Advertisement
ಎಂದಿನಂತೆ 901ನೇ ದಿನ ಮಹದಾಯಿ ನಿರಂತರ ಸತ್ಯಾಗ್ರಹ ನಡೆದಿತ್ತು. ಮಧ್ಯಾಹ್ನ 2:30ಕ್ಕೆ ವೇದಿಕೆ ಬಳಿ ಜಮಾಯಿಸಿದ ಬಿಜೆಪಿಕಾರ್ಯಕರ್ತರು ವೇದಿಕೆಯಲ್ಲಿದ್ದ ರೈತ ಸೇನಾ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಅವರೊಂದಿಗೆ ವಾಗ್ವಾದಕ್ಕಿಳಿದರು. ಕಳಸಾ-ಬಂಡೂರಿ ನೀರು ತರುವ ಪ್ರಯತ್ನದಲ್ಲಿ ಯಡಿಯೂರಪ್ಪನವರು ತೊಡಗಿದ್ದರೂ ಬಿಜೆಪಿ ಕಚೇರಿಯೆದುರು ಧರಣಿ ನಡೆಸಿದ್ದೇಕೆ ಎಂದು
ಪ್ರಶ್ನಿಸಿದರು. ಈ ವೇಳೆ, ಸೊಬರದಮಠ ಅವರನ್ನು ನಿಂದಿಸಿದ ಬಿಜೆಪಿ ಕಾರ್ಯಕರ್ತರು ರಾಜ್ಯದಲ್ಲಿ ಆಡಳಿತ ನಡೆಸಿದ ಮುಖ್ಯಮಂತ್ರಿಗಳ ಕಚೇರಿ ಎದುರು ಧರಣಿ ನಡೆಸದೆ ಯೋಜನೆಗೆ ಪ್ರಯತ್ನ ಮಾಡುವವರ ಕಚೇರಿ ಎದುರು ಧರಣಿ ನಡೆಸಿದ್ದೀರಿ. ನೀವು ರೈತರ ದಿಕ್ಕು ತಪ್ಪಿಸುತ್ತಿದ್ದೀರಿ ಎಂದು ಸೊಬರದಮಠ ಅವರನ್ನು ತರಾಟೆಗೆ ತೆಗೆದುಕೊಂಡರು.
ಕಾರ್ಯಕರ್ತರ ಮಧ್ಯೆ ತೀವ್ರ ಮಾತಿನ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ಹೋಯಿತು. ಮಧ್ಯೆ ಪ್ರವೇಶಿಸಿದ ಪೊಲೀಸರು
ಕಾರ್ಯಕರ್ತರನ್ನು ಸಮಾಧಾನಗೊಳಿಸಿ ಅಲ್ಲಿಂದ ನಿರ್ಗಮಿಸಲು ವಿನಂತಿಸಿದರು. ಇದಾದ ಬಳಿಕ ಕೆಲ ಕಾರ್ಯಕರ್ತರು ತೆರಳಿದರೆ ಉಳಿದ ಕಾರ್ಯಕರ್ತರು ಹೆದ್ದಾರಿಯಲ್ಲಿ ಪ್ರತಿಭಟನೆಗೆ ಮುಂದಾದಾಗ ಮತ್ತಷ್ಟು ಕಾರ್ಯಕರ್ತರು ಜಮಾವಣೆಗೊಂಡರು. ಇದೇ ಸಂದರ್ಭದಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಸೊಬರದಮಠ ವೇದಿಕೆಯಿಂದ ನಿರ್ಗಮಿಸುವವರೆಗೆ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಘೋಷಣೆ ಕೂಗಿದರು. ಘಟನೆ ಹಿನ್ನೆಲೆಯಲ್ಲಿ ಪೊಲೀಸರು ಹೆಚ್ಚಿನ ಸಿಬ್ಬಂದಿಯೊಂದಿಗೆ ಸ್ಥಳದಲ್ಲಿ ಠಿಕಾಣಿ ಹೂಡಿದ್ದಾರೆ. ಗಡುವು ಮೀರಿದರೆ ಸಿಎಂ ಮನೆಯೆದುರು ಧರಣಿ ನರಗುಂದ: ನಾವು ಯಾವುದೇ ಪಕ್ಷದ ವಿರೋಧಿಗಳಲ್ಲ. ಇದೀಗ ಕೂಡಲೇ ಸರ್ವಪಕ್ಷ ನಿಯೋಗದೊಂದಿಗೆ
ಮತ್ತೂಮ್ಮೆ ಪ್ರಧಾನಿ ಬಳಿಗೆ ತೆರಳಲು ಜ.31ರವರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗಡುವು ನೀಡಿದ್ದೇವೆ. ಇದು
ಈಡೇರದಿದ್ದರೆ ಸಿಎಂ ಮನೆಯೆದುರು ಧರಣಿ ನಡೆಸುವುದು ನಿಶ್ಚಿತ ಎಂದು ರೈತ ಸೇನಾ ಕರ್ನಾಟಕ ರಾಜ್ಯಾಧ್ಯಕ್ಷ ವೀರೇಶ
ಸೊಬರದಮಠ ಸ್ವಾಮೀಜಿ ತಿಳಿಸಿದರು.
