ಬೆಂಗಳೂರು: ಕೋಮು ಸಂಘರ್ಷ ಹಾಗೂ ಹತ್ಯೆಯಂತಹ ಘಟನೆಗಳಿಗೆ ಕಾರಣವಾಗಿರುವ ಎಲ್ಲ ಸಂಘಟನೆಗಳನ್ನೂ ಕೇಂದ್ರ ಸರ್ಕಾರ ನಿಷೇಧಿಸಲಿ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ವಿಕಾಸಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯದಲ್ಲಿ 11 ಮಂದಿ ಆರ್‌ಎಸ್‌ಎಸ್, ಭಜರಂಗದಳ
ಕಾರ್ಯಕರ್ತರ ಹತ್ಯೆ ಹಾಗೂ ಆರು ಮಂದಿ ಪಿಎಫ್ಐ ಸಂಘಟನೆಯ ಕಾರ್ಯಕರ್ತರ ಹತ್ಯೆ ನಡೆದಿದೆ. ಇದಕ್ಕೆ ಎರಡೂ ಕಡೆಯ ವೈರತ್ವ ಕಾರಣ. ಹೀಗಾಗಿ, 17 ಮಂದಿ ಹತ್ಯೆಗೆ ಕಾರಣವಾಗಿರುವ ಸಂಘಟನೆಗಳನ್ನೆಲ್ಲಾ ನಿಷೇಧಿಸಬೇಕು. ಕೇಂದ್ರ ಸರ್ಕಾರಕ್ಕೆ ಯಾವುದೇ ಸಂಘಟನೆ ನಿಷೇಧಿಸುವ ಅಧಿಕಾರವಿದೆ ಎಂದರು. ಹತ್ಯೆ ಯಾರದೇ ಆದರೂ ಸಮರ್ಥನೀಯವಲ್ಲ. ಹೇಯ ಕೃತ್ಯ, ಖಂಡನೀಯ ಎಂದು ಹೇಳಿದರು.
ರಾಜ್ಯ ಸರ್ಕಾರ ದೀಪಕ್ ಹತ್ಯೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಆರೋಪಿಗಳನ್ನು ಬಂಧಿಸಲಾಗಿದ್ದು ತನಿಖೆ ನಡೆಯುತ್ತಿದೆ.
ಹತ್ಯೆಗೆ ಏನು ಕಾರಣ ಎಂಬುದು ಗೊತ್ತಾಗಲಿದೆ. ದೀಪಕ್‌ರಾವ್ ಭಜರಂಗದಳ ಕಾರ್ಯಕರ್ತನೇ? ಆರೋಪಿಗಳು ಪಿಎಫ್ಐ ಸಂಘಟನೆಗೆ ಸೇರಿದವರಾ ಎಂಬುದು ತನಿಖೆಯಲ್ಲಿ ಗೊತ್ತಾಗಲಿದೆ ಎಂದು ತಿಳಿಸಿದರು.
ಹತ್ಯೆಗೆ ಕುಮ್ಮಕ್ಕು ನೀಡುವ ಎಲ್ಲ ಸಂಘಟನೆಗಳೂ ನಿಷೇಧವಾಗಲಿ ದೀಪಕ್‌ರಾವ್ ಹತ್ಯೆ ಪ್ರಕರಣವನ್ನು ಎನ್‌ಐಎ ತನಿಖೆಗೆ ವಹಿಸಲು ನಮಗೇನೂ ಅಭ್ಯಂತರವಿಲ್ಲ. ನಮಗೆ ಸಿಬಿಐ ಮೇಲೂ ವಿಶ್ವಾಸವಿದೆ, ಎನ್‌ಐಎ ಮೇಲೂ ವಿಶ್ವಾಸವಿದೆ. ನಮ್ಮ ಪೊಲೀಸರ ಮೇಲೂ ವಿಶ್ವಾಸವಿದೆ.
– ರಾಮಲಿಂಗಾರೆಡ್ಡಿ, ಗೃಹ ಸಚಿವ