಿ ಬಳಿಗೆ ಕೊಂಡೊಯ್ಯುವ ಗಡುವನ್ನು ಮುಖ್ಯಮಂತ್ರಿಯವರಿಗೆ ನೀಡಿದ್ದೇವೆ. ಜನವರಿಯಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ದೊಡ್ಡ ಹೋರಾಟ ಮಾಡಲಿದ್ದೇವೆ. 
 ●ಶಂಕರ್‌ ಅಂಬಲಿ, ರೈತ ಮುಖಂಡ

ಯಾರು, ಏನ್‌ ಹೇಳ್ತಾರೆ?
ಗೋವಾ ಮುಖ್ಯಮಂತ್ರಿಯವರು ಮಹದಾಯಿ ವಿಚಾರದಲ್ಲಿ ಯಡಿಯೂರಪ್ಪನವರಿಗೆ ಪತ್ರ ಬರೆದಿದ್ದರು. ನಾನು ಅಸ್ಪಶ್ಯ, ಪರಿಕ್ಕರ್‌ ನನಗೆ ಪತ್ರ ಬರೆಯುವುದು ಬೇಡ. ಆದರೆ, ಕನಿಷ್ಟ ಶಿಷ್ಟಾಚಾರಕ್ಕಾದರೂ ಕರ್ನಾಟಕದ ಮುಖ್ಯಮಂತ್ರಿಗೆ ಪತ್ರ ಬರೆಯುವುದು ಬೇಡವೇ?
 ●ಸಿದ್ದರಾಮಯ್ಯ, ಮುಖ್ಯಮಂತ್ರಿ

Advertisement

ಮಹದಾಯಿ ನದಿ ನೀರು ಹಂಚಿಕೆ ವಿವಾದ ಬಗೆ ಹರಿಸಲು ಪ್ರಧಾನಿ ನರೇಂದ್ರ ಮೋದಿ ಮಧ್ಯಸ್ಥಿಕೆಯಿಂದ ಮಾತ್ರ ಸಾಧ್ಯ.
ಬಿಜೆಪಿ ಸಂಸದರು ಮತ್ತು ಕಾರ್ಯಕರ್ತರು ಕಾಂಗ್ರೆಸ್‌ ಕಚೇರಿ ಎದುರು ಪ್ರತಿಭಟನೆ ಮಾಡಿ ರಾಜಕಾರಣ ಮಾಡುವ ಬದಲು ಪ್ರಧಾನಿ ಮೇಲೆ ಒತ್ತಡ ತಂದು ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ಪರಿಹಾರ ಸೂಚಿಸಬೇಕು.
 ●ಎಸ್‌.ಆರ್‌. ಪಾಟೀಲ್‌, ಕೆಪಿಸಿಸಿ ಕಾರ್ಯಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next