Related Articles
ಬೆಂಗಳೂರಿನ ಬಿಜೆಪಿ ಕಚೇರಿ ಎದುರು ಧರಣಿ ನಡೆಸಿದೆವು. ಮರುದಿನ ಹಳಸಿದ ಬುತ್ತಿ ಬಿಚ್ಚಿ ಊಟ ಮಾಡಿದೆವು. ಬಳಿಕ ಮಲ್ಲೇಶ್ವರಂ ನಿವಾಸಿಗಳು ಧವಸ ಧಾನ್ಯ ನೀಡಿದರು. ಬರುವಾಗ ಉಳಿದ ಧವಸ ಧಾನ್ಯಗಳನ್ನು ಅಲ್ಲಿನ ವೃದ್ಧಾಶ್ರಮಕ್ಕೆ ನೀಡಿ ಬಂದಿದ್ದೇವೆ.
ಮೂರು ವರ್ಷದಿಂದ ಈ ಹೋರಾಟವನ್ನು ಪ್ರಾಮಾಣಿಕತೆಯಿಂದ ನಡೆಸಿಕೊಂಡು ಬಂದಿದ್ದೇವೆ. ಅಪವಾದಗಳಿಗೆ ನಾನು
ಜಗ್ಗಲಾರೆ. ರಾಜ್ಯದಲ್ಲಿ ಮೂರೂ ಪಕ್ಷಗಳ ಕಿತ್ತಾಟ ಗೋವಾದಲ್ಲಿ ನಗೆಪಾಟಲಿಗೀಡಾಗಿದೆ. ಇನ್ನು 2, 3 ದಿನಗಳಲ್ಲಿ ಸಭೆ ನಡೆಸಿ ಮುಂದಿನ ಹೋರಾಟದ ನಿರ್ಣಯ ಕೈಗೊಳ್ಳುತ್ತೇವೆ. ನಾನು ಹಿಡಿದ ಕೆಲಸ ಎಂದಿಗೂ ಕೈ ಬಿಟ್ಟಿಲ್ಲ. ನೀರು ಬರುವವರೆಗೂ ನಮ್ಮ ಹೋರಾಟ ಅಚಲ ಎಂದರು.
Advertisement
ನನ್ನ ಮೇಲೆ ಹಲ್ಲೆ ನಡೆದಿಲ್ಲ: ವೀರೇಶ ನರಗುಂದ: ಬಿಜೆಪಿ ಕಾರ್ಯಕರ್ತರಿಂದ ಹಲ್ಲೆ ಎಂಬ ಸುದ್ದಿ ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರಗೊಳ್ಳುತ್ತಿದ್ದಂತೆ ರಸ್ತೆ ತಡೆದು ಪ್ರತಿಭಟನೆ
ನಡೆಸಲಾಯಿತು. ಆದರೆ, ರೈತ ಸೇನಾ ಕರ್ನಾಟಕ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಅವರು, “ನನ್ನ ಮೇಲೆ ಯಾರೂ ಹಲ್ಲೆ ಮಾಡಿಲ್ಲ’ ಎಂದು ಹಿರಿಯ ಪೊಲೀಸ್ ಅಧಿಕಾರಿಗಳ ಮಧ್ಯಸ್ಥಿಕೆಯಲ್ಲಿ ಹೇಳಿಕೆ ನೀಡಿದ ಬಳಿಕ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಹಿಂಪಡೆದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ವಸಂತ ಜೋಗನ್ನವರ ಮಾತನಾಡಿ, ವೇದಿಕೆಯಲ್ಲಿ ಮಹದಾಯಿ ನೀರು
ತರುವ ಪ್ರಾಮಾಣಿಕ ಕಾಳಜಿ ತೋರುವ ಯಾವುದೇ ರಾಜಕೀಯ ನಾಯಕರ ಹೆಸರು ಪ್ರಸ್ತಾಪಿಸಿ ಟೀಕೆ ಮಾಡುವುದನ್ನು ನಿಲ್ಲಿಸದಿದ್ರೆ
ನಾವೂ ಸುಮ್ಮನೆ ಕೂಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ನರಗುಂದದಲ್ಲಿ ಬಿಜೆಪಿ ಕಾರ್ಯಕರ್ತರು ಭಾನುವಾರ ಹೆದ್ದಾರಿ ತಡೆದು ಧರಣಿ ನಡೆಸಿದರು.