ಬೆಂಗಳೂರು: ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ವಕ್ಫ್ ನೋಟಿಸ್ ಹಿಂಪಡೆಯುವಂತೆ ಸೂಚಿಸಿದ ಅನಂತರವೂ ಬಿಜೆಪಿ ಪ್ರತಿಭಟನೆಗೆ ಮುಂದಾಗಿರುವುದು ಎಷ್ಟು ಸರಿ? ಇದು ರಾಜಕೀಯ ಪ್ರೇರಿತವಷ್ಟೇ. ಹಿಂದೆ ನೋಟಿಸ್ ಕೊಟ್ಟವರೇ ಇಂದು ಪ್ರತಿಭಟನೆ ನಡೆಸುತ್ತಿರುವುದು ವ್ಯಂಗ್ಯ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ಎಂ.ಬಿ. ಪಾಟೀಲ್, ರಾಮಲಿಂಗಾರೆಡ್ಡಿ, ಎಚ್.ಸಿ. ಮಹದೇವಪ್ಪ ವಿಪಕ್ಷ ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಸೋಮವಾರ ನಗರದ ವಿವಿಧೆಡೆ ಸುದ್ದಿಗಾರರೊಂದಿಗೆ ಪ್ರತ್ಯೇಕವಾಗಿ ಮಾತನಾಡಿದ ಸಚಿವರು, ಬಿಜೆಪಿ ನಡೆಯನ್ನು ತೀಕ್ಷ್ಣವಾಗಿ ಟೀಕಿಸಿದರು. ಈಗಿನ ವಕ್ಫ್ ವಿಚಾರದಲ್ಲಿ ರೈತರಿಗೆ ನೋಟಿಸ್ ಹೋಗುತ್ತಿರುವುದಕ್ಕೆ ಬಿಜೆಪಿ ನಾಯಕರೇ ಮೂಲಕಾರಣ. ಹಾಗೆ ನೋಡಿದರೆ ಆ ಸಮಸ್ಯೆಗೆ ಇತಿಶ್ರೀ ಹಾಡಿದ್ದೇ ಕಾಂಗ್ರೆಸ್ ಸರಕಾರ ಎಂದು ತಿಳಿಸಿದರು.
ಸದಾಶಿವನಗರದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಬಿಜೆಪಿ ನಾಯಕರು ಬಿಡುವಾಗಿದ್ದಾರೆ. ಇನ್ನೂ 3 ವರ್ಷಗಳ ಹಾಗೆಯೇ ಇರುತ್ತಾರೆ. ಆಮೇಲೂ ಅವರ ಸ್ಥಾನವೇನೂ ಬದಲಾಗುವುದಿಲ್ಲ. ಈಗ ತಮ್ಮ ಅಸ್ತಿತ್ವಕ್ಕಾಗಿ ಏನೇನೋ ಮಾಡುತ್ತಿದ್ದಾರೆ ಎಂದು ಮೂದಲಿಸಿದರು. ವಕ್ಫ್ ಆಸ್ತಿ ಅಂತ ನೋಟಿಸ್ ನೀಡುವುದಕ್ಕೆ ಸ್ವತಃ ಬಿಜೆಪಿಯೇ ಕಾರಣ.
ಹಿಂದೆ ಅವರು ಅಧಿಕಾರದಲ್ಲಿದ್ದಾಗಲೇ ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ನೋಟಿಸ್ ಕೊಟ್ಟಿದ್ದರು. ಈಗ ನಾವು ಅದಕ್ಕೆ ಇತಿಶ್ರೀ ಹಾಡಿದ್ದೇವೆ.ವಿಚಿತ್ರವೆಂದರೆ ಅವರೇ ಈಗ ಪ್ರತಿಭಟಿಸುತ್ತಿದ್ದಾರೆ. ಮಗುವನ್ನು ಚಿವುಟುತ್ತಾರೆ ಜತೆಗೆ ತೊಟ್ಟಿಲನ್ನೂ ತೂಗುತ್ತಿದ್ದಾರೆ. ಅವರ (ಬಿಜೆಪಿಯ) ತರಹ ನಾವು ಡಬಲ್ ಸ್ಟಾಂಡ್ ಅಲ್ಲ. ನಮ್ಮದು ಒಂದೇ ಮಾತು. ಅದರಂತೆ ನಾವು ನಡೆದುಕೊಳ್ಳುತ್ತೇವೆ ಎಂದರು.
ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಎಂ.ಬಿ. ಪಾಟೀಲ್ ಮಾತನಾಡಿ, ನಾವು ರೈತರ ಭೂಮಿ ವಾಪಸ್ ಪಡೆಯುವುದಿಲ್ಲ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹಿಂದಿನ ಭಾಷಣ ಕೇಳಿದ್ದೀರಾ? ಅಲ್ಲಾ ಕಾ ವಕ್ಫ್ ಭೂಮಿ ಅನ್ನುವುದು ಗೊತ್ತಿಲ್ಲವೇ? ಬಿಜೆಪಿ ಅವಧಿಯಲ್ಲೇ ವಕ್ಫ್ ಆಸ್ತಿ ಅಂತ ರೈತರಿಗೆ ನೋಟಿಸ್ ಹೋಗಿದೆ. ನಾವು ಬಹಳ ಸ್ಪಷ್ಟವಾಗಿ ಹೇಳಿದ್ದೇವೆ. ರೈತರ ಭೂಮಿ ಇದ್ದರೆ ಅವರಿಗೇ ಹೋಗುತ್ತದೆ. ಸರಕಾರದ್ದಾಗಿದ್ದರೆ ಸರಕಾರಕ್ಕೆ ಹೋಗುತ್ತದೆ. ಒಂದಿಂಚೂ ರೈತರ ಆಸ್ತಿ ವಕ್ಫ್ ಆಸ್ತಿ ಆಗುವುದಿಲ್ಲ ಎಂದು ಪುನರುಚ್ಚರಿಸಿದರು.
ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಮಾತನಾಡಿ, ವಕ್ಫ್ ವಿಚಾರದಲ್ಲಿ ಬಿಜೆಪಿ ಪ್ರತಿಭಟನೆ ರಾಜಕೀಯ ಪ್ರೇರಿತ. ಸ್ವತಃ ಮುಖ್ಯಮಂತ್ರಿ ನೋಟಿಸ್ ವಾಪಸ್ ಪಡೆಯುವಂತೆ ಸೂಚಿಸಿದ್ದಾರೆ. ಇದಾದ ಮೇಲೂ ಪ್ರತಿಭಟನೆ ಮಾಡುತ್ತಾರೆಂದರೆ ರಾಜಕಾರಣವಲ್ಲದೆ ಮತ್ತೇನು? ಎಂದು ಆಕ್ರೋಶ ವ್ಯಕ್ತಪಡಿಸಿದರು.
“ವಕ್ಫ್ ವಿಚಾರಕ್ಕೆ ಸಂಬಂಧಿಸಿ ಬಿಜೆಪಿಯವರು ಪ್ರತಿಭಟನೆ ಮಾಡುತ್ತಿಲ್ಲ; ರಾಜಕೀಯ ಮಾಡುತ್ತಿದ್ದಾರೆ ಅಷ್ಟೇ. ನೋಟಿಸ್ ವಾಪಸ್ ಪಡೆದುಕೊಳ್ಳುವಂತೆ ಈಗಾಗಲೇ ಸೂಚಿಸಲಾಗಿದೆ. ಆದಾಗ್ಯೂ ಪ್ರತಿಭಟನೆ ನಡೆಸುತ್ತಿರುವುದರಲ್ಲಿ ಅರ್ಥವೇ ಇಲ್ಲ.”
– ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