ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಆಗುತ್ತಿರುವ ಅಭಿವೃದ್ಧಿ ಮತ್ತು ಡಬಲ್ ಎಂಜಿನ್ ಸರ್ಕಾರದ ಕಾರ್ಯವೈಖರಿ ಮೆಚ್ಚಿ ಕ್ಷೇತ್ರದ ವಿವಿಧ ಪಕ್ಷಗಳನ್ನು ತೊರೆದು ಬಿಜೆಪಿ ಸೇರುವವರ ಸಂಖ್ಯೆ ಹೆಚ್ಚುತ್ತಲೇ ಇದೆ ಎಂದು ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಹೇಳಿದರು.
ನಗರದ ತಮ್ಮ ಗೃಹ ಕಚೇರಿಯಲ್ಲಿ ಶನಿವಾರ ಕಾಂಗ್ರೆಸ್, ಜೆಡಿಎಸ್ ತೊರೆದು ಬಿಜೆಪಿ ಸೇರಿದ ಮುಖಂಡರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದರು.
ಚ್ಯುತಿ ಬರಲ್ಲ: ಕಳೆದ 10 ವರ್ಷಗಳಿಂದ ತಾವು ಕ್ಷೇತ್ರದ ಜನರ ಸೇವೆ ಮಾಡುತ್ತಿದ್ದು, ಇದನ್ನು ಮೆಚ್ಚಿ ಬರುವ ಮುಖಂಡರು, ಕಾರ್ಯಕರ್ತರಿಗೆ ಪಕ್ಷದಲ್ಲಿ ಯಾವುದೇ ಚ್ಯುತಿ ಬಾರದಂತೆ ನಡೆಸಿಕೊಳ್ಳುವುದಾಗಿ ಭರವಸೆ ನೀಡಿದರು.
ಅವಕಾಶ: ರಾಜಕಾರಣಿಯಾದವರಿಗೆ ಬದ್ಧತೆ ಮುಖ್ಯವಾಗಿದ್ದು, ಜಾತಿ, ಧರ್ಮಗಳಿಗೆ ಅತೀತ ವಾಗಿ ಎಲ್ಲಾ ವರ್ಗಗಳ ಶ್ರೇಯೋಭಿ ವೃದ್ಧಿಗಾಗಿ ಶ್ರಮಿಸಬೇಕು ಎಂಬ ತತ್ವದಡಿ ನಾನು ಕೆಲಸ ಮಾಡುತ್ತಿದ್ದೇನೆ. ಪಕ್ಷಕ್ಕೆ ಬರುವರಿಗೆ ಹೊಸಬರು, ಹಳಬರು ಎಂಬ ಯಾವುದೇ ಬೇಧವಿಲ್ಲದೆ ಎಲ್ಲರನ್ನೂ ಒಟ್ಟಾಗಿ ಕರೆದೊಯ್ಯ ಲಾಗುವುದು. ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸುವ ಮೂಲಕ ಸರ್ವರ ಶ್ರೇಯಸ್ಸಿಗಾಗಿ ಶ್ರಮಿಸುವುದಾಗಿ ಸಚಿವರು ಭರವಸೆ ನೀಡಿದರು.
ಅಭಿವೃದ್ಧಿಗೆ ಸಹಕಾರಿ: ಮುಸ್ಟೂರು ಗ್ರಾಪಂ ಮಾಜಿ ಸದಸ್ಯ ಶ್ರೀನಿವಾಸ್, ಮತ್ತಿತರರು ಮಾತನಾಡಿ, ಕ್ಷೇತ್ರದಲ್ಲಿ ಕಳೆದ 75 ವರ್ಷದಲ್ಲಿ ಆಗದ ಅಭಿವೃದ್ಧಿ ಸುಧಾಕರ್‌ರ ಹತ್ತು ವರ್ಷದ ಅವಧಿಯಲ್ಲಿ ಆಗಿದೆ. ಅವರೊಂದಿಗೆ ಮುನ್ನಡೆದರೆ ಅಭಿವೃದ್ಧಿಗೆ ಸಹಕಾರಿ ಆಗಲಿದೆ ಎಂಬ ಉದ್ದೇಶದಿಂದ ಅವರೊಂದಿಗೆ ಹೆಜ್ಜೆ ಹಾಕಲು ತೀರ್ಮಾನಿಸಿರುವುದಾಗಿ ಘೋಷಿಸಿದರು.