ಕುಂಬಳೆ: ದೇಶಾದ್ಯಂತ ಪ್ರಧಾನಿಯವರ ಸ್ವತ್ಛ ಭಾರತ್ ಅಭಿಯಾನದ ಅಂಗವಾಗಿ ಶುಚಿತ್ವ ಕಾರ್ಯಕ್ರಮ ನಡೆಯುತ್ತಿರುವಾಗ ಪೈವಳಿಕೆ ಗ್ರಾಮ ಪಂಚಾಯತ್ ಎಡಬಲ ರಂಗ ಅಪವಿತ್ರ ಮೈತ್ರಿಕೂಟದ ಆಡಳಿತ ಕಾಂಚಾಣದ ಒತ್ತಾಸೆಗೆ ಮಣಿದು ಕೋಳಿ ತ್ಯಾಜ್ಯಸಂಗ್ರಹಣ ಘಟಕವನ್ನು ಆರಂಭಿಸಲು ಬೆಂಬಲಿಸುತ್ತಿರುವುದಾಗಿ ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾಯವಾದಿ ಶ್ರೀಕಾಂತ್ ಆರೋಪಿಸಿದರು.
ಜನವಾಸವಿರುವ ಬೆರಿಪದವು ಬಳ್ಳೂರು ಎಂಬಲ್ಲಿ ಕೋಳಿ ತ್ಯಾಜ್ಯ ಸಂಗ್ರಹ ಘಟಕ ಆರಂಭಿಸಲು ಕಾನೂನು ಬಾಹಿರವಾಗಿ ಪರವಾನಿಗೆ ನೀಡಿದ ಗ್ರಾಮ ಪಂಚಾಯತ್‌ಆಡಳಿತದ ವಿರುದ್ಧ ಬಿಜೆಪಿ ವತಿಯಿಂದ ನಡೆದ ಪ್ರತಿಭಟನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀಕಾಂತ್ ಮಾಲಿನ್ಯ ಘಟಕ ತೆರೆಯುವುದರಿಂದ ಪರಿಸರದಲ್ಲಿ ಎಂಡೋ ಸಲ್ಫಾನ್ ಮಾದರಿಯ ಮಾರಕ ರೋಗ ಹರಡಲಿದ್ದು ಜನರ ಆರೋಗ್ಯಕ್ಕೆ ಮಾರ ಕವಾಗಲಿರುವುದರಿಂದ ಸ್ಥಳೀಯಾಡಳಿತ ಇದನ್ನು ಬೆಂಬಲಿಸಬಾರದು. ಘಟಕ ಆರಂಭಿಸಲು ಮುಂದಾದಲ್ಲಿ ಮುಂದೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ಆರೋಗ್ಯ ಇಲಾಖೆಯವರು ಇದನ್ನು ಗಂಭೀರವಾಗಿ ಪರಿಗಣಿಸಬೇಕೆಂಬುದಾಗಿ ಒತ್ತಾಯಿಸಿದರು. ಕೇಂದ್ರ ಸರಕಾರದ ಜನಪರ ಯೋಜನೆಯಾದ ಗೃಹ ನಿರ್ಮಾಣ ಯೋಜನೆಯನ್ನು ರಾಜ್ಯ ಸರಕಾರದ ಯೋಜನೆ ಎಂಬುದಾಗಿ ಬಿಂಬಿಸಿ ಜನರನ್ನು ವಂಚಿಸುತ್ತಿರುವ ರಾಜ್ಯ ಸರಕಾರದ ಕ್ರಮವನ್ನು ಖಂಡಿಸಿದರು.
ಪಂಚಾಯತ್ ಸಮಿತಿ ಅಧ್ಯಕ್ಷ ಸದಾಶಿವ ಚೇರಾಲ್ ಅಧ್ಯಕ್ಷತೆ ವಹಿಸಿದ ಕಾರ್ಯಕ್ರಮದಲ್ಲಿ ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಕೋಳಾರು ಸತೀಶ್ಚಂದ್ರ ಭಂಡಾರಿ, ಸಂಘ ಪರಿವಾರದ ನಾಯಕರಾದ ಅರಿಬೈಲು ಗೋಪಾಲ ಶೆಟ್ಟಿ, ಅಂಗಾರ ಶ್ರೀಪಾದ, ಕೆ. ಜಯಲಕ್ಷ್ಮೀ ಭಟ್ ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿದರು. ನಾಯಕರಾದ ಮಣಿಕಂಠ ರೈ, ಸಂಕಪ್ಪ ಭಂಡಾರಿ ಬಳ್ಳಂಬೆಟ್ಟು, ಸರೋಜಾ ಬಲ್ಲಾಳ್, ಪುಷ್ಪಾ ಲಕ್ಷ್ಮೀ, ಪ್ರಸಾದ ರೈ ಕಯ್ನಾರು, ಪ್ರವೀಣಚಂದ್ರ ಬಲ್ಲಾಳ್, ಎ.ಕೆ. ಕಯ್ನಾರ್, ಮಹೇಶ್ ಕೆ.ವಿ., ಧನರಾಜ್ ಪ್ರತಾಪ ನಗರ, ವಿನೋದ ಬಾಯಾರು, ಮತ್ತು ಗ್ರಾಮ ಪಂಚಾಯತ್ ಚುನಾಯಿತ ಬಿಜೆಪಿ ಸದಸ್ಯರು ಪ್ರತಿಭಟನೆಗೆ ನೇತೃತ್ವ ನೀಡಿದರು. ಸುಬ್ರಹ್ಮಣ್ಯ ಭಟ್ ಆಟಿಕುಕ್ಕೆ ಸ್ವಾಗತಿಸಿದರು. ಗೋಪಾಲ ಸಪಲ್ಯ ವಂದಿಸಿದರು.
ಪ್ರತಿಭಟನೆಗೆ ಮುನ್ನ ಪೈವಳಿಕೆ ಗ್ರಾಮ ಕಚೇರಿ ಬಳಿಯಿಂದ ಮಹಿಳೆಯರ ಸಹಿತ ನೂರಾರು ಮಂದಿ ಕೋಳಿ ತ್ಯಾಜ್ಯ ಸಂಗ್ರಹ ಘಟಕಕ್ಕೆ ಒಪ್ಪಿಗೆ ನೀಡಿದ ಗ್ರಾ.ಪಂ. ಆಡಳಿತದ ವಿರುದ್ಧ ಘೋಷಣೆಯೊಂದಿಗೆ ಮೆರವಣಿಗೆ ನಡೆಸಿದರು.